ಭಟ್ಕಳ: ಗುಜರಾತಿನ ಸೂರತ್‌ನಿಂದ ವಿಶೇಷ ರೈಲಿನಲ್ಲಿ ಸುಮಾರು1650 ಜನ ಯಾತ್ರಾರ್ಥಿಗಳು ಶನಿವಾರ ಸಂಜೆ ಮುರ್ಡೇಶ್ವರ ದೇವಸ್ಥಾನದ ದರ್ಶನಕ್ಕೆ ಬಂದಿದ್ದು ಅವರನ್ನು ರೈಲ್ವೇ ನಿಲ್ದಾಣದಲ್ಲಿ ರಮೇಶ ಹೆಗಡೆ ಚಿತ್ರಾಪುರ ಹಾಗೂ ಚೈತನ್ಯ ಪಂಡಿತ್ ಚಿತ್ರಾಪುರ ಇವರ ನೇತೃತ್ವದಲ್ಲಿ ಸ್ವಾಗತ ಕೋರಲಾಯಿತು.
ಗುಜರಾತಿನ ಐಶಾ ಕ್ರಿಯೇಶನ್ಸ್ ಪ್ರೈವೆಟ್ ಲಿಮಿಟೆಡ್‌ನ ಪ್ರಮುಖರಾದ ಸೋನು ಭಾಯ್ ಅವರ ನೇತೃತ್ವದಲ್ಲಿ ನವದುರ್ಗಾ ಸೇವಾ ಸಮಿತಿ ಸೂರತ್ ಇದರ ಸದಸ್ಯರುಗಳು ವಿಶೇಷ ರೈಲನ್ನು ಮಾಡಿಕೊಂಡು ಪ್ರವಾಸಕ್ಕೆ ಬಂದಿದ್ದು ಗುಜರಾತಿನಿಂದ ತಿರುಪತಿ, ರಾಮೇಶ್ವರಮ್, ಮಧುರೈ, ಕನ್ಯಾಕುಮಾರಿಯಾಗಿ ಕರ್ನಾಟಕದ ಬೇರೆ ಬೇರೆ ಸ್ಥಳಗಳನ್ನ ಸಂದರ್ಶಿಸಿ ಶನಿವಾರ ಮುರ್ಡೇಶ್ವರಕ್ಕೆ ಆಗಮಿಸಿದ್ದರು. ಮುರ್ಡೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನವನ್ನು ಪಡೆದು ಸುಮಾರು ರಾತ್ರಿ 9 ಗಂಟೆಗೆ ಇವರು ಬಂದಿದ್ದ ರೈಲು ವಾಪಾಸಾಗಲಿದ್ದು ಪುನಃ ಗುಜರಾತನ್ನು ತಲುಪಲಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸೋನು ಭಾಯ್ ಅವರು ಗುಜರಾತಿನಿಂದ ಹೊರಟ ತಮ್ಮ ಯಾತ್ರೆಯು ಅತ್ಯಂತ ಯಶಸ್ವಿಯಾಗಿ ನಡೆದಿದೆ. ನಾವು ಸುಮಾರು 1650 ಜನರು ಸಮಾಜ ಮನಸ್ಕರು ಯಾತ್ರೆ ಮಾಡುವ ಸಲುವಾಗಿಯೇ ವಿಶೇಷ ರೈಲನ್ನು ಮಾಡಿಕೊಂಡು ಬಂದಿದ್ದು ಅತ್ಯಂತ ಉತ್ತಮ ವ್ಯವಸ್ಥೆಯನ್ನು ರೈಲ್ವೇ ಇಲಾಖೆ ಮಾಡಿದೆ. ಎಲ್ಲಾ ಕಡೆಗಳಲ್ಲಿಯೂ ಕೂಡಾ ಮೊದಲೇ ವ್ಯವಸ್ಥೆ ಮಾಡಿದಂತೆ ದೇವರ ದರ್ಶನ ಹಾಗೂ ಪ್ರಕೃತಿ ವೀಕ್ಷಣೆಗೆ ಅವಕಾಶವನ್ನು ನೀಡಲಾಗಿತ್ತು. ಮುರ್ಡೇಶ್ವರದಲ್ಲಿಯೂ ಕೂಡಾ ಉತ್ತಮವಾಗಿ ದೇವರ ದರ್ಶನವಾಗಿದ್ದು ಅತ್ಯಂತ ಸುಂದರವಾದ ಪರಿಸರವನ್ನು ನೋಡಿ ಸಂತಸಪಟ್ಟಿದ್ದೇವೆ. ಇಲ್ಲಿನ ದೇವಾಲಯದ ಸ್ವಚ್ಚತೆ ಹಾಗೂ ಹಿಂಬದಿಯಲ್ಲಿರು ಪರಿಸರ, ಸಮುದ್ರದ ಆರ್ಭಟ ಮನಸೂರೆಗೊಳ್ಳುವಂತಿದೆ ಎಂದ ಅವರು ಬೃಹತ್ ಶಿವನ ಪ್ರತಿಮೆ, ಅತಿ ಎತ್ತರದ ಗೋಪುರ ಜನರನ್ನು ಆಕರ್ಶಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಪುರಾಣ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಮುರ್ಡೇಶ್ವರ ಪ್ರಸಿದ್ಧ ಪ್ರವಾಸೀ ತಾಣವೂ ಆಗಿರುವುದರಿಂದ ದೂರದ ಗುಜರಾತಿನಿಂದ ಬಂದಿದ್ದ ಎಲ್ಲರೂ ಸಂತಸಪಟ್ಟರು ಎಂದರು. ಈ ಸಂದರ್ಭದಲ್ಲಿ ಗುಜರಾತಿನಿಂದ ಅವರೊಂದಿಗೆ ಬಂದಿದ್ದ ಯಾತ್ರಾರ್ಥಿಗಳು, ಸ್ಥಳೀಯರಾದ ರಮೇಶ ಹೆಗಡೆ, ಚೈತನ್ಯ ಚಿತ್ರಾಪುರ, ರಿಕ್ಷಾ ಯೂನಿಯನ್ ಅಧ್ಯಕ್ಷ ಸತೀಶ ನಾಯ್ಕ ಸೇರಿದಂತೆ ನಾಗರಿಕರು ಉಪಸ್ಥಿತರಿದ್ದರು.