ಮಂಗಳೂರು: ತಂಗಿಯನ್ನು ಪ್ರೀತಿಸುತ್ತಿದ್ದ ಯುವಕನೋರ್ವನನ್ನು ಆಕೆಯ ಸಹೋದರ ತನ್ನ ಸಹಚರರೊಂದಿಗೆ ಕೊಚ್ಚಿ ಕೊಲೆ ಮಾಡಿರುವ ಘಟನೆ ಕಾವೂರು ಬಳಿಯ ಪಂಜಿಮೊಗರಿನ ಮಾಲಾಡಿಯಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.
ಉರುಂದಾಡಿಗುಡ್ಡೆ ನಿವಾಸಿ ರಾಕೇಶ್(26) ಕೊಲೆಯಾಗಿದ್ದು, ಆರೋಪಿಗಳಾದ ಪಂಜಿಮೊಗರು ನಿವಾಸಿ ಸುನಿಲ್ ಹಾಗೂ ಇತರರು ಪರಾರಿಯಾಗಿದ್ದಾರೆ.
ರಾಕೇಶ್ ತಂದೆಯೊಂದಿಗೆ ಸ್ಟೀಲ್ ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದು, ಸುನೀಲ್ನ ತಂಗಿಯನ್ನು ಕೆಲವು ಸಮಯಗಳಿಂದ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಸುನೀಲ್ ಪ್ರಕರಣವೊಂದರಲ್ಲಿ ಜೈಲಿನಲ್ಲಿದ್ದಾಗ ರಾಕೇಶ್ ನಿತ್ಯ ಮನೆಗೆ ಬರುತ್ತಿದ್ದ. ರಾಕೇಶ್ ತನ್ನ ತಂಗಿಯನ್ನು ಪ್ರೀತಿಸುತ್ತಿರುವ ವಿಚಾರ ಸುನಿಲ್ ಗಮನಕ್ಕೆ ಬಂದು ಆತನಿಗೆ ಫೋನ್ ಮೂಲಕ ಬೆದರಿಕೆ ಕೂಡ ಹಾಕಿದ್ದ.
ರಾಕೇಶ್‌ನ ಮೊಬೈಲಿಗೆ ಗುರುವಾರ ರಾತ್ರಿ ಮತ್ತೆ ಕರೆ ಮಾಡಿದ್ದ ಆರೋಪಿ ಸುನಿಲ್, ಪ್ರಮುಖ ವಿಚಾರದ ಬಗ್ಗೆ ಚರ್ಚಿಸಲಿಕ್ಕಿದ್ದು, ಪಂಜಿ ಮೊಗರಿಗೆ ಬರುವಂತೆ ಹೇಳಿದ್ದ. ರಾಕೇಶ್ ಸ್ಕೂಟರ್‌ನಲ್ಲಿ ಮಾಲಾಡಿ ರೋಡ್‌ಗೆ ತಲುಪಿದಾಗ ಸುನೀಲ್ ಹಾಗೂ ಇತ ರರು ಆತನನ್ನು ಅಡ್ಡಗಟ್ಟಿದ್ದಾರೆ. ಬಳಿಕ ಸುನಿಲ್ ತಂಗಿಯ ಪ್ರೀತಿಯ ವಿಚಾರದಲ್ಲಿ ಜಗಳವಾಗಿ ಮಾರಕಾಯುಧಗಳಿಂದ ಮೇಲೆ ಹಲ್ಲೆ ಮಾಡಿದ್ದು, ರಾಕೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೂಡಲೇ ಕಾರ್ಯಪ್ರವೃತ್ತರಾಗಿರುವ ಕಾವೂರು ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸ್ ಆಯುಕ್ತ ಟಿ. ಆರ್. ಸುರೇಶ್, ಡಿಸಿಪಿ ಉಮಾ ಪ್ರಶಾಂತ್, ಕಾವೂರು ಇನ್‌ಸ್ಪೆಕ್ಟರ್ ಕೆ.ಆರ್.ನಾಯಕ್, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜತೆಯಾಗಿದ್ದವರು ಈಗ ದೂರವಾಗಿದ್ದರು
ಸುನೀಲ್ ಮತ್ತು ರಾಕೇಶ್ ಗೆಳೆಯರಾಗಿದ್ದು, ಹಿಂದೆ ಒಂದೇ ತಂಡದಲ್ಲಿದ್ದು ಬಳಿಕ ದೂರವಾಗಿದ್ದರು. ರಾಕೇಶ್ ಮೇಲೆ 2016ರಲ್ಲಿ ಕಾವೂರು ಮತ್ತು 2017ರಲ್ಲಿ ಬೆಂಗಳೂರಿನ ಕೋರಮಂಗಲದಲ್ಲಿ ಗಾಂಜಾ ಮಾರಾಟ ಆರೋಪದ ಪ್ರಕರಣವಿದ್ದು, ಆ ಸಂಬಂಧ ಜೈಲಿನಲ್ಲಿದ್ದ. ಸುನೀಲ್ ಮೇಲೂ ಹಲವು ಪ್ರಕರಣಗಳಿದ್ದು, ಆತ ಕೂಡ ಸೆರೆವಾಸ ಅನುಭವಿಸಿ ಇತ್ತೀಚೆಗೆ ಜಾಮೀನು ಮೇಲೆ ಬಿಡುಗಡೆಗೊಂಡಿದ್ದ.