ಬೆಳಗಾವಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮಹಿಳೆಯನ್ನು ಕೊಲೆ ಮಾಡಿ ನಿಪ್ಪಾಣಿಯಲ್ಲಿ ಹೂತು ಹಾಕಿರುವ ಪ್ರಕರಣ ಎರಡು ತಿಂಗಳ ಬಳಿಕ ಮೊಬೈಲ್ ಆನ್ ಆಗುತ್ತಿದ್ದಂತೆ ಬೆಳಕಿಗೆ ಬಂದಿದ್ದು, ನಿಪ್ಪಾಣಿಯ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮಹಾರಾಷ್ಟ್ರದ ಕಾಗಲ ತಾಲೂಕಿನ ಗೋರಂಬೆಯ ಗೀತಾ ಸಾಗರ ಶಿರಗಾವೆ(34) ಎಂಬ ಮಹಿಳೆಯ ಮೃತದೇಹವನ್ನು ಕಬ್ಬಿನ ಹೊಲದಲ್ಲಿ ಹೂತು ಹಾಕಲಾಗಿತ್ತು. ಶುಕ್ರವಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದ್ದಾರೆ. ಇದನ್ನು ಸುಪಾರಿ ಕೊಲೆ ಎಂದು ಶಂಕಿಸಲಾಗಿದೆ.
ಘಟನೆ ಹಿನ್ನೆಲೆ ಏನು?: ಗೋರಂಬೆಯ ಗೀತಾ ಎಂಬ ಮಹಿಳೆಯನ್ನು ಕರವೀರ ತಾಲೂಕಿನ ಕೋಗೆ ಎಂಬ ಗ್ರಾಮದ ವ್ಯಕ್ತಿಯೊಂದಿಗೆ 18 ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಈಕೆಗೆ ಪುತ್ರ, ಪುತ್ರಿ ಇದ್ದಾರೆ. ಕಳೆದ ಅನೇಕ ವರ್ಷಗಳಿಂದ ಗೋರಂಬೆಯ ಸಾಗರ ಹಾಗೂ ಗೀತಾ ಪ್ರೀತಿಸುತ್ತಿದ್ದರು. ಆರು ತಿಂಗಳ ಹಿಂದೆಯಷ್ಟೇ ಗೀತಾ ಪತಿ ಮತ್ತು ಮಕ್ಕಳನ್ನು ಬಿಟ್ಟು ಸಾಗರನೊಂದಿಗೆ ನರಸಿಂಹವಾಡಿಯಲ್ಲಿ ಪ್ರೇಮ ವಿವಾಹ ಮಾಡಿಕೊಂಡಿದ್ದಳು. ಸಾಗರನಿಗೂ ಈ ಮೊದಲು ವಿವಾಹವಾಗಿತ್ತು.
ಇದನ್ನೂ ಓದಿ : ಅಮೀನಗಡ ಸರ್ಕಾರಿ ಆಸ್ಪತ್ರೆಗಿಲ್ಲ ಖಾಯಂ ವೈದ್ಯರು! ಇಲ್ಲಿಗೆ ಬಂದರೆ ನೀಡುತ್ತಾರೆ ಬರಿ ಮಾತ್ರೆ
ಗೀತಾ ಹಾಗೂ ಸಾಗರ ವಿವಾಹ ಬಳಿಕ ಇಬ್ಬರಲ್ಲಿಯೂ ಕೌಟುಂಬಿಕ ಕಲಹ ಇತ್ತು. ಆಗಾಗ ಸಣ್ಣ ಪುಟ್ಟ ವಿಷಯಕ್ಕೆ ಇಬ್ಬರೂ ಜಗಳವಾಡುತ್ತಿದ್ದರು. ಎರಡು ತಿಂಗಳ ಹಿಂದೆ ರಾತ್ರಿ ಹೊತ್ತಿನಲ್ಲಿ ಗೀತಾ ನಾಪತ್ತೆ ಆಗಿರುವುದಾಗಿ ಪತಿ ಸಾಗರ ದೂರು ನೀಡಿದ್ದನು. ಆದರೆ ಎಲ್ಲ ಕಡೆ ಹುಡುಕಾಡಿದರೂ ಗೀತಾ ಪತ್ತೆ ಆಗಿರಲಿಲ್ಲ. ಖಚಿತ ಮಾಹಿತಿ ಮೇರೆಗೆ ಕಾಗಲ್ ಪೊಲೀಸರಿಗೆ ಎರಡು ತಿಂಗಳ ಬಳಿಕ ನಿಪ್ಪಾಣಿಯಲ್ಲಿ ಮಹಿಳೆಯ ಮೃತದೇಹ ಇರುವುದು ಗೊತ್ತಾಗಿದೆ. ಅದರಂತೆ ನಿಪ್ಪಾಣಿಯ ಜತ್ರಾಟ ಸಮೀಪದ ಹೊಲದಲ್ಲಿ ಮೃತದೇಹ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 32 ಹಾಗೂ 22 ವರ್ಷದ ಇಬ್ಬರನ್ನು ವಶಪಡಿಸಿಕೊಂಡು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಲಾಕ್‌ಡೌನ್ ವೇಳೆ ಕೆಲಸ ಇಲ್ಲದ್ದಕ್ಕೆ ಹೊಲದಲ್ಲಿ ಗೊಬ್ಬರ ಹಾಕುವ ನೆಪ ಮಾಡಿಕೊಂಡು ಆರೋಪಿಗಳು ಹೊಲದ ಮಾಲೀಕನ ಬಳಿ ಹೋಗಿದ್ದಾರೆ. ಅದರಂತೆ ಗೊಬ್ಬರ ಹಾಕುವ ನೆಪದಲ್ಲಿ ಮೃತದೇಹವನ್ನು ಇದೇ ಹೊಲದಲ್ಲಿ ಹೂತು ಹಾಕಿದ್ದಾರೆ ಎಂದು ತಿಳಿದು ಬಂದಿದೆ
ಇದನ್ನೂ ಓದಿ :ಕೆ.ಎಲ್.ರಾಹುಲ್ ಭವಿಷ್ಯದಲ್ಲಿ ಭಾರತ ತಂಡದ ಕ್ಯಾಪ್ಟನ್ ಆಗಬಹುದು : ಗಾವಸ್ಕರ್
ಮೊಬೈಲ್ ಮಾರಿದ್ದ ಆರೋಪಿಗಳು
ಮೃತ ಮಹಿಳೆ ಗೀತಾ ಬಳಿ ಇದ್ದ ಮೊಬೆ„ಲ್ ಅನ್ನು ಆರೋಪಿಗಳು ತೆಗೆದು ಕೊಂಡಿದ್ದರು. ಅನೇಕ ದಿನಗಳ ಕಾಲ ಈ ಮೊಬೆ„ಲ್ ಬಂದ್ ಆಗಿತ್ತು. ನಂತರ ನಿಪ್ಪಾಣಿ ಪಟ್ಟಣದ ಮೊಬೆ„ಲ್ ಅಂಗಡಿಯವನಿಗೆ ಅದನ್ನು ಮಾರಾಟ ಮಾಡಿದ್ದರು. ಈ ಅಂಗಡಿಯವ ಬೇರೆ ಗ್ರಾಹಕನಿಗೆ ಆ ಫೋನ್ ಮಾರಾಟ ಮಾಡಿದ್ದನು. ಗ್ರಾಹಕ ಮೊಬೆ„ಲ್ ಆನ್ ಮಾಡಿದಾಗ ಮೊಬೈಲ್ ಕೋಡ್ ಆಧಾರದ ಮೇಲೆ ಕಾಗಲ್ ಪೊಲೀಸರು ಮಾಹಿತಿ ಪಡೆದು ಗ್ರಾಹಕನ ಬಳಿ ಬಂದು ವಿಚಾರಣೆ ನಡೆಸಿದಾಗ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ.