ಮಂಗಳೂರು: ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಯಾರುಪದವಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ ಮಹಮ್ಮದ್ ಸಾಜಿದ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಫರಂಗಿಪೇಟೆ ಅರ್ಕುಳ ನಿತಿನ್ ಪೂಜಾರಿ (21), ಅಡ್ಯಾರ್ ಕಟ್ಟೆ ಕೆಂಜೂರು ಮನೆ ಪ್ರಾಣೇಶ್ ಪೂಜಾರಿ (20), ಪಡೀಲ…ನ ಅಳಪೆ ಕಂಡೇವಿನ ಕಿಶನ್ ಪೂಜಾರಿ (21) ಬಂಧಿತ ಆರೋಪಿಗಳು. ನಿತಿನ್, ಪ್ರಾಣೇಶ್ ಎಲೆಕ್ಟ್ರಿಶಿಯನ್ ಹಾಗೂ ಕಿಶನ್ ಕಾಪೆìಂಟರ್ ಕೆಲಸ ಮಾಡುತ್ತಿದ್ದರು. ಇವರ ಪೈಕಿ ನಿತಿನ್ ಪೂಜಾರಿ ಹಾಗೂ ಪ್ರಾಣೇಶ್ ವಿರುದ್ಧ ಈಗಾಗಲೇ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳಿವೆ. ಸಾಜಿದ್ ಕೊಲೆಯತ್ನ ಪ್ರಕರಣದಲ್ಲಿ ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ್ದರು ಎನ್ನಲಾದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಪೊಲೀಸ್ ಕಮೀಷನರ್ ಟಿ. ಆರ್. ಸುರೇಶ್ ಅವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ, ಕೆ.ಎಂ. ಶಾಂತರಾಜು ಮತ್ತು ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಹನುಮಂತರಾಯ ಮತ್ತು ಸಿಸಿಆರ್‌ಬಿ ಎಸಿಪಿ ವೆಲೆಂಟೈನ್ ಡಿ’ ಸೋಜಾ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಇನ್ಸ್‌ಪೆಕ್ಟರ್ ಸುನೀಲ… ವೈ. ನಾಯ್ಕ… ಮತ್ತು ಪಿ.ಎಸ್.ಐ ಶ್ಯಾಮ… ಸುಂದರ್ ಹಾಗೂ ಸಿಬಂದಿ ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.
ಪ್ರಕರಣದ ಹಿನ್ನೆಲೆ: ಜು. 7ರಂದು ಬಿತ್ತುಪಾದೆಯ ನೌಷಾದ್‌ನೊಂದಿಗೆ ಆತನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಕೇರಳದ ಮಲಪುರಂ ನಿವಾಸಿ ಮಹಮ್ಮದ್ ಸಜೀದ್‌ನೊಂದಿಗೆ ಅಡ್ಯಾರ್‌ನಲ್ಲಿ ಚಹಾ ಕುಡಿದು ಸಂಜೆ ಸುಮಾರು 4.15ಕ್ಕೆ ಬಿತ್ತುಪಾದೆಯತ್ತ ಬೈಕ್‌ನಲ್ಲಿ ಹಿಂದಿರುಗುತ್ತಿದ್ದರು. ಅಡ್ಯಾರ್ ಪದವಿನಿಂದ ಸ್ವಲ್ಪ ಹಿಂದೆ ರಸ್ತೆ ಬದಿಯಲ್ಲಿ ಮೂವರು ಯುವಕರು ನೌಷಾದ್ ಹಾಗೂ ಸಾಜಿದ್‌ನನ್ನು ನಿಲ್ಲಿಸಿ, ತಾವು ಬಂದಿದ್ದ ಸ್ಕೂಟರ್ ಸ್ಟಾರ್ಟ್ ಆಗುವುದಿಲ್ಲ ಎಂದು ಹೇಳಿ ಅವರ ಬಳಿಗೆ ಬಂದಿದ್ದರು.
ಬಳಿಕ ಅವರ ಪೈಕಿ ಒಬ್ಟಾತನು ನೌಷಾದ್‌ಗೆ ಮಾರಕಾಸ್ತ್ರದಿಂದ ಹೊಡೆಯಲು ಪ್ರಯತ್ನಿಸಿದ್ದನು. ಆಗ ಆತ ತಪ್ಪಿಸಿಕೊಂಡಾಗ ಜತೆಯಲ್ಲಿದ್ದ ಸಜೀದ್‌ನ ಕೈಗೆ ಹಾಗೂ ಬೆನ್ನಿಗೆ ಬಲಭಾಗಕ್ಕೆ ತಲವಾರಿನಿಂದ ಕಡಿದು ತೀವ್ರ ತರಹದ ಗಾಯವುಂಟು ಮಾಡಿ ಕೊಲೆಗೆ ಪ್ರಯತ್ನಿಸಿದ್ದರು.
ಅನಂತರ ಅಲ್ಲಿಂದ ದ್ವಿಚಕ್ರ ವಾಹನದಲ್ಲಿ ಆರೋಪಿಗಳು ಪರಾರಿಯಾಗಿದ್ದರು. ಆರೋಪಿಗಳ ಕೈಯಿಂದ ಅವರು ತಪ್ಪಿಸಿಕೊಂಡ ಅನಂತರ ಗಾಯಾಳು ಸಾಋಇದ್‌ನನ್ನು ಮಂಗಳೂರು ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಪ್ರಾಣಾಪಾಯದಿಂದ ಪಾರಾಗಿರುವ ಸಾಜೀದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.