ಚಂಡೀಗಢ : ರೇವಾರಿ ಜಿಲ್ಲೆಯಲ್ಲಿ ಕೊಲೆ ಆರೊಪಿ ಓರ್ವ ಹರಿಯಾಣ ಪೊಲೀಸ್ ಎಸ್‌ಐ ಓರ್ವರನ್ನು ಗುಂಡಿಕ್ಕಿ ಸಾಯಿಸಿರುವುದಾಗಿ ಅಧಿಕೃತ ವಕ್ತಾರ ತಿಳಿಸಿದ್ದಾರೆ.
ಕೊಲೆ ಆರೋಪಿ ನರೇಶ್ ನನ್ನು ಬಂಧಿಸಲು 49ರ ಹರೆಯದ ಪೊಲೀಸ್ ಅಧಿಕಾರಿ ರಣಬೀರ್ ಸಿಂಗ್ ಹೋಗಿದ್ದಾಗ ಆತ ಎಸ್‌ಐ ಮೇಲೆ ಗುಂಡಿನ ದಾಳಿ ನಡೆಸಿ ಅವರನ್ನು ಕೊಂದನೆಂದು ವಕ್ತಾರ ತಿಳಿಸಿದ್ದಾರೆ.
ರಾಜಸ್ಥಾನದ ಗಡಿ ಸಮೀಪದ ಧರುಹೇರಾ-ಭಿವಾಡಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ತೀವ್ರ ಗುಂಡೇಟಿಗೆ ಗುರಿಯಾಗಿದ್ದ ಎಸ್‌ಐ ಸಿಂಗ್ ಅವರನ್ನು ಆಸ್ಪತ್ರೆಗೆ ಒಯ್ಯಲಾಯಿತಾದರೂ ಅದಾಗಲೇ ಅವರು ಮೃಪಟ್ಟಿದ್ದುದಾಗಿ ವೈದ್ಯರು ಪ್ರಕಟಿಸಿದರು.
ಎರಡು ವಾರಗಳ ಹಿಂದಷ್ಟೆ ಕೊಲೆ ಆರೋಪಿ ನರೇಶ್ ದಿಲ್ಲಿ-ಜೈಪುರ ಹೈವೇಯಲ್ಲಿನ ಹೊಟೇಲ್ ಮಾಲಕರೋರ್ವರನ್ನು ಕೊಂದಿದ್ದ; ಮಾತ್ರವಲ್ಲದೆ ಇನ್ನೂ ಅನೇಕ ಕೊಲೆ ಮತ್ತು ಕೊಲೆ ಯತ್ನದ ಕೇಸುಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಎಂದು ವಕ್ತಾರ ತಿಳಿಸಿದ್ದಾರೆ.
ಮೃತ ಎಸ್‌ಐ ಅವರ ಕುಟುಂಬಕ್ಕೆ ಮಧ್ಯಾವಧಿ ಪರಿಹಾರವಾಗಿ 30 ಲಕ್ಷ ರೂ. ಘೋಷಿಸಲಾಗಿದೆ. ಇದಲ್ಲದೆ ಕರ್ತವ್ಯದ ಮೇಲೆ ಮೃತಪಟ್ಟರೆ ಸಿಗುವ ವಿಮಾ ಪರಿಹಾರವಾಗಿ ಇನ್ನೂ 30 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ವಕ್ತಾರ ತಿಳಿಸಿದ್ದಾರೆ.