ಲಕ್ನೋ: ಕೊಲೆ ಆರೋಪದಲ್ಲಿ ಬಂಧಿತನಾಗಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ವ್ಯಕ್ತಿಯೊಬ್ಬ ತನ್ನ ಮಗಳ ಹುಟ್ಟುಹಬ್ಬ ಆಚರಣೆಗೆಂದು ಮಕ್ಕಳನ್ನು ಮತ್ತು ಮಹಿಳೆಯರನ್ನು ತನ್ನ ಮನೆಗೆ ಆಹ್ವಾನಿಸಿ ಬಳಿಕ ಅವರನ್ನೀಗ ಒತ್ತೆಸೆರೆಯಾಳುಗಳನ್ನಾಗಿರಿಸಿಕೊಂಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಫಾರೂಖಾಬಾದ್ ನಿಂದ ವರದಿಯಾಗಿದೆ.
ಇಲ್ಲಿನ ಮಹಮ್ಮದಾಬಾದ್ ನಲ್ಲಿರುವ ಕಥಾರಿಯಾ ಎಂಬ ಗ್ರಾಮದಲ್ಲಿ ಕೊಲೆ ಆಪಾದಿತ ಸುಭಾಷ್ ಗೌತಮ್ ಎಂಬ ವ್ಯಕ್ತಿಯೇ ಈ ಕೃತ್ಯ ಎಸಗಿರುವವನಾಗಿದ್ದಾನೆ. ಸುಭಾಷ್ ಸುಮಾರು 20 ಮಕ್ಕಳನ್ನು ಹಾಗೂ ಕೆಲ ಮಹಿಳೆಯರನ್ನು ಕಳೆದ ಐದು ಗಂಟೆಗಳಿಂದ ತನ್ನ ಮನೆಯೊಳಗೆ ಒತ್ತಸೆರೆ ಇರಿಸಿಕೊಂಡಿದ್ದಾನೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಭಾಷ್ ಗೌತಮ್ ಜೀವಾವಧಿ ಶಿಕ್ಷೆಗೊಳಗಾಗಿದ್ದ ಮತ್ತು ಇತ್ತೀಚೆಗಷ್ಟೇ ಈತ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.
ಒತ್ತೆಸೆರೆ ವಿಷಯ ತಿಳಿದು ಮಕ್ಕಳನ್ನು ಮತ್ತು ಮಹಿಳೆಯರನ್ನು ರಕ್ಷಿಸಲೆಂದು ಕೊಲೆಗಡುಕನ ಮನೆಯತ್ತ ತೆರಳಿದ ಗ್ರಾಮಸ್ಥರಿಗೆ ಪಾನಮತ್ತನಾಗಿರುವ ಸುಭಾಷ್ ಗೌತಮ್ ಬೆದರಿಕೆಯೊಡ್ಡಿರುವ ಮತ್ತು ತನ್ನ ಬಳಿ ಮಾತುಕತೆಗೆಂದು ಆಗಮಿಸಿದ ಸತೀಶ್ ಚಂದ್ರ ದುಬೆ ಎಂಬ ಗ್ರಾಮಸ್ಥನ ಮೇಲೆ ಸುಭಾಷ್ ಗುಂಡು ಹಾರಿಸಿರುವ ಘಟನೆಯೂ ವರದಿಯಾಗಿದೆ. ಸುಭಾಷ್ ಹಾರಿಸಿದ ಗುಂಡು ಸತೀಶ್ ಅವರ ಕಾಲಿಗೆ ತಗಲಿದ್ದು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಗಳೂ ಸಹ ಗಾಯಗೊಂಡಿರುವ ಮಾಹಿತಿ ಲಭ್ಯವಾಗಿದೆ.
ಘಟನೆಯ ಗಂಭೀರತೆಯ ಮಾಹಿತಿ ಪಡೆದ ಸ್ಥಳೀಯ ಎಸ್.ಪಿ. ಮತ್ತು ಎ.ಎಸ್.ಪಿ. ಅವರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಲ್ಲಿನ ಜಿಲ್ಲಾಧಿಕಾರಿ ಹಾಗೂ ಎಸ್.ಪಿ.ಯವರೊಂದಿಗೆ ಮಾತನಾಡಿ ಘಟನೆಯ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಕ್ಷಿಪ್ರ ಕಾರ್ಯಾಚರಣಾ ಪಡೆ ಮತ್ತು ವಿಶೇಷ ಕಾರ್ಯಾಚರಣಾ ಪಡೆಗಳು ಈಗಾಗಲೇ ಸ್ಥಳದಲ್ಲಿ ಬೀಡುಬಿಟ್ಟಿದ್ದು ಭಯೋತ್ಪಾದನಾ ನಿಗ್ರಹ ದಳವೂ ಸಹ ಘಟನಾ ಸ್ಥಳಕ್ಕೆ ದೌಡಾಯಿಸುತ್ತಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿ ಪಿ.ವಿ. ರಮಾಶಾಸ್ತ್ರಿ ಅವರು ಮಾಹಿತಿ ನೀಡಿದ್ದಾರೆ.