Advertisement

ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಿ

05:12 PM Feb 18, 2021 | Team Udayavani |

ತುಮಕೂರು: ಬೇಸಿಗೆ ಆರಂಭಕ್ಕೂ ಮುನ್ನವೇ ಜಿಲ್ಲೆಯಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆ, ತುಮಕೂರು ನಗರದಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿಗಳಿಂದ ಜನರಿಗೆ ಉಂಟಾಗುತ್ತಿರುವ ಕಿರಿಕಿರಿ ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ಹೊತ್ತು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಮುರಳೀಧರ ಹಾಲಪ್ಪ ಮತ್ತು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌. ರಾಮಕೃಷ್ಣ ಜಿಲ್ಲಾಧಿಕಾರಿಗಳ ಕಚೇರಿಗೆ ನಿಯೋಗದಲ್ಲಿ ತೆರಳಿ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಮುರಳೀಧರ ಹಾಲಪ್ಪ, ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕು, ಯಾವ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬುದನ್ನು ಗ್ರಾಪಂ ಪಿಡಿಒಗಳ ಮೂಲಕ ವರದಿ ತರಿಸಿಕೊಂಡು ಆ ಪಂಚಾಯ್ತಿ ವ್ಯಾಪ್ತಿಯಲ್ಲಿ ಬೋರ್‌ ವೆಲ್‌ ಕೊರೆಸಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕ್ರಮ ಕೈಗೊಳ್ಳಬೇಕು, ಬೋರ್‌ವೆಲ್‌ ವಿಫ‌ಲವಾದರೆ ಟ್ಯಾಂಕರ್‌ ಮೂಲಕವಾದರೂ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸೂಕ್ತ ಪರಿಹಾರ ನೀಡಬೇಕು: ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಕುರಿಗಳಿಗೆ ವಿಚಿತ್ರ ರೋಗ ಕಾಣಿಸಿಕೊಂಡು ಕುರಿಗಳು ಸಾವನ್ನಪ್ಪುತ್ತಿವೆ. ನಟ್ಟೆಬೀಜ ತಿಂದು ಸಾವನ್ನಪ್ಪುತ್ತಿವೆಯೋ ಅಥವಾ ಬೇರೆ  ರೋಗ ಏನಾದರೂ ಕಾಣಿಸಿಕೊಂಡಿದೆಯೋ ಎಂಬುದರ ಬಗ್ಗೆ ಪಶು ಇಲಾಖೆ ಗಂಭೀರವಾಗಿ ಪರಿಗಣಿಸಿ, ಸೂಕ್ತ ಚಿಕಿತ್ಸೆ ನೀಡಬೇಕಿರುವ ಪಶು ವೈದ್ಯಾಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಬಗ್ಗೆ ಕುರಿಗಾಹಿಗಳ ಆರೋಪ ವಾಗಿದೆ. ಜೊತೆಗೆ ಸಣ್ಣಕುರಿ ಸತ್ತರೆ 2500 ಹಾಗೂ ದೊಡ್ಡ ಕುರಿ ಸತ್ತರೆ 5 ಸಾವಿರ ಪರಿಹಾರ ನೀಡಬೇಕು, ಈಗ ಪರಿಹಾರವೂ ಸ್ಥಗಿತಗೊಂಡಿದೆ ಎಂದು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಜಿಲ್ಲಾಧಿಕಾರಿ ಭರವಸೆ: ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ್‌ ಮಾತನಾಡಿ, ಈ ಬಗ್ಗೆ ಪಶು ಇಲಾಖೆ ಉಪನಿರ್ದೇಶಕರನ್ನು ಕಚೇರಿಗೆ ಕರೆಸಿ ಸಮಗ್ರ ಮಾಹಿತಿ ತರಿಸಿಕೊಂಡು ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು.

ರೈತರಿಗೆ ಸೂಕ್ತ ಪರಿಹಾರ ಕೊಡಿಸಿ: ಪಾವಗಡ ತಾಲೂಕಿನಲ್ಲಿ ಏಟ್ರಿಯಾ ಕಂಪನಿಯವರು ರೈತರಿಗೆ ಸೂಕ್ತ ಪರಿಹಾರ ನೀಡದೆ ಲಕ್ಷಾಂತರ ರೂ. ಬೆಲೆ ಬಾಳುವ ಜಮೀನುಗಳಲ್ಲಿ ಒಂದು ಗುಂಟೆಗೆ ಕೇವಲ 5 ಸಾವಿರ ರೂ. ಪರಿಹಾರ ನೀಡಲು ಜಿಲ್ಲಾಧಿಕಾರಿಗಳ ಆದೇಶವಿದೆ ಎಂಬ ಉತ್ತರ ನೀಡಿ ವಿದ್ಯುತ್‌ ಲೈನ್‌ ಹಾಕುತ್ತಿದ್ದು, ಜೊತೆಗೆ ಜಮೀನುಗಳಲ್ಲಿ ವಿದ್ಯುತ್‌ ಟವರ್‌ ಅಳವಡಿಕೆಗೆ 1 ಟವರ್‌ಗೆ 8 ರಿಂದ 10 ಲಕ್ಷ ನೀಡಬೇಕು. ಆದರೆ ಕೇವಲ 50-75 ಸಾವಿರ ರೂ. ನೀಡಿ ಟವರ್‌ ಅಳವಡಿಸುತ್ತಿದ್ದಾರೆ. ಜೊತೆಗೆ ವಿದ್ಯುತ್‌ ಲೈನ್‌ ಹಾದುಹೋಗುವ ಜಮೀನುಗಳಲ್ಲಿ ಒಂದು ಗುಂಟೆಗೆ 2 ಲಕ್ಷ ರೂ. ನೀಡಬೇಕು. ಈ ಬಗ್ಗೆ ಪ್ರಶ್ನಿಸಿದರೆ ಪೊಲೀಸರನ್ನಿಟ್ಟು ರೈತರ ಮೇಲೆ ದೌರ್ಜನ್ಯವೆಸಗಿ ರೈತರ ಜಮೀನುಗಳಲ್ಲಿ ವಿದ್ಯುತ್‌ ಲೈನ್‌ ಎಳೆಯುತ್ತಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಏಟ್ರಿಯಾ ಕಂಪನಿ ಯವರ ಜೊತೆ ಮಾತುಕತೆ ನಡೆಸಿ ಲಕ್ಷಾಂತರ ರೂ. ಬೆಲೆ ಬಾಳುವ ಜಮೀನುಗಳ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕು ಎಂದು ಮುರಳೀಧರ ಹಾಲಪ್ಪ ಮನವಿ ಮಾಡಿದರು.

Advertisement

ಸಾರ್ವಜನಿಕರಿಗಾಗುತ್ತಿರುವ ಸಮಸ್ಯೆ ತಪ್ಪಿಸಿ: ತುಮಕೂರು ನಗರದಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿಗಳಿಂದ ನಗರದ ಜನತೆ ಕಿರಿಕಿರಿ, ವಾಹನ ಪಾರ್ಕಿಂಗ್‌ ಸಮಸ್ಯೆ, ಧೂಳು ಮತ್ತಿತರೆ ಸಮಸ್ಯೆಗಳನ್ನು ಎದುರಿಸುತ್ತಿದ್ದು, ನಗರದ 35 ವಾರ್ಡುಗಳಲ್ಲೂ ಪ್ರದಕ್ಷಿಣೆ ಮಾಡಿ ಜನರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಬೇಕು, ನಗರದ ಜನರಿಗೆ 24/7 ನೀರು ಒದಗಿಸಲು ಕ್ರಮ ಕೈಗೊಳ್ಳುವಂತೆ ಮುರಳೀಧರ ಹಾಲಪ್ಪ ಒತ್ತಾಯಿಸಿದರು.

ಮಧ್ಯವರ್ತಿಗಳ ಹಾವಳಿ ತಪ್ಪಿಸಿ: ಕೃಷಿ ಇಲಾಖೆಯಲ್ಲಿರುವ ಮಧ್ಯವರ್ತಿಗಳ ಹಾವಳಿ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು, ಕೃಷಿ ಸಂಬಂಧಿತ ಗುಡಿ ಕೈಗಾರಿಕೆಗಳನ್ನು ಚಾಲ್ತಿ ಮಾಡಿ ಸರ್ಕಾರವೇ ಅವರಿಗೆ ಮೂಲ ಸಹಾಯ ಮಾಡಬೇಕು, ನಮ್ಮ ಜಿಲ್ಲೆಯಲ್ಲಿ ಪೂರ್ವ ಮುಂಗಾರಿನಲ್ಲಿ ರೈತರು ಬೆಳೆ ಬೆಳೆಯುವುದಕ್ಕೆ ಸಹಕಾರ ಮಾಡಬೇಕು, ಗ್ರಾಮೀಣ ಭಾಗದಲ್ಲಿ ಕೌಶಲ್ಯ  ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು, ಹೆಣ್ಣು ಮಕ್ಕಳ ಸುರಕ್ಷತೆ ಹಾಗೂ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಿಸಿ ಟಿವಿ ಕ್ಯಾಮೆರಾ ಮತ್ತಿತರೆ ಸ್ಮಾರ್ಟ್‌ ವ್ಯವಸ್ಥೆಗಳನ್ನು ಕಾರ್ಯಾರಂಭ ಮಾಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌.ರಾಮಕೃಷ್ಣ, ಜಿಪಂ ಸದಸ್ಯ ಕೆಂಚಮಾರಯ್ಯ, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರೇವಣಸಿದ್ಧಪ್ಪ, ಜಿಲ್ಲಾ ಉಪಾಧ್ಯಕ್ಷೆ ಮರಿಚನ್ನಮ್ಮ, ಕಿಸಾನ್‌ ಘಟಕದ ಗಿರೀಶ್‌, ಮುಖಂಡರಾದ ನರಸೀಯಪ್ಪ, ಅಶ್ವತ್ಥನಾರಾಯಣ, ಎನ್‌.ಮಂಜುನಾಥ್‌, ನಾಗಮಣಿ, ನಟರಾಜ್‌, ಗೀತ, ರಾಮಮೂರ್ತಿ, ಪ್ರಕಾಶ್‌, ಮುಜೀಬ್‌ ಅಹಮದ್‌, ದಿಲೀಪ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next