Advertisement

ಮುರಳೀಧರ ರಾವ್‌, ಪ್ರಕಾಶ್‌ ಶೆಟ್ಟಿ ಸ್ಪರ್ಧೆ ಖಚಿತ?

02:13 AM Jun 05, 2020 | Sriram |

ಬೆಂಗಳೂರು: ರಾಜ್ಯದ ನಾಲ್ಕು ಕ್ಷೇತ್ರಗಳ ರಾಜ್ಯಸಭೆ ಚುನಾವಣೆ ಕಣ ರಂಗು ಪಡೆದಿದ್ದು, ಎಲ್ಲ ಪಕ್ಷಗಳಲ್ಲೂ ಅಭ್ಯರ್ಥಿಗಳ ಆಯ್ಕೆ ಕಸರತ್ತು ಬಿರುಸು ಪಡೆದಿದೆ. ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿದ್ದರೂ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್‌ ಮತ್ತು ಉದ್ಯಮಿ ಪ್ರಕಾಶ್‌ ಶೆಟ್ಟಿ ಅವರ ಹೆಸರು ಮುಂಚೂಣಿಗೆ ಬಂದಿದೆ. ಶನಿವಾರ ನಡೆಯಲಿರುವ ರಾಜ್ಯ ಕೋರ್‌ ಕಮಿಟಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರವಾಗಲಿದೆ.
ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್‌ ಅವಧಿಯಲ್ಲಿ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ದಾಖಲೆ ಸ್ಥಾನಗಳನ್ನು ಗಳಿಸಿದ್ದು, ವಿಧಾನಸಭೆ ಚುನಾವಣೆಯಲ್ಲೂ ಅತೀ ಹೆಚ್ಚು ಸ್ಥಾನ ಪಡೆದಿತ್ತು. ಹಾಗಾಗಿ ಅವರಿಗೆ ಟಿಕೆಟ್‌ ಸಿಕ್ಕಿದರೆ ಅಚ್ಚರಿಯಿಲ್ಲ.

Advertisement

ಹಾಗೆಯೇ ಇನ್ನೊಂದು ಸ್ಥಾನಕ್ಕೆ ಕರಾವಳಿ ಮೂಲದ ಉದ್ಯಮಿ ಪ್ರಕಾಶ್‌ ಶೆಟ್ಟಿ ಹೆಸರು ಕೇಳಿಬರುತ್ತಿದೆ. ರಾಜ್ಯ ಬಿಜೆಪಿ ಮಾತ್ರವಲ್ಲದೆ, ವರಿಷ್ಠರ ಮಟ್ಟದಲ್ಲೂ ಅವರು ಪ್ರಭಾವ ಹೊಂದಿರುವುದರಿಂದ ಅಭ್ಯರ್ಥಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಬಿಜೆಪಿ ಭದ್ರಕೋಟೆ ಎನಿಸಿರುವ ಕರಾವಳಿಗೆ ಇನ್ನಷ್ಟು ಆದ್ಯತೆ ನೀಡುವ ಲೆಕ್ಕಾಚಾರವೂ ಇದರಲ್ಲಿ ಇದ್ದಂತಿದೆ.

ಮುಂದುವರಿದ ಲಾಬಿ
ಈ ಮಧ್ಯೆ ಟಿಕೆಟ್‌ ಆಕಾಂಕ್ಷಿಯಾಗಿರುವ ಮಾಜಿ ಸಂಸದ ರಮೇಶ್‌ ಕತ್ತಿ ಸಹೋದರ ಉಮೇಶ್‌ ಕತ್ತಿ ಜತೆಗೆ ಗುರುವಾರ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಅವಕಾಶಕ್ಕೆ ಮನವಿ ಮಾಡಿದ್ದಾರೆ.

ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆಯಲ್ಲಿ ವರಿಷ್ಠರ ನಿರ್ಧಾರವೇ ಅಂತಿಮ. ಈ ವಿಚಾರದಲ್ಲಿ ತನ್ನ ಪಾತ್ರ ಏನೂ ಇಲ್ಲ ಎಂದು ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ.

ಶನಿವಾರದ ಸಭೆ ಬಗ್ಗೆ ಕುತೂಹಲ

ಶನಿವಾರ ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು ಟಿಕೆಟ್‌ಗಾಗಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಮರು ಆಯ್ಕೆ ಬಯಸಿರುವ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಡಾ| ಎಂ. ನಾಗರಾಜ್‌ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಇಂದು ಕಾಂಗ್ರೆಸ್‌ ನಿರ್ಧಾರ ?
ರಾಜ್ಯಸಭೆ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿ ಆಯ್ಕೆ ಮತ್ತು ಜೆಡಿಎಸ್‌ ಜತೆ ಮೈತ್ರಿ ಕುರಿತು ಕಾಂಗ್ರೆಸ್‌ ಹಿರಿಯ ನಾಯಕರು ಶುಕ್ರವಾರ ಸಭೆ ನಡೆಸುವ ಸಾಧ್ಯತೆ ಇದೆ.ರಾಜ್ಯಸಭೆಗೆ ಕಾಂಗ್ರೆಸ್‌ಗೆ ದೊರೆಯುವ ಒಂದು ಸ್ಥಾನಕ್ಕೆ ಹಲವು ಆಕಾಂಕ್ಷಿಗಳಿದ್ದು, ಯಾರನ್ನು ಆಯ್ಕೆ ಮಾಡಿದರೆ ಅನುಕೂಲವಾಗುತ್ತದೆ ಎನ್ನುವ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಕೇಂದ್ರದ ಮಾಜಿ ಸಚಿವ ಖರ್ಗೆ, ಹಾಲಿ ಸದಸ್ಯರಾದ ಬಿ.ಕೆ. ಹರಿಪ್ರಸಾದ್‌ ಮತ್ತು ರಾಜೀವ್‌ ಗೌಡ ಕೇಳಿಬರುತ್ತಿರುವ ಪ್ರಮುಖ ಹೆಸರುಗಳು. ಇದರೊಂದಿಗೆ ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಂಡು ದೇವೇಗೌಡರನ್ನು ಬೆಂಬಲಿಸುವ ಕುರಿತು ಚರ್ಚಿಸಿ ಹೈಕಮಾಂಡ್‌ಗೆ ಪಟ್ಟಿ ರವಾನಿಸುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next