Advertisement

ಮುರಳಿ FLASHBACK

12:22 PM Dec 01, 2017 | |

“ನಿಜ ಹೇಳಬೇಕೆಂದರೆ, ಟೆನ್ಶನ್‌ಗೆ ನಿದ್ದೆ ಬರ್ತೀಲ್ಲ …’
ಎಂದು ಮಾತು ಶುರು ಮಾಡಿದರು ಮುರಳಿ. “ಈ ಚಿತ್ರದ ಜಾನರ್ರೆ ಬೇರೆ. ಇದು ನಾಲ್ಕು ಹಾಡು, ನಾಲ್ಕು ಫೈಟುಗಳ ಸಿನಿಮಾ ಅಲ್ಲ. ಗ್ಲೋಬಲ್‌ ಆಡಿಯನ್ಸ್‌ಗೆ ಅಂತ ಮಾಡಿರುವ ಸಿನಿಮಾ. ಅದೇ ಕಾರಣಕ್ಕೆ ಸ್ವಲ್ಪ ಟೆನ್ಶನ್‌ ಇದೆ. ನಿದ್ದೆ ಬರ್ತೀಲ್ಲ. ಆದರೂ ಎಲ್ಲಾ ಕಡೆ “ಮಫ್ತಿ’ ಹವಾ ಇರುವುದು ನೋಡಿದರೆ ಖುಷಿಯಾಗುತ್ತದೆ. ಒಂದೊಳ್ಳೆಯ ಸಿನಿಮಾ ಬಂದಾಗ, ನಮ್ಮವರು ಯಾವತ್ತೂ ಕೈಬಿಟ್ಟಿಲ್ಲ. ಸಿಂಪಲ್‌ ಆಗಿ ಹೇಳಬೇಕೆಂದರೆ, ಮನುಷ್ಯ ಬದುಕಿರೋದು ಮನುಷ್ಯತ್ವಕ್ಕಾ ಅಥವಾ ಕರ್ತವ್ಯಕ್ಕಾ ಎಂಬ ವಿಷಯ ಇಟ್ಟುಕೊಂಡು ಈ ಚಿತ್ರ ಮಾಡಿದ್ದೇವೆ. ಯಾವುದಕ್ಕೆ ಬದುಕಬೇಕು ಎಂಬ ಚರ್ಚೆ ಈ ಚಿತ್ರದಲ್ಲಿದೆ. ಇವೆರೆಡರಲ್ಲಿ ಯಾವುದು ಸರಿ, ಯಾವುದು ತಪ್ಪು ಅಥವಾ ಎರಡೂ ಬೇಕಾ ಎಂಬ ವಿಷಯ ಈ ಚಿತ್ರದಲ್ಲಿದೆ. ಅದನ್ನು ಹೊಸಹೊಸ ಸನ್ನಿವೇಶಗಳು ಮತ್ತು ವ್ಯಕ್ತಿಗಳ ಮೂಲಕ ಹೇಳುವ ಒಂದು ಪ್ರಯತ್ನ ಮಾಡಿದ್ದೀವಿ. ಈ ಚಿತ್ರ ಜನರಿಗೆ ಇಷ್ಟ ಆಗತ್ತೆ ಅಂತ ನಂಬಿಕೆ ಇದೆ’ ಎನ್ನುತ್ತಾರೆ ಮುರಳಿ.

Advertisement

ಮುರಳಿ ಆರಂಭದಲ್ಲೇ ಸಾಕಷ್ಟು ಯಶಸ್ಸನ್ನು ನೋಡಿದವರು. ಬರಬರುತ್ತಾ ಎಲ್ಲವೂ ಬದಲಾಗಿ ಹೋಯಿತು. ಅವರ ಚಿತ್ರಗಳೆಂದರೆ, ನಿರೀಕ್ಷೆ ಕಡಿಮೆಯಾಗುತ್ತಾ ಬಂತು. ಮುರಳಿ ಅಭಿನಯದ ಚಿತ್ರಗಳು ಒಂದರ ಹಿಂದೊಂದು ಸೋತು ಹೋಗಿದ್ದವು. ಮುರಳಿ ಕುಸಿದು ಹೋಗಿದ್ದರು. “ನನ್ನ ಮೊದಲ ಚಿತ್ರ ಒಂದು ವರ್ಷ ಓಡಿತ್ತು. ಎರಡನೆಯ ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಬಂತು. ಕ್ರಮೇಣ ಏನಾಯಿತೋ ಗೊತ್ತಾಗುತ್ತಿರಲಿಲ್ಲ. ನಾನು ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಎಲ್ಲಾ ಅಪ್ಪಾಜಿ ನೋಡಿಕೊಳ್ಳುತ್ತಿದ್ದರು. ಹೋಗಿ ನಟಿಸಿ ಬರುತ್ತಿದ್ದೆ ಅಷ್ಟೇ. ಕ್ರಮೇಣ ಹೇಗಾಯಿತು ಎಂದರೆ ನನ್ನ ಮೇಲೆ ಏನೇನೋ ಆರೋಪಗಳನ್ನ ಮಾಡೋಕೆ ಶುರು ಮಾಡಿದರು. ನನ್ನ ಚಿತ್ರಗಳಿಂದ ಪೋಸ್ಟರ್‌ ದುಡ್ಡು ಸಹ ಬರಲ್ಲ, ನಾನೊಬ್ಬ ಐರನ್‌ ಲೆಗ್‌, ಮುರಳಿ ಚಿತ್ರ ನಿಲ್ಲಲ್ಲ … ಹೀಗೆ ಏನೇನೋ ಹೇಳ್ಳೋಕೆ ಶುರು ಮಾಡಿದರು. 2010ರಿಂದ 12ರವರೆಗಿನ ಮೂರು ವರ್ಷಗಳಿತ್ತಲ್ಲ, ಅದು ನನ್ನ ಜೀವನದ ಕಷ್ಟಕರ ವರ್ಷಗಳು. ಚಿತ್ರಗಳ ಸೋಲು, ಹಣಕಾಸಿನ ಸಮಸ್ಯೆ … ಹೀಗೆ ಒಂದರ ಹಿಂದೊಂದು ಏನೇನೋ ಸಮಸ್ಯೆ. ಅಷ್ಟರಲ್ಲಿ ಮಗ ಸ್ವಲ್ಪ ದೊಡ್ಡವನಾಗಿದ್ದ. ಎಲ್ಲ ಹೀರೋಗಳ ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ನನ್ನ ಚಿತ್ರ ಬಿಡುಗಡೆಯಾಗುತ್ತಿರಲಿಲ್ಲ. ಮಗ ಎಲ್ಲಿ ನಿನ್ನ ಚಿತ್ರ ಯಾವಾಗ ಬರುತ್ತೆ ಅಂತ ಕೇಳುತ್ತಾನೋ ಎಂಬ ಭಯವಾಗಿತ್ತು. ಆಗ ನನಗೆ ಒಂದು ಮಾರಲ್‌ ಸಪೋರ್ಟ್‌ ಬೇಕಿತ್ತು. ಆಗ ಬಂದವರು ಪ್ರಶಾಂತ್‌ ನೀಲ್‌. ಅವರು ನನ್ನ ಪಾಲಿನ ಗಾಡ್‌ಫಾದರ್‌. ಅವರು ಇಲ್ಲದಿದ್ದರೆ ವಾಪಸ್‌ ಬರೋದು ಕಷ್ಟವಾಗುತಿತ್ತು. ಪೋಸ್ಟರ್‌ ದುಡೂx ಹುಟ್ಟಲ್ಲ ಅನ್ನೋನ ಇಟ್ಕೊಂಡು ಅವರು “ಉಗ್ರಂ’ ಎಂಬ ಚಿತ್ರ ಮಾಡಿದರು. “ಉಗ್ರಂ’ ಅಷ್ಟೊಂದು ಯಶಸ್ವಿಯಾಗಬಹುದು ಎಂದು ಅಂದ್ಕೊಂಡಿರಲಿಲ್ಲ. ಆ ಚಿತ್ರ ಸ್ವಲ್ಪ ನಿಧಾನವಾಯ್ತು. ಮೂರು ವರ್ಷ ಕಾದಿದ್ದಕ್ಕೂ, ಆ ಚಿತ್ರ ಸೂಪರ್‌ ಹಿಟ್‌ ಆಯ್ತು. ಆ ನಂತರ “ರಥಾವರ’. ಅದೂ ಗೆವು ಈಗ ಜವಾಬ್ದಾರಿ ಇನ್ನಷ್ಟು ಜಾಸ್ತಿಯಾಗಿದೆ’ ಎನ್ನುತ್ತಾರೆ ಮುರಳಿ.

ತಾವು ಕಷ್ಟದ ದಿನಗಳಲ್ಲಿದ್ದಾಗಲೂ ತಮ್ಮನ್ನು ಕಾಪಾಡಿದ್ದು ಜನರ ಪ್ರೀತಿ ಮತ್ತು ಅಭಿಮಾನ ಎಂಬುದನ್ನು ಮುರಳಿ ಮರೆಯುವುದಿಲ್ಲ. “ಮೂರು ವರ್ಷ ಒಂದೇ ಒಂದು ಸಿನಿಮಾ ಗೆಲ್ಲಲಿಲ್ಲ. ಅದಕ್ಕೂ ಮುನ್ನ ಚಿತ್ರ ಸೋತಾಗ ನಾನು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. 

ಬಿಡಯ್ಯ, ನಡೆಯುತ್ತೆ ಅಂದುಕೊಂಡು ಇನ್ನೊಂದು ಸಿನಿಮಾ ಮಾಡುತ್ತಿದ್ದೆ. ಅದೊಂದು ದಿನ ನನ್ನ ಸಿನಿಮಾ ಬಿಡುಗಡೆಯಾಯಿತು. ನರ್ತಕಿ ಚಿತ್ರಮಂದಿರದಲ್ಲಿ 100 ಜನ ಇರಲಿಲ್ಲ. ಸಿನಿಮಾ ನೋಡೋಕೆ ಹೋದರೆ, ಅಭಿಮಾನಿಗಳು ನನ್ನ ಕೈ ಹಿಡಿದುಕೊಂಡು,
“ಯಾಕೆ ಇಂಥ ಸಿನಿಮಾ ಮಾಡ್ತೀರಾ’ ಎಂದು ಬೇಸರಿಸಿಕೊಂಡರು. ಆಗ ನನಗೆ ಅನಿಸ್ತು, ನಾನು ಅವರ ತಾಳ್ಮೆ ಪರೀಕ್ಷಿಸುತ್ತಿದ್ದೀನಿ ಅಂತ. ಅವರಿಗಾಗಿ ಒಂದಿಷ್ಟು ಒಳ್ಳೆಯ ಚಿತ್ರಗಳನ್ನ ಮಾಡಬೇಕು ಅಂತ ಸ್ಪಷ್ಟವಾಯಿತು. “ಚಂದ್ರ ಚಕೋರಿ’, “ಕಂಠಿ’ ಇನ್ನೊಮ್ಮೆ
ರಿಪೀಟ್‌ ಮಾಡಬೇಕೆಂಬ ಮನಸ್ಸಾಯಿತು. ಅದು “ಉಗ್ರಂ’ನಿಂದ ನಿಜ ಆಯ್ತು. ಇಷ್ಟೆಲ್ಲಾ ಆಗುವಾಗಲೂ ಅಭಿಮಾನಿಗಳು ನನ್ನ ಜೊತೆಗೇ ಇದ್ದರು. ಅವರನ್ನ ನೋಡಿದಾಗ ನೋವಾಗೋದು. ಆದರೆ, ಉತ್ತರ ಮಾತ್ರ ಗೊತ್ತಿರುತ್ತಿರಲಿಲ್ಲ. “ಉಗ್ರಂ’ ನಂತರ ನನಗೆ
ತಿಳವಳಿಕೆ ಬಂತು. ಜೀವನದಲ್ಲಿ ಏನು ಮುಖ್ಯ ಅಂತ ಅರ್ಥವಾಯ್ತು. ಒಂದು ಚಿತ್ರ ಗೆಲ್ಲೋದಕ್ಕೆ ಕಾರಣ, ಪ್ರೇಕ್ಷಕರು ಕೊಡುವ ದುಡ್ಡು. ಅವರು ಚಿತ್ರ ನೋಡಿ ಗೆಲ್ಲಿಸಿದರಷ್ಟೇ ನಾವೆಲ್ಲಾ. ಅವರು ದೇವರಲ್ವಾ? ಅವರನ್ನು ಖುಷಿಪಡಿಸಬೇಕಲ್ವಾ? ಎಂದು ಕ್ರಮೇಣ
ಅರ್ಥವಾಯ್ತು. ಅದರಂತೆ ಚಿತ್ರ ಮಾಡುತ್ತಾ ಹೋಗುತ್ತಿದ್ದೀನಿ’ ಎನ್ನುತ್ತಾರೆ ಮುರಳಿ.

ಸದ್ಯಕ್ಕೆ ಮುರಳಿ “ಮಫ್ತಿ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈ ಚಿತ್ರದ ನಂತರ ಮತ್ತೂಮ್ಮೆ ಜಯಣ್ಣ ಮತ್ತು ಭೋಗೇಂದ್ರ ಅವರ ನಿರ್ಮಾಣದಲ್ಲಿ ಒಂದು ಚಿತ್ರ ಮಾಡಲಿದ್ದಾರೆ. ಆ ಚಿತ್ರ ಮುಂದಿನ ವರ್ಷದಿಂದ ಶುರುವಾಗಲಿದೆ.

Advertisement

ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next