ಕೋಲಾರ: ಚುನಾವಣೆ ಘೋಷಣೆ ಸಂದರ್ಭದಲ್ಲಿ ಕೋಲಾರ ಕ್ಷೇತ್ರದಲ್ಲಿ ಮೋದಿ ಅಲೆ ಇತ್ತು. ಆದರೆ, ಬಿಜೆಪಿ ಅಭ್ಯರ್ಥಿಯ ಮೇಲೆ ಕ್ರಿಮಿನಲ್ ಕೇಸುಗಳ ಇರುವ ಕಾರಣ, ಇವರಿಗಿಂತ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಉತ್ತಮ ಎನ್ನುವ ಭಾವನೆ ಮತದಾರರಲ್ಲಿ ವ್ಯಕ್ತವಾಗುತ್ತಿದೆ. ಹೀಗಾಗಿ ಮುನಿಯಪ್ಪ ಈ ಬಾರಿಯೂ ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಮಾಜಿ ಸಚಿವ ವರ್ತೂರ್ ಪ್ರಕಾಶ್ ತಿಳಿಸಿದರು.
ನಗರದ ಜೂನಿಯರ್ ಕಾಲೇಜ್ ಮೈದಾನದಲ್ಲಿ ಆಯೋಜಿಸಿದ್ದ ತಮ್ಮ ಬೆಂಬಲಿಗರ ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪರಿಗೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಕ್ಷೇತ್ರ ವ್ಯಾಪ್ತಿಯಲ್ಲಿ ಕುಮಾರಸ್ವಾಮಿ ಅವರ ಕೈ
ಬಲಪಡಿಸಲು ಮೈತ್ರಿ ಸರ್ಕಾರ 5 ವರ್ಷ ಉಳಿಯಲು, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಗೆಲ್ಲಿಸಲು ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಕೆಎಚ್‌ಎಂಗೆ ಹೆಚ್ಚು ಮತ: ಚಿಂತಾಮಣಿಯಲ್ಲಿ ಕೆ. ಎಚ್.ಮುನಿಯಪ್ಪ ಕನಿಷ್ಠ 10 ಸಾವಿರ ಮತಗಳ ಮುನ್ನಡೆ ಸಾಧಿಸಲಿದ್ದಾರೆ. ಶ್ರೀನಿವಾಸಪುರದಲ್ಲಿ ರಮೇಶ್‌ಕುಮಾರ್ ಡಿಸಿಸಿ ಬ್ಯಾಂಕ್‌ನಿಂದ 200 ಕೋಟಿ ರೂ. ಸಾಲ ಕೊಡಿಸಿ ಮಹಿಳೆಯರಿಂದ ಗೆದ್ದಿದ್ದಾರೆ, ಇವತ್ತು ಏನಾದರೂ ವಿಧಾನಸಭಾ ಚುನಾವಣೆ ನಡೆದರೆ ವೆಂಕಟಶಿವಾರೆಡ್ಡಿ ಗೆಲ್ಲಲಿದ್ದಾರೆ. ಶಿಡ್ಲಘಟ್ಟದಲ್ಲಿ ಎರಡೂ ಪಕ್ಷದವರಿಂದ ಕನಿಷ್ಠ 30 ಸಾವಿರ ಮತ ಕೆ.ಎಚ್.ಮುನಿಯಪ್ಪಗೆ ಬರಲಿದ್ದು, ಮುಳಬಾಗಿಲು ಮತ್ತು ಬಂಗಾರಪೇಟೆಯಲ್ಲಿ ಸಮಬಲವಾಗಲಿದೆ.
ಕೆಜಿಎಫ್ 10 ಸಾವಿರ, ಮಾಲೂರು ಕ್ಷೇತ್ರದಲ್ಲಿ 5 ಸಾವಿರ ಮತಗಳಿಂದ ಕೆಎಚ್‌ಎಂ ಮುನ್ನಡೆ ಸಾಧಿಸಲಿದ್ದಾರೆ ಎಂದು ಹೇಳಿದರು ಮತ ಕಡಿಮೆಯಾಗದಿರಲಿ: ಇನ್ನೂ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ 65 ಸಾವಿರ ಮತಗಳಿದ್ದು, ನಮ್ಮ ಕಾರ್ಯಕರ್ತರಿಗೆ ನಾನು ಬಲ ಕೊಟ್ಟಿಲ್ಲದ ಪರಿಣಾಮ ಕಳೆದ ಚುನಾವಣೆಯಲ್ಲಿ ನನಗೆ 32 ಸಾವಿರ ಮತಗಳು ಬಂದಿದೆ. ಜೆಡಿಎಸ್ ಮತಗಳು ಸೇರಿ ಕನಿಷ್ಠ 50 ಸಾವಿರ ಮುನ್ನಡೆ ಸಾಧಿಸಲಿದ್ದು, ಯಾವುದೇ ಕಾರಣಕ್ಕೂ ಮತಗಳ ಅಂತರ
ಕಡಿಮೆಯಾಗದ ರೀತಿಯಲ್ಲಿ ಕೆಲಸ ಮಾಡಬೇಕು ಎಂದರು.
ನಾಯಕರಿಗೆ ಸವಾಲು: ಜೆಡಿಎಸ್ ಜಿಲ್ಲಾಧ್ಯಕ್ಷ ವೆಂಕಟಶಿವಾರೆಡ್ಡಿ, ಕಾಂಗ್ರೆಸ್ -ಜೆಡಿಎಸ್‌ನ ಇಬ್ಬರೂ ಹಿರಿಯ ನಾಯಕರು ಗೊಂದಲ ಉಂಟುಮಾಡುತ್ತಿದ್ದಾರೆ. ಅವರು ರಾಜೀನಾಮೆ ಕೊಟ್ಟು ಹೇಳಿಕೆ ನೀಡಲಿ ಎಂದು ಸವಾಲು ಹಾಕಿದರು ಎಷ್ಟೇ ದೊಡ್ಡವರಾದ್ರೂ ಕ್ರಮ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡದ ಪಕ್ಷದ ನಾಯಕರ ವಿರುದ್ಧ ಎಷ್ಟೇ ದೊಡ್ಡವರಾಗಿದ್ರೂ ಶಿಸ್ತು ಕ್ರಮ ತೆಗೆದುಕೊಳ್ಳುವುದು, ಜೆಡಿಎಸ್, ಕಾಂಗ್ರೆಸ್, ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿಯನ್ನು ಮತ್ತೆ ಕಾಡುಗೋಡಿಗೆ ಕಳುಹಿಸಬೇಕಾಗಿದೆ ಎಂದು ಹೇಳಿದರು.
ಎಐಸಿಸಿ ಕಾರ್ಯದರ್ಶಿ ಮಧುಯಕ್ಷಿ ಗೌಡ, ಕಾಂಗ್ರೆಸ್ ಚುನಾವಣಾ ವೀಕ್ಷಕಿ ಕವಿತಾ ವಸಂತ, ನಮ್ಮ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಬೆಗ್ಲಿ ಸೂರ್ಯಪ್ರಕಾಶ್, ಜಿಪಂ ಸದಸ್ಯರಾದ ಸಿ.ಎಸ್. ವೆಂಕಟೇಶ್, ಅರುಣ್‌ಪ್ರಸಾದ್, ರೂಪಶ್ರೀ, ಉಷಾ ವೆಂಕಟೇಶಗೌಡ, ಬಂಕ್ ಮಂಜುನಾಥ್, ಸಾಬಿರ್ ಪಾಷಾ, ಮಧುಸೂದನ್, ತಾಪಂ ಅಧ್ಯಕ್ಷ ಸೂಲೂರು ಆಂಜಿನಪ್ಪ, ಇಮ್ರಾನ್ ಮಾತನಾಡಿದರು.
ಶಕ್ತಿ ಪ್ರದರ್ಶನ: ವೇದಿಕೆಯಲ್ಲಿ ತೂಪಲ್ಲಿ ನಾರಾಯಣಸ್ವಾಮಿ ಸೇರಿ ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ ಮತ್ತು ನಗರಸಭಾ ಸದಸ್ಯರು ಹಾಜರಿದ್ದರು. ಕೋಲಾರ ವಿಧಾನಸಭಾ ಕ್ಷೇತ್ರದಿಂದ 10 ಸಾವಿರ ಮಂದಿ ತಮ್ಮ ಬೆಂಬಲಿಗರನ್ನು ಸಮಾವೇಶದಲ್ಲಿ ಸೇರಿಸುವ ಮೂಲಕ ವರ್ತೂರು ಪ್ರಕಾಶ್ ಶಕ್ತಿ ಪ್ರದರ್ಶನ ಮಾಡಿದರು.