Advertisement

ಮುನಿಯಪ್ಪ ವಿರುದ್ಧವೇ ಸತ್ಯಶೋಧನಾ ಸಮಿತಿಗೆ ದೂರು

11:34 PM Sep 29, 2019 | Lakshmi GovindaRaju |

ಬೆಂಗಳೂರು: ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಬಹಿರಂಗ ಬಂಡಾಯ ಸಾರಿರುವ ಕೇಂದ್ರ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ವಿರುದ್ಧವೂ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಸತ್ಯಶೋಧನಾ ಸಮಿತಿಗೆ ದೂರು ಸಲ್ಲಿಕೆಯಾಗಿರುವುದು ಬಹಿರಂಗಗೊಂಡಿದೆ.

Advertisement

ಮುನಿಯಪ್ಪ ವಿರೋಧಿ ಬಣವು ಅವರ ಸೋಲಿಗೆ ಕಾರಣವಾದ ಅಂಶಗಳು ಹಾಗೂ ಕಳೆದ ಮೂವತ್ತು ವರ್ಷದಲ್ಲಿ ಕೋಲಾರ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕೆ.ಎಚ್‌.ಮುನಿಯಪ್ಪ ಹೇಗೆ ಕಾರಣಕರ್ತ ರಾಗಿದ್ದಾರೆಂದು ಕೋಲಾರ ಜಿಲ್ಲಾ ಕಾಂಗ್ರೆಸ್‌ ಘಟಕ, ಪಕ್ಷದ ವಿವಿಧ ಘಟಕದ ಪದಾಧಿಕಾರಿಗಳು, ಜಿಪಂ ಮಾಜಿ ಸದಸ್ಯರು, ಮುನಿಯಪ್ಪ ವಿರುದ್ಧ ಆಗಸ್ಟ್‌ 28 ರಂದು ಸತ್ಯಶೋಧನಾ ಸಮಿತಿಗೆ ನೀಡಿರುವ ದೂರಿನ ಪ್ರತಿಗಳು ಇದೀಗ ಕಾಂಗ್ರೆಸ್‌ ವಲಯದಲ್ಲಿ ಹರಿದಾಡುತ್ತಿವೆ.

ಕೋಲಾರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯ ದರ್ಶಿ ಅಬ್ದುಲ್‌ ಖಯ್ಯೂಂ, ವಕ್ತಾರ ಸೈಯದ್‌ ಅಪ್ಸರ್‌, ಜಿಪಂ ಸದಸ್ಯ ಶಾಹೀದ್‌ ಷಹಜಾದ್‌ ದೂರು ಸಲ್ಲಿಸಿದ್ದು, ಮುನಿಯಪ್ಪ ಮಾಡಿರುವ ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ಗಮನ ಸೆಳೆದಿದ್ದಾರೆ. ಮೂವತ್ತು ವರ್ಷಗಳಿಂದ ಪಕ್ಷ ವಿರೋಧಿ ಚಟುವಟಿಕೆ ಮಾಡಿಕೊಂಡು ಬಂದಿರುವುದರಿಂದ ಅವರ ಸ್ವಯಂಕೃತ ಅಪರಾಧದಿಂದಾಗಿ ಚುನಾವಣೆ ಯಲ್ಲಿ ಸೋಲು ಕಂಡಿದ್ದಾರೆಂದು ಸತ್ಯ ಶೋಧನಾ ಸಮಿತಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ.

ಮಾಜಿ ಸ್ಪೀಕರ್‌ ವಿರುದ್ಧ ದೂರು ನೀಡಿದ್ದರು..: ತಮ್ಮ ಸೋಲಿಗೆ ಮಾಜಿ ಸ್ಪೀಕರ್‌ ಸೇರಿ ಜಿಲ್ಲೆಯ ಮೂವರು ಶಾಸಕರು ಕಾರಣರಾಗಿದ್ದು ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ಕೆಪಿಸಿಸಿ ವತಿಯಿಂದ ನೇಮಿಸಲಾಗಿರುವ ಸತ್ಯಶೋಧನಾ ಸಮಿತಿಗೆ ಕೆ.ಎಚ್‌.ಮುನಿಯಪ್ಪ ದೂರು ಕೂಡ ನೀಡಿದ್ದರು. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ದೂರು ನೀಡಿದ್ದರೂ, ಕ್ರಮ ಕೈಗೊಳ್ಳದೇ ಅವರನ್ನು ರಕ್ಷಣೆ ಮಾಡಲಾಗುತ್ತಿದೆ ಎಂದು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಕೆಪಿಸಿಸಿ ಕಚೇರಿಯಲ್ಲಿ ಬಹಿರಂಗವಾಗಿಯೇ ಆಕ್ರೋಶ ಹೊರ ಹಾಕಿದ ಬೆನ್ನಲ್ಲೇ ಸತ್ಯಶೋಧನಾ ಸಮಿತಿಗೆ ಸಲ್ಲಿಸಿದ್ದ ದೂರಿನ ಪ್ರತಿ ಬಹಿರಂಗಗೊಂಡಿದೆ.

ಮುನಿಯಪ್ಪ ವಿರುದ್ಧ ಕೇಳಿ ಬಂದ ಪ್ರಮುಖ ದೂರು
-ಕಳೆದ 30 ವರ್ಷಗಳಿಂದ ಜಿಲ್ಲೆಯ ಸಂಸದರಾಗಿ ಮುನಿಯಪ್ಪ ಕಾರ್ಯ ನಿರ್ವಹಿಸಿದ್ದರು. ಆದರೆ, 2009ರಲ್ಲಿ ಕೋಲಾರ ಜಿಪಂ ಅಧ್ಯಕ್ಷ ಸ್ಥಾನ ಪಡೆಯಲು ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಇದ್ದರೂ, ಪಕ್ಷದ ವತಿಯಿಂದ ಗೆದ್ದ ನಾಲ್ವರು ಜೆಡಿಎಸ್‌ ಪರ ಕೆಲಸ ಮಾಡುವಂತೆ ಮಾಡಿ, ಪಕ್ಷದ ದಲಿತ ಬಲಗೈ ಸಮುದಾಯಕ್ಕೆ ಸೇರಿದವರು ಜಿಪಂ ಅಧ್ಯಕ್ಷರಾಗುವುದನ್ನು ತಪ್ಪಿಸಿದ್ದರು.

Advertisement

-ಜಿಲ್ಲೆಯಲ್ಲಿ ದಲಿತ ಸಮುದಾಯದವರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾದರೆ, ತಮಗೆ ಪ್ರತಿಸ್ಪರ್ಧಿಯಾಗುತ್ತಾರೆ ಎನ್ನುವ ಕಾರಣಕ್ಕೆ ಮುನಿಯಪ್ಪ ಅವರು ಮೂವತ್ತು ವರ್ಷ ಜಿಲ್ಲೆಯ ಸಂಸದರಾಗಿದ್ದರೂ, ಒಬ್ಬರೂ ದಲಿತ ಸಮುದಾಯವರು ಅಧ್ಯಕ್ಷರಾಗಲು ಅವಕಾಶ ನೀಡಿಲ್ಲ.

-2008ರ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ ಕೆ.ಶ್ರೀನಿವಾಸಗೌಡ ವಿರುದ್ಧ ಕೆಲಸ ಮಾಡಿ, ಪಕ್ಷೇತರ ಅಭ್ಯರ್ಥಿಯಾಗಿದ್ದ ವರ್ತೂರು ಪ್ರಕಾಶ್‌ ಅವರನ್ನು ಗೆಲ್ಲಿಸಿದ್ದಾರೆ. ಕೆಜಿಎಫ್ನಲ್ಲಿ ಪಕ್ಷದ ಅಭ್ಯರ್ಥಿ ಶ್ರೀನಿವಾಸ್‌ ವಿರುದ್ಧ ಬಿಜೆಪಿ ಅಭ್ಯರ್ಥಿ ವೈ ಸಂಪಂಗಿ ಗೆಲುವಿಗೆ ನೇರವಾಗಿಯೇ ಬೆಂಬಲಿಸಿದ್ದಾರೆ.

-2013ರ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ನಸೀರ್‌ ಅಹಮದ್‌ ಅವರನ್ನು ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಒತ್ತಡ ಹೇರಿ, ನಂತರ ಅವರ ವಿರುದ್ಧ ಮತ್ತೆ ಪಕ್ಷೇತರ ಅಭ್ಯರ್ಥಿ ವರ್ತೂರು ಪ್ರಕಾಶ್‌ ಗೆಲುವಿಗೆ ಕಾರಣರಾಗಿದ್ದಾರೆ. ಆ ಚುನಾವಣೆಯಲ್ಲಿ ಮುನಿಯಪ್ಪ ಅವರ ಮನೆ ಇರುವ ಬೂತ್‌ನಲ್ಲಿ ಕಾಂಗ್ರೆಸ್‌ಗೆ ಕೇವಲ 11 ಮತಗಳು ಬಂದಿವೆ.

-2013ರಲ್ಲಿ ಕೆಜಿಎಫ್ ಕ್ಷೇತ್ರದಲ್ಲಿಯೂ ವಿ.ಶಂಕರ್‌ ವಿರುದ್ಧ, ಶ್ರೀನಿವಾಸಪುರದಲ್ಲಿ ಕೆ.ಆರ್‌. ರಮೇಶ್‌ಕುಮಾರ್‌ ವಿರುದ್ಧ, ಚಿಂತಾಮಣಿಯಲ್ಲಿ ವಾಣಿ ಕೃಷ್ಣಾ ರೆಡ್ಡಿ ವಿರುದ್ಧ ಜೆಡಿಎಸ್‌ ಅಭ್ಯರ್ಥಿ ಜಿ.ಕೆ.ಕೃಷ್ಣಾ ರೆಡ್ಡಿ ಅವರನ್ನು ಗೆಲ್ಲಿಸಲು ನೇರವಾಗಿ ಕೆಲಸ ಮಾಡಿದ್ದಾರೆ.

-1991ರಿಂದ 7 ಬಾರಿ ಲೋಕಸಭಾ ಸದಸ್ಯರಾಗಿರುವ ಮುನಿಯಪ್ಪ ಜಿಲ್ಲೆಯಲ್ಲಿ ಒಮ್ಮೆಯೂ ಮುಸ್ಲಿಂ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಕೆಲಸ ಮಾಡಿಲ್ಲ.

-2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಮುಸ್ಲಿಂ ಸಮುದಾಯದ ವಿರೋಧದ ನಡುವೆಯೂ ನಿವೃತ್ತ ಅಧಿಕಾರಿ ಜಮೀರ್‌ ಪಾಷಾ ಅವರಿಗೆ ಕೋಲಾರದ ಟಿಕೆಟ್‌ ಕೊಡಿಸಿ ಸೋಲಿಸಿದ್ದಾರೆ. ಚಿಂತಾಮಣಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಾಣಿ ಕೃಷ್ಣಾ ರೆಡ್ಡಿಯವರು ಕೇವಲ 2000 ಮತ ಗಳಿಸಿದ್ದು, ಮುನಿಯಪ್ಪ ಜೆಡಿಎಸ್‌ ಶಾಸಕ ಜಿ.ಕೆ.ಕೃಷ್ಣಾ ರೆಡ್ಡಿ ಪರ ಮಾಡಿರುವ ಕೆಲಸದ ಪರಿಣಾಮವಿದು.

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next