ಬೆಂಗಳೂರು: ನಾನು ಕಣ್ಣೀರು ಹಾಕಿರುವುದಕ್ಕೆ ಕೆಲವರು ಸಿನಿಮಾ ಕಟ್, ಸ್ಟಾರ್ಟ್, ಲೈಟ್ ಎಂದೆಲ್ಲಾ ಹೇಳಿದ್ದಾರೆ. ತಾಯಿ ಕಳೆದುಕೊಂಡಿರುವ ದುಃಖದಿಂದಷ್ಟೇ ನಾನು ಕಣ್ಣೀರು ಹಾಕಿದ್ದೇನೆ. ಸದ್ಯದಲ್ಲೇ ಒಂದು ಸೆಂಟಿಮೆಂಟ್ ಸಿನಿಮಾ ರಿಲೀಸ್ ಆಗಲಿದೆ ಎಂದು ರಾಜರಾಜೇಶ್ವರಿನಗರ ಕ್ಷೇತ್ರದ ಬಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ್ತೂಂದು ಸಿನಿಮಾ ಸಿದ್ಧವಾಗುತ್ತಿದೆ. ಅ. 31 ಇಲ್ಲವೇ ನ. 1ರಂದು ಬಿಡುಗಡೆಯಾಗುತ್ತದೆ. ಆ್ಯಕ್ಷನ್ ಸಿನಿಮಾ ಮಾಡಿದರು. ಆದರೆ ಓಡಲಿಲ್ಲ. ಇದೀಗ ಮತ್ತೂಂದು ಕತೆ ರೆಡಿ ಮಾಡಿದ್ದಾರೆ. ಅವರು ಕೂಡ ಸಿನಿಮಾ ಥಿಯೇಟರ್ ನಡೆಸಿದವರು. ಸಾಕಷ್ಟು ಸಿನಿಮಾಗಳಿಗೆ ಕ್ಲಾಪ್ ಮಾಡಿದವರು. ಇದು ನನಗೆ ಗಾಂಧಿನಗರದಿಂದ ಬಂದ ಮಾಹಿತಿ ಎಂದು ಮುನಿರತ್ನ ಸಿನಿಮಾ ಶೈಲಿಯಲ್ಲೇ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್, ಡಿ.ಕೆ. ಸುರೇಶ್ ಅವರಿಗೆ ಟಾಂಗ್ ನೀಡಿದರು.
ನಾನು ಆಂಟಿ ಪ್ರೀತ್ಸೆ, ರಕ್ತ ಕಣ್ಣೀರು, ಅನಾಥರು ರಿಮೇಕ್ ಚಿತ್ರದ ಜತೆಗೆ ಕಠಾರಿವೀರ ಸುರಸುಂದರಾಂಗ ಸ್ವಮೇಕ್ ಸಿನಿಮಾ ಮಾಡಿದೆ. ಇದೀಗ ಹೊಸ ಚಿತ್ರವೊಂದು ಬರುತ್ತಿದೆ. ಕತೆ, ಚಿತ್ರಕತೆಯೂ ಸಿದ್ಧವಾಗಿದೆ. ನ.1ರ ಸಂಜೆ 5 ಗಂಟೆಯೊಳಗೆ ಸಿನಿಮಾ ರಿಲೀಸ್ ಆಗಲಿದೆ ಎಂದು ಮಾರ್ಮಿಕವಾಗಿ ನುಡಿದರು.
ಇದನ್ನೂ ಓದಿ :ಕಾಶ್ಮೀರದಲ್ಲಿ ಭೂಮಿ ಖರೀದಿಗೆ ಅವಕಾಶ; ಕೇಂದ್ರದ ನಿರ್ಧಾರ ಸ್ವಾಗತಿಸಿದ ಕಾಶ್ಮೀರಿ ಪಂಡಿತರು
ಡಿ.ಕೆ. ಶಿವಕುಮಾರ್ ಸಹೋದರರ ಬಗ್ಗೆ ಹೇಳುತ್ತಿದ್ದೀರಾ ಎಂಬ ಪ್ರಶ್ನೆಗೆ, ಕಾದು ನೋಡಿ. ಅದು ರಿಮೇಕ್ ಸಿನಿಮಾ, ಸೆಂಟಿಮೆಂಟ್ ಸಿನಿಮಾ ಆಗುತ್ತದೆ ಎಂದಷ್ಟೇ ಮುನಿರತ್ನ ಹೇಳಿದರು.
ನಾನು ತಾಯಿಯನ್ನು ಮಾರಿಕೊಂಡಿದ್ದೇನೆ ಎಂಬುದಾಗಿ ಕೆಲವರು ಆರೋಪ ಮಾಡಿದ್ದರು. 25 ವರ್ಷದ ಹಿಂದೆ ತೀರಿ ಹೋದ ತಾಯಿಯನ್ನು ನೆನೆದು ಕಣ್ಣೀರು ಹಾಕಿದ್ದೇನೆ ಅಷ್ಟೇ ಎಂದು ಮುನಿರತ್ನ ಪುನರುಚ್ಚರಿಸಿದರು.