Advertisement

Munirathna Case: ಭದ್ರತೆ ಕೊಟ್ಟರೆ ಮಾಜಿ ಸಿಎಂಗಳ ಹನಿಟ್ರ್ಯಾಪ್‌ ಬಹಿರಂಗ: ಸಂತ್ರಸ್ತೆ

04:54 AM Oct 10, 2024 | Team Udayavani |

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ, ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನಗೆ ಮತ್ತೂಂದು ಸಂಕಷ್ಟ ಎದುರಾಗಿದೆ. ಮುನಿರತ್ನ ಇಬ್ಬರು ಮಾಜಿ ಮುಖ್ಯಮಂತ್ರಿಗಳನ್ನು ಹನಿಟ್ರ್ಯಾಪ್‌ ಮಾಡಿ ಬ್ಲ್ಯಾಕ್‌ಮೇಲ್‌ ಮಾಡಿದ್ದಾರೆ ಎಂದು ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ.

Advertisement

ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂತ್ರಸ್ತೆ, “ಸರಕಾರ ನನಗೆ ಸೂಕ್ತ ಭದ್ರತೆ ಒದಗಿಸಿದರೆ ಮಾಜಿ ಮುಖ್ಯ ಮಂತ್ರಿಗಳಿಗೆ ಹನಿಟ್ರ್ಯಾಪ್‌ ಮಾಡಿರುವ ಸಾಕ್ಷ್ಯಾಧಾರಗಳನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ನೀಡುತ್ತೇನೆ. ಈ ಪ್ರಕರಣದಲ್ಲಿ ಐದಾರು ಮಂದಿ ಮಹಿಳೆಯರನ್ನು ಬಳಸಿಕೊಳ್ಳಲಾಗಿದೆ’ ಎಂದು ಆರೋಪಿಸಿದ್ದಾರೆ.

ತನಗೆ ಮುನಿರತ್ನ 2020ರಲ್ಲಿ ಪರಿಚಯವಾಗಿದ್ದು, ಅನಂತರ ನನ್ನ ಮೊಬೈಲ್‌ ನಂಬರ್‌ ಪಡೆದುಕೊಂಡು, ವೀಡಿಯೋ ಕರೆಗಳನ್ನು ಮಾಡುತ್ತಿದ್ದರು. ಅದಕ್ಕೆ ನಿರಾಕರಿಸಿದಾಗ ಕರೆ ಸ್ವೀಕರಿಸುವಂತೆ ಆಗ್ರಹಿಸುತ್ತಿದ್ದರು. ಮುನಿರತ್ನ ನನ್ನ ಕುಟುಂಬದವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿ ನನ್ನ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿದ್ದರು. ಅದನ್ನು ವೀಡಿಯೋ ಮಾಡಿಕೊಂಡಿದ್ದರು. ಬಳಿಕ ಆ ವೀಡಿಯೋಗಳನ್ನು ತೋರಿಸಿ, ಬೇರೆ-ಬೇರೆ ಕೃತ್ಯಗಳನ್ನು ಮಾಡುವಂತೆ ನನ್ನನ್ನು ಒತ್ತಾಯಿಸಿದ್ದರು. ಅಲ್ಲದೆ, ಈ ವೀಡಿಯೋ ಇಟ್ಟುಕೊಂಡು, ನನ್ನ ಮೂಲಕ ಇಬ್ಬರು ಮಾಜಿ ಮುಖ್ಯಮಂತ್ರಿಗಳನ್ನು ಬೆಂಗಳೂರಿ ನಲ್ಲೇ ಹನಿಟ್ರ್ಯಾಪ್‌ ಮಾಡಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಪೊಲೀಸರು, ಶಾಸಕರು, ಸಚಿವರ ಹನಿಟ್ರ್ಯಾಪ್‌
ಮಾಜಿ ಸಿಎಂಗಳು ಮಾತ್ರವಲ್ಲದೆ, ಹಾಲಿ-ಮಾಜಿ ಶಾಸಕರು, ಸಚಿವರು, ಪೊಲೀಸ್‌ ಇಲಾಖೆಯ ಎಸ್ಪಿ, ಎಸಿಪಿ ಹಾಗೂ ಸಿಬಿಐ ಅಧಿಕಾರಿಗಳನ್ನು ಹನಿಟ್ರ್ಯಾಪ್‌ ಮಾಡಿಸಿದ್ದಾರೆ. ಈ ಹಿಂದೆ ಮಾಜಿ ಕಾರ್ಪೊರೇಟರ್‌ ಒಬ್ಬರನ್ನು ಹನಿಟ್ರ್ಯಾಪ್‌ ಮಾಡಲು ಒತ್ತಾಯಿಸಿದ್ದರು. ಅದಕ್ಕೆ ನಿರಾಕರಿಸಿದಾಗ ಬೇರೆ ಯುವತಿ ಮೂಲಕ ಹನಿಟ್ರ್ಯಾಪ್‌ ಮಾಡಿಸಿ, ವೀಡಿಯೋ ಇಟ್ಟುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಏಳೆಂಟು ಮಂದಿ ಸಂತ್ರಸ್ತೆಯರಿದ್ದು, ಇದರಲ್ಲಿ ನಾಲ್ವರು ಎಚ್‌ಐವಿ ಸೋಂಕಿತೆಯರಿದ್ದಾರೆ. ಅವರಲ್ಲಿ ಒಬ್ಬ ಮಹಿಳೆಯನ್ನು ಬಳಸಿಕೊಂಡು ಬಿಬಿಎಂಪಿ ಮಾಜಿ ಸದಸ್ಯೆಯೊಬ್ಬರ ಪತಿಯನ್ನು ಹನಿಟ್ರ್ಯಾಪ್‌ ಮಾಡಿಸಿದ್ದಾರೆ ಎಂದು
ದೂರಿದರು.

Advertisement

ವಿಶೇಷ ಮೊಬೈಲ್‌ ಬಳಕೆ
ಹನಿಟ್ರ್ಯಾಪ್‌ ಮಾಡಲು ಮುನಿರತ್ನ ತಮ್ಮದೇ ತಂಡ ಕಟ್ಟಿಕೊಂಡಿದ್ದಾರೆ. ಜತೆಗೆ ವಿಶೇಷ ಮೊಬೈಲ್‌ಗ‌ಳನ್ನು ಹನಿಟ್ರ್ಯಾಪ್‌ ಮಾಡುವವರಿಗೆ ನೀಡುತ್ತಿದ್ದರು. ಅದನ್ನು ಮನಿರತ್ನ ಸಂಬಂಧಿ ಸುಧಾಕರ್‌, ರಾಮಚಂದ್ರ ನಾಯ್ಡು ನಿರ್ವಹಿಸುತ್ತಿದ್ದ ರು. ಸುಧಾಕರ್‌ ಇಲ್ಲದ ಸಂದರ್ಭದಲ್ಲಿ ಕೆಲವು ವೀಡಿಯೊಗಳನ್ನು ನನ್ನ ಮೊಬೈಲ್‌ಗೆ ಹಂಚಿಕೊಂಡಿದ್ದಾರೆ. ನಮ್ಮ ವೈಯಕ್ತಿಕ ಮೊಬೈಲ್‌ಗ‌ಳನ್ನು ಬಳಸಲು ಅವಕಾಶ ನೀಡುತ್ತಿರಲಿಲ್ಲ. ಹನಿಟ್ರ್ಯಾಪ್‌ಗೆ ಸಂಬಂಧಿಸಿದ ಎಲ್ಲ ಸಾಕ್ಷಿಗಳು ನನ್ನಲ್ಲಿವೆ. ಸರಕಾರ ನನಗೆ ಹಾಗೂ ನನ್ನ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಿದರೆ, ಅವುಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದರು.

ಬಿಜೆಪಿ ಮುಖಂಡರಿಗೆ ಸವಾಲು
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿಗೆ ಅವಕಾಶ ನೀಡಬೇಕು. ನಿಮ್ಮ ಪಕ್ಷದ ಒಬ್ಬ ಶಾಸಕ ಇಂತಹ ಕೃತ್ಯಗಳನ್ನು ಮಾಡಿಸಿ¨ªಾನೆ. ಆದರೂ ಅವರನ್ನು ನೀವು ನಿಮ್ಮ ಪಕ್ಷದಲ್ಲಿ ಯಾಕೆ ಇಟ್ಟುಕೊಂಡಿದ್ದೀರಾ ಎಂದು ಕೇಳಬೇಕಿದೆ. ಅದಕ್ಕಾಗಿ 10 ನಿಮಿಷ ಸಮಯ ಕೊಟ್ಟರೆ ಇಡೀ ವಿಷಯವನ್ನು ಅವರ ಮುಂದೆ ತೆರೆದಿಡಲು ಸಿದ್ಧಳಿದ್ದೇನೆ ಎಂದು ಸಂತ್ರಸ್ತೆ ಹೇಳಿದರು.

ಅಶೋಕ್‌ಗೆ ತಿರುಗೇಟು
ಮುನಿರತ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದ ಮಾಜಿ ಉಪ ಮುಖ್ಯಮಂತ್ರಿಗಳಾದ ಆರ್‌.ಅಶೋಕ್‌ ಮತ್ತು ಅಶ್ವತ್ಥನಾರಾಯಣ್‌ಗೆ ತಿರುಗೇಟು ನೀಡಿರುವ ಸಂತ್ರಸ್ತೆ, ನನ್ನ ಮತ್ತು ಮುನಿರತ್ನ ಅವರ ಬ್ರೈನ್‌ ಮ್ಯಾಪಿಂಗ್‌ ಮಾಡಲಿ. ಆಗ ಸತ್ಯ ಗೊತ್ತಾಗಲಿದೆ ಎಂದು ಸವಾಲು ಹಾಕಿದ್ದಾರೆ.

ಸತ್ಯಾಂಶವಿದ್ದರೆ ಕಠಿನ ಕ್ರಮ
ಶಾಸಕ ಮುನಿರತ್ನ ವಿರುದ್ಧ ಆರೋಪ ಕೇಳಿಬಂದ ಕೂಡಲೇ ನೋಟಿಸ್‌ ಕೊಟ್ಟಿದ್ದೇವೆ. ವಿಧಿವಿಜ್ಞಾನ ಪ್ರಯೋಗಾಲಯ ವರದಿಯಲ್ಲಿ ಸತ್ಯಾಂಶವಿದ್ದರೆ ರಾಜೀನಾಮೆ ಕೇಳುತ್ತೇವೆ. ಕ್ರಮವನ್ನೂ ಕೈಗೊಳ್ಳುತ್ತೇವೆ. -ಆರ್‌.ಅಶೋಕ್‌, ವಿಧಾನಸಭೆ ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next