ಶಿಡ್ಲಘಟ್ಟ: ನಗರದ 6 ವಾರ್ಡ್‌ಗಳಲ್ಲಿ ಕುಡಿಯುವ ನೀರು ಪೂರೈಕೆಗಾಗಿ ನಗರಸಭೆ ಸದಸ್ಯರು ನೂತನ ಪೈಪ್‌ಲೈನ್ ಅಳವಡಿಸಿ ಜನತೆಗೆ ನೀರು ಪೂರೈಕೆಗೆ ಮುಂದಾಗಿದ್ದಾರೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ರೇಷ್ಮೆ ನಗರವೆಂದು ಖ್ಯಾತಿ ಹೊಂದಿರುವ ಶಿಡ್ಲಘಟ್ಟ ನಗರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನೆಮ್ಮದಿ ಕೆಡಿಸಿತ್ತು. ಕುಡಿವ ನೀರಿನ ಸಮಸ್ಯೆ ಬಗೆಹರಿಸಲು ಕೊಳವೆ ಬಾವಿ ಕೊರೆಯುತ್ತಿದ್ದರೂ ಅನೇಕ ಕೊಳವೆ ಬಾವಿಗಳಲ್ಲಿ ನೀರು ಲಭಿಸದೆ ವಿಫಲಗೊಳ್ಳುತ್ತಿದ್ದವು. ಹೀಗಾಗಿ ನೀರು ಪೂರೈಕೆ ಮಾಡಲು ಸಾಧ್ಯವಾಗದೆ ನಗರಸಭಾ ಸದಸ್ಯರು ಮತ್ತು ಅಧಿಕಾರಿಗಳ ಚಿಂತೆ ಹೆಚ್ಚಿಸಲು ಕಾರಣವಾಗಿತ್ತು.
ನಗರದ ಬಹುತೇಕ ವಾರ್ಡ್‌ಗಳಲ್ಲಿ 15-20 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿತ್ತು. ಇನ್ನೂ ಅನೇಕ ವಾರ್ಡ್‌ಗಳಲ್ಲಿ ತಿಂಗಳಿಗೊಮ್ಮೆ ನೀರು ಸರಬರಾಜು ಆಗುತ್ತಿದೆ ಎಂದು ದೂರು ಕೇಳಿ ಬರುತ್ತಿದ್ದವು. ಇಂತಹ ಸಂದರ್ಭದಲ್ಲಿ ನಗರಸಭೆಯ 6 ಮಂದಿ ಸದಸ್ಯರು ಪಕ್ಷಾತೀತವಾಗಿ ಒಂದಾಗಿ ತಮ್ಮ ತಮ್ಮ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಿಕೊಳ್ಳಲು ವಿನೂತನ ಪ್ರಯತ್ನಕ್ಕೆ ಕೈ ಹಾಕಿದರು.
ಕುಡಿವ ನೀರು ಪೂರೈಕೆ: ನಗರದ ವಿಜಿಟಿ ರಸ್ತೆಯ ಶ್ರೀವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಕೊರೆಸಿರುವ ಕೊಳವೆ ಬಾವಿ ನೀರು ನಗರದ 6 ವಾರ್ಡ್‌ಗಳ ಜನರ ಪಾಲಿಗೆ ಸಂಜೀವಿನಿಯಾಗಿದೆ. ದೇವಾಲಯ ಸಮಿತಿ ಟ್ರಸ್ಟ್‌ನ ಅಧ್ಯಕ್ಷ-ಪದಾಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳ ಸಹಕಾರದಿಂದಾಗಿ ನಗರಸಭೆ ವಾರ್ಡ್ 3ರ ಸದಸ್ಯೆ 5ನೇ ವಾರ್ಡಿನ ಆಯೀಷಾ ಸುಲ್ತಾನಾ(ಆಸೀಫ್), 6ನೇ ವಾರ್ಡಿನ ಸದಸ್ಯ ವಕೀಲ ಮುನಿರಾಜು, 10ನೇ ವಾರ್ಡಿನ ಮಂಜುನಾಥ್(ಬಸ್), 11ನೇ ವಾರ್ಡಿನ ಎಲ್.ಅನಿಲ್ ಕುಮಾರ್, 13ನೇ ವಾರ್ಡಿನ ಸದಸ್ಯ ನಾರಾಯಣಸ್ವಾಮಿ ಪೈಪ್‌ಲೈನ್ ಹಾಕಿಕೊಂಡು ನಾಗರಿಕರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಮುಂದಾಗಿದ್ದಾರೆ.
ಪ್ರತಿನಿತ್ಯ ಒಂದೊಂದು ವಾರ್ಡಿಗೆ ನೀರು ಸರಬರಾಜು ಮಾಡಲು ನಗರಸಭಾ ಸದಸ್ಯರು ಸಹಮತ ವ್ಯಕ್ತಪಡಿಸಿದ್ದಾರೆ. ನಗರದ ವೇಣುಗೋಪಾಲಸ್ವಾಮಿ ದೇವಾಲಯದ ಕೊಳವೆ ಬಾವಿಯಿಂದ ಪೈಪ್ ಲೈನ್ ನಿರ್ಮಿಸಿ ನಗರದ ದೇಶದಪೇಟೆ ಹಾಗೂ ನಗರ್ತಪೇಟೆಗೆ ಪೂರೈಕೆಯಾಗುತ್ತಿರುವ ನೀರಿನ ಸರಬರಾಜು ಪರಿಶೀಲಿಸಿ ಮಾತನಾಡಿದ 11ನೇ ವಾರ್ಡಿನ ನಗರಸಭಾ ಸದಸ್ಯ ಎಲ್.ಅನಿಲ್ ಕುಮಾರ್, ನಗರಸಭೆ 6 ವಾರ್ಡ್‌ಗಳ ಸದಸ್ಯರು ಸೇರಿ ವೇಣುಗೋಪಾಲಸ್ವಾಮಿ ದೇವಾಲಯದ ಬಳಿ ಕೊರೆದಿರುವ ಕೊಳವೆ ಬಾವಿಯಿಂದ ಪ್ರತಿನಿತ್ಯ ಒಂದೊಂದು ವಾರ್ಡ್‌ನಂತೆ ನೀರು ಪೂರೈಕೆ ಮಾಡಲು ಕ್ರಮ ಕೈಗೊಂಡಿದ್ದೇವೆ. ನಗರದಲ್ಲಿ ಕುಡಿವ ನೀರಿನ ಸಮಸ್ಯೆ ಭೀಕರವಾಗಿದೆ. ನಾಗರಿಕರು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಕುಡಿಯಲು ಮಾತ್ರ ನೀರು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಕೊಳಾಯಿಗೆ ಮೋಟಾರ್ ಪಂಪ್ ಅಳವಡಿಸಿಕೊಂಡು ಸಂಪ್‌ನಲ್ಲಿ ನೀರು ಶೇಖರಣೆ ಮಾಡುವ ದೂರುಗಳು ಬಂದರೇ ನಗರಸಭೆ ಅಧಿಕಾರಿಗಳು ಕ್ರಮ ಜರುಗಿಸುತ್ತಾರೆ. ನಾಗರಿಕರು ಕುಡಿಯಲು ಮಾತ್ರ ನೀರು ಬಳಕೆ ಮಾಡಿಕೊಂಡು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಹಾಗೆಯೇ 10ನೇ ವಾರ್ಡಿನಲ್ಲಿ ಪ್ರಾಯೋಗಿಕವಾಗಿ ನೀರನ್ನು ಬಿಟ್ಟಿದ್ದು ಸಮರ್ಪಕವಾಗಿ ಸಿಗುತ್ತಿದೆಯೇ? ಯಾರಾದರೂ ಮೋಟರ್ ಪಂಪ್ ಅಳವಡಿಸಿಕೊಂಡಿದ್ದಾರೆಯೇ? ಎಂಬುದನ್ನು ಪರಿಶೀಲಿಸಿದರು.
ಮನವಿ: ಶ್ರೀವೇಣುಗೋಪಾಲಸ್ವಾಮಿ ದೇವಾಲಯದ ಅಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ರಾಘವೇಂದ್ರ(ಬಳೇ), ಶಿಡ್ಲಘಟ್ಟ ನಗರಸಭೆ ನಾಗರಿಕರಿಗೆ ಸಮರ್ಪಕವಾಗಿ ಕುಡಿವ ನೀರು ಪೂರೈಕೆ ಮಾಡಲು ಶಾಸಕ ವಿ.ಮುನಿಯಪ್ಪ ಕೊಳವೆಬಾವಿ ಕೊರೆಸಿದ್ದರು. ಈ ಕೊಳವೆಬಾವಿಯಲ್ಲಿ ಲಭಿಸಿರುವ ನೀರು ಎಲ್ಲಾ ನಾಗರಿಕರಿಗೆ ಪೂರೈಕೆ ಮಾಡಲು ಕ್ರಮ ಕೈಗೊಂಡಿದ್ದೇವೆ. ಎಲ್ಲರೂ ಪರಸ್ಪರ ಸಹಕಾರದಿಂದ ನೀರು ಪಡೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಮುಖಂಡರಾದ ನಾಗರಾಜ್,ಬಾಬು, ವೆಂಕಟೇಶ್, ನಾಗಪ್ಪ, ಜಲಗಾರ ಶ್ರೀನಿವಾಸ್ ಇದ್ದರು.