ಚಿಕ್ಕನಾಯಕನಹಳ್ಳಿ: ಪಟ್ಟಣದ 23 ವಾರ್ಡ್ ಹಾಗೂ ಸರ್ಕಾರಿ ಕಚೇರಿಗಳಿಗೆ ಟ್ಯಾಂಕರ್ ನೀರು ಸರಬರಾಜು ಮಾಡಿದ ಬಾಕಿ ಹಣ 3 ವರ್ಷ ಕಳೆದರೂ ನೀಡಿಲ್ಲ ಎಂದು ಟ್ಯಾಂಕರ್ ಮಾಲೀಕರು ಪುರಸಭೆ ಮುಂದೆ ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭಿಸಿದ್ದಾರೆ.
2016-17ನೇ ಸಾಲಿನಲ್ಲಿ ಭೀಕರ ಬರಗಾಲದಿಂದ ಪುರಸಭೆಯ ಕುಡಿಯುವ ನೀರಿನ ಬೋರ್‌ವೆಲ್ ಗಳು ನೀರಿಲ್ಲದೆ ಬತ್ತಿ ಹೋಗಿತ್ತು. ಈ ಸಂದರ್ಭ ಖಾಸಗಿ ಟ್ಯಾಂಕರ್ ಮೂಲಕ ಪ್ರತಿ ವಾರ್ಡ್‌ಗೆ 4ರಂತೆ 92 ಟ್ಯಾಂಕರ್ ಹಾಗೂ ಸರ್ಕಾರಿ ಕಚೇರಿಗಳು, ಪೊಲೀಸ್ ಸ್ಟೇಷನ್, ಬಿಇಒ ಕಚೇರಿ, ತಾಲೂಕು ಕಚೇರಿ ಶಾಲ ಕಾಲೇಜು, ಪಶು ಆಸ್ಪತ್ರೆ, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಇತರೆ ಸರ್ಕಾರಿ ಕಚೇರಿಗಳಿಗೆ ಒಟ್ಟು ಪ್ರತಿ ದಿನ ಸುಮಾರು 120 ಟ್ಯಾಂಕರ್ ನೀರು ಸರಬರಾಜು ಮಾಡಲಾಗಿದೆ. ಸುಮಾರು 5 ತಿಂಗಳು ಪ್ರತಿ ದಿನ ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಿದ ಖಾಸಗಿ ಟ್ಯಾಂಕರ್ ಮಾಲೀಕರಿಗೆ 3 ವರ್ಷ ಕಳೆದರೂ 27.28 ಲಕ್ಷ ರೂ. ಬಾಕಿ ಹಣ ನೀಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ನೀರು ನೀಡಿದವರಿಗೆ ಮೋಸ: ಖಾಸಗಿ ಟ್ಯಾಂಕರ್ ಮಾಲೀಕ ರಮೇಶ್ ಮಾತನಾಡಿ, 3 ವರ್ಷದ ಪಟ್ಟಣ ನೀರಿಲ್ಲದೇ ಸಂಕಷ್ಟಕ್ಕೆ ಸಿಲುಕಿತ್ತು. ಹಗಲು ರಾತ್ರಿ 23 ವಾರ್ಡ್‌ಗಳಿಗೆ ಪುರಸಭೆ ಸದಸ್ಯರ ಉಪಸ್ಥಿತಿಯಲ್ಲಿ ನೀರು ಸರಬರಾಜು ಮಾಡಲಾಗಿದೆ. ಆದರೆ ಪುರಸಭೆ ಅಧಿಕಾರಿಗಳು ಹಣ ನೀಡದೆ ವಂಚಿಸಿದ್ದಾರೆ ಎಂದು ಆರೋಪಿಸಿದರು.
ಮಾಜಿ ಪುರಸಭೆ ಅಧ್ಯಕ್ಷ ಸಿ.ಡಿ ಚಂದ್ರಶೇಖರ್ ಮಾತನಾಡಿ, ಪುರಸಭೆ ಅಧ್ಯಕ್ಷನಾಗಿದ್ದಾಗ ಬರಗಾಲದಿಂದ ನೀರಿನ ಹಾಹಾಕಾರ ಸೃಷ್ಟಿಯಾಗಿತ್ತು. ಅಂತಹ ಸಮಯದಲ್ಲಿ ಟ್ಯಾಂಕರ್ ಮಾಲೀಕರು ಸಾರ್ವಜನಿಕರಿಗೆ ಪ್ರಾಮಾಣಿಕವಾಗಿ ನೀರು ಸರಬರಾಜು ಮಾಡಿದ್ದಾರೆ. ನನ್ನ ಅವಧಿಯಲ್ಲಿ 31 ಲಕ್ಷ ರೂ. ಬಿಡುಗಡೆಯಾಗಿದೆ. ಉಳಿದ 27.28 ಲಕ್ಷ ರೂ. ನೀಡಲು ಮುಖ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಟ್ಯಾಂಕರ್ ಮಾಲೀಕರ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ ಎಂದರು.
ಸಿ.ಸಿ ರಸ್ತೆ, ಚರಂಡಿ ಕಾಮಗಾರಿಗೆ ಮಾಡಿರುವ ಬಿಲ್ ಅಲ್ಲ. ಮನುಷ್ಯನಿಗೆ ಅವಶ್ಯಕವಾಗಿ ಬೇಕಾಗಿರುವ ನೀರು ಸರಬರಾಜು ಮಾಡಿರುವ ಹಣವಾಗಿದೆ. ಮೂರು ವರ್ಷ ಕಳೆದರೂ ಪುರಸಭೆ ಹಣ ನೀಡದಿರು ವುದರಿಂದ ನೀರು ಸರಬರಾಜು ಮಾಡಿರುವುದು ನಷ್ಟ ಉಂಟುಮಾಡಿದೆ. ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗೆಮನವಿ ನೀಡಿದರೂ ಸ್ಪಂದನೆ ಸಿಕ್ಕಿಲ್ಲ. ಪುರಸಭೆ ಎಲ್ಲಾ ಸದಸ್ಯರೂ ಹಣ ನೀಡುವಂತೆ ತಿಳಿಸಿದರೂ ನೀಡುತ್ತಿಲ್ಲ. ಆದ್ದರಿಂದ ಟ್ಯಾಂಕರ್ ಬಾಕಿ ಬಿಲ್ ಬರುವವರೆಗೆ ಪುರಸಭೆ ಮುಂದೆ ಪ್ರತಿದಿನ ಸತ್ಯಾಗ್ರಹ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.
ಪುರಸಭೆ ಸದಸ್ಯ ಮಲ್ಲಿಕಾರ್ಜುನಯ್ಯ, ಚೇತನ್, ಪರಮೇಶ್, ವಿನಯ್, ಶಿವಕುಮಾರ್, ಕಿರಣ್ ನಿಶಾನಿ, ಸುರೇಶ್, ಮೋಹನ, ಹರ್ಷ ಇತರರಿದ್ದರು.