Advertisement

ಕ್ಯಾಮರಾ ಕಣ್ಗಾವಲಿನಲ್ಲಿ ನಗರಸಭೆ ಕೆಲಸ! 

04:45 PM Sep 29, 2018 | Team Udayavani |

ಗದಗ: ಇಲ್ಲಿನ ಗದಗ- ಬೆಟಗೇರಿ ನಗರಸಭೆ ಆಡಳಿತದಲ್ಲಿ ಪಾರದರ್ಶಕತೆ ಒತ್ತು ನೀಡಿ, ಮದ್ಯವರ್ತಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಮಹತ್ವದ ಹೆಜ್ಜೆಯಿಟ್ಟಿದೆ. ನಗರಸಭೆ ಕಂದಾಯ ವಿಭಾಗ, ಉಗ್ರಾಣ ಸೇರಿದಂತೆ ಪ್ರಮುಖ ವಿಭಾಗಗಳಲ್ಲಿ ಸಿಸಿ ಕ್ಯಾಮರಾ ಕಣ್ಗಾವಲಿಡುವ ಮೂಲಕ ಸಿಬ್ಬಂದಿಗೆ ಚುರುಕು ಮುಟ್ಟಿಸಿದೆ.

Advertisement

ಸ್ಥಳೀಯ ಗದಗ- ಬೆಟಗೇರಿ ನಗರಸಭೆ ವಿರುದ್ಧ ನಾನಾ ರೀತಿಯ ಆರೋಪಗಳು ಕೇಳಿ ಬರುತ್ತಿವೆ. ಆ ಪೈಕಿ, ಸಿಬ್ಬಂದಿ ಕಚೇರಿ ಸಮಯದಲ್ಲಿ ಕುರ್ಚಿಯಲ್ಲೇ ಇರುವುದಿಲ್ಲ. ಕಚೇರಿಯಲ್ಲೇ ಬಹಿರಂಗವಾಗಿ ಸಾರ್ವಜನಿಕರಿಂದ ಲಂಚ ಪಡೆಯುತ್ತಿದ್ದಾರೆ. ಇನ್ನ ಎಲ್ಲ ವಿಭಾಗಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿದೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿವೆ. ಈ ವಿಚಾರ ಹಲವು ಬಾರಿ ನಗರಸಭೆ ಸಾಮಾನ್ಯ ಸಭೆಯಲ್ಲೂ ಪ್ರತಿಧ್ವನಿಸಿತ್ತು. ಅದರೊಂದಿಗೆ ಕಂದಾಯ, ಉಗ್ರಾಣ(ಸ್ಟೋರ್‌) ಸೇರಿದಂತೆ ನಗರಸಭೆಯ ಪ್ರಮುಖ ಭಾಗಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಮನೆ ಹಾಗೂ ನಿವೇಶನಗಳ ಖಾತಾ ಬದಲಾವಣೆ, ವಾರ್ಷಿಕ ತೆರಿಗೆ, ವಾಣಿಜ್ಯ ಮಳಿಗೆಗಳು ಹಾಗೂ ಇತರೆ ಆದಾಯ ಮೂಲಗಳಿಂದ ಆರ್ಥಿಕ ಸಂಪನ್ಮೂಲವನ್ನು ಕಂದಾಯ ವಿಭಾಗಕ್ಕೆ ಹರಿದು ಬರುತ್ತದೆ. ಕಂದಾಯ ವಿಭಾಗದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿದೆ. ಮಧ್ಯವರ್ತಿಗಳಿಲ್ಲದೇ ಯಾವುದೇ ಕೆಲಸವಾಗುತ್ತಿಲ್ಲ. ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಸ್ವತಃ ನಗರಸಭೆ ಸದಸ್ಯರೇ ಸಾಮಾನ್ಯ ಸಭೆಗಳಲ್ಲಿ ಅಳಲು ತೋಡಿಕೊಂಡಿದ್ದರು.

ಕಂದಾಯ ವಿಭಾಗದಲ್ಲೇ ಹೆಚ್ಚು: ಈ ಪೈಕಿ ಮೊದಲ ಹಂತದಲ್ಲಿ ನಗರಸಭೆ ಕಂದಾಯ ವಿಭಾಗದ ಆಯ್ದ 10 ಕಡೆ ತಲಾ ಒಂದು ಹಾಗೂ ಉಗ್ರಾಣದಲ್ಲಿ 2 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಪ್ರತಿ ಕ್ಯಾಮರಾ ಸುಮಾರು 50 ಅಡಿವರೆಗಿನ ದೃಶ್ಯಾವಳಿಗಳನ್ನು ಸೆರೆ ಹಿಡಿಯಲಿದ್ದು, 24×7 ಕಾಲ ಕಾರ್ಯ ನಿರ್ವಹಿಸಲಿದೆ. ಸುಮಾರು 2 ತಿಂಗಳವರೆಗಿನ ದೃಶ್ಯಾವಳಿಗಳನ್ನು ಸಂಗ್ರಹಿಸುವ ಸಾಮರ್ಥ್ಯದ ಡಿವಿಆರ್‌ ಅಳವಡಿಸಲಾಗಿದೆ. ಇದರ ನೇರ ದೃಶ್ಯಾವಳಿಗಳನ್ನು ನಗರಸಭೆ ಹೊರಾಂಗಣದಲ್ಲಿ ಪ್ರದರ್ಶನ ಫಲಕದಲ್ಲಿ ಪ್ರದರ್ಶಿಸಲು ಉದ್ದೇಶಿಸಿದೆ. ಇದರಿಂದ ಮಧ್ಯವರ್ತಿಗಳಿಗೆ ಕಡಿವಾಣ ಹಾಕುವುದರೊಂದಿಗೆ ಸಿಬ್ಬಂದಿಯಲ್ಲಿ ಸಮಯ ಪಾಲನೆ, ಶಿಸ್ತು ಹೆಚ್ಚಿಸಲು ಹಾಗೂ ಅವರಿಗೆ ಭದ್ರತಾ ದೃಷ್ಟಿಯಿಂದಲೂ ಇದು ಅನುಕೂಲವಾಗುತ್ತದೆ ಎಂಬುದು ನಗರಸಭೆ ಅಧಿಕಾರಿಗಳ ಮಾತು.

ಈ ಹಿಂದೆ ನಗರಸಭೆ ಕಾರಿಡಾರ್‌ ಹಾಗೂ ಪ್ರಾಂಗಣದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅದರೊಂದಿಗೆ ಮೊದಲ ಹಂತದಲ್ಲಿ ಒಳಂಗಣದಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗುತ್ತಿದೆ. 2 ವರ್ಷಗಳಿಂದೆ ಖರೀದಿಸಿದ್ದ ಡಿವಿಆರ್‌ ಅನ್ನು ಬಳಸಿಕೊಳ್ಳಲಾಗುತ್ತಿದ್ದು, ಸಿಸಿ ಕ್ಯಾಮರಾ ಪೂರೈಕೆಗೆ ಏಜೆನ್ಸಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ಒಂದು ವಾರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ನಗರಸಭೆ ಕಾರ್ಯನಿರ್ವಾಹಕ ಅಭಿಯಂತರ ಪತ್ತಾರ ಮಾಹಿತಿ ನೀಡಿದರು.

ಸಾರ್ವಜನಿಕರ ಹಿತದೃಷ್ಟಿಯಿಂದ ಹಗಲಿರುಳು ಪ್ರಾಮಾಣಿಕತೆಯಿಂದ ಕೆಲಸ ಮಾಡಿದವರನ್ನು ಅನುಮಾನಿಸುವಂಥ ಕಾಲವಿದು. ಮದ್ಯವರ್ತಿಗಳ ಹಾವಳಿ ಬಗ್ಗೆ ಮೇಲಿಂದ ಮೇಲೆ ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಇದರಿಂದ ಸಿಬ್ಬಂದಿಯಲ್ಲಿ ಶಿಸ್ತು ತರುವುದರಿಂದಿಗೆ ಜನರಿಗೆ ಪಾರದರ್ಶಕ ಆಡಳಿತ ನೀಡಲು ಸಾಧ್ಯವಾಗುತ್ತದೆ.
. ಮನ್ಸೂರ್‌ ಅಲಿ
ನಗರಸಭೆ ಪೌರಾಯುಕ್ತರು.

Advertisement

ಕೆಲ ವರ್ಷಗಳಿಂದ ಕಂದಾಯ ವಿಭಾಗದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಕಾಲಕಾಲಕ್ಕೆ ನಗರಸಭೆ ಆಡಳಿತದ ಗಮನ ಸೆಳೆದಿದ್ದೇವೆ. ಕೊನೆಗೂ ನಮ್ಮ ಬೇಡಿಕೆಗೆ ಪೌರಾಯುಕ್ತರು ಸ್ಪಂದಿಸಿದ್ದು, ಆಡಳಿತ ಸುಧಾರಣೆಗಾಗಿ ಸಿಸಿ ಕ್ಯಾಮರಾ ಅಳವಡಿಕೆ ಕಾರ್ಯ ಸ್ವಾಗತಾರ್ಹ.  
ರಾಘವೇಂದ್ರ ಯಳವತ್ತಿ
ನಗರಸಭೆ ಬಿಜೆಪಿ ಸದಸ್ಯ

. ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next