ಚಿತ್ತಾಪುರ: ಪಟ್ಟಣದ ಘನತ್ಯಾಜ್ಯ ನಿರ್ವಹಣೆ ಘಟಕದಲ್ಲಿ 15ನೇ ಹಣಕಾಸು ಯೋಜನೆಯಡಿ ಸ್ಕ್ರೀನಿಂಗ್ ಮಶಿನ್ ಶೆಡ್ ನಿರ್ಮಾಣ ಕಾಮಗಾರಿ ಕಳಪೆಯಾಗಿದ್ದು, ಸರ್ಕಾರದ ಅನುದಾನ ಲೂಟಿಯಾಗಿದೆ. ಹೀಗಾಗಿ ತನಿಖೆ ಮಾಡಬೇಕು ಎಂದು ಬಿಜೆಪಿ ಸದಸ್ಯ ರಮೇಶ ಬೊಮ್ಮನಳ್ಳಿ ಆಗ್ರಹಿಸಿಸುತ್ತಿದ್ದಂತೆ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಚಿತ್ತಾಪುರ ಪುರಸಭೆಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಫ್ರಾಡ್ ಎನ್ನುವ ಪದ ವಾಪಸ್ ಪಡೆಯಬೇಕು ಎಂದು ಸದಸ್ಯೆ ಶೀಲಾ ಕಾಶಿ ಆಗ್ರಹಿಸಿದರು.
ಆಗ ಕಾಂಗ್ರೆಸ್ ಸದಸ್ಯರೆಲ್ಲರೂ ಬಿಜೆಪಿ ಸದಸ್ಯರ ಮೇಲೆ ಮುಗಿ ಬಿದ್ದರು. ವಿಪಕ್ಷ ನಾಯಕ ನಾಗರಾಜ ಭಂಕಲಗಿ ಮಧ್ಯಪ್ರವೇಶಿಸಿ ವಿರೋಧ ಪಕ್ಷದವರಿಗೆ ಮಾತನಾಡುವ ಹಕ್ಕು ಮತ್ತು ಪಶ್ನೆ ಮಾಡುವ ಹಕ್ಕಿದೆ. ನಾವು ಮಾಡಿದ ಆರೋಪ ತಪ್ಪು ಇದ್ದರೆ ಅದಕ್ಕೆ ಸಂಬಂಧಪಟ್ಟ ದಾಖಲೆ ಪ್ರಸ್ತುತಪಡಿಸಿ. ನಮಗೂ ಎಲ್ಲವೂ ಗೊತ್ತಿದೆ. ಸುಮ್ಮನೆ ವಿಷಯಾಂತರ ಮಾಡಬೇಡಿ ಎಂದು ಹೇಳಿದರು.
ಕಳೆದ ಮಾರ್ಚ್ ತಿಂಗಳಲ್ಲಿ ಪಟ್ಟಣದಲ್ಲಿ ಕಾರ್ಯಕ್ರಮವೊಂದರ ಬ್ಯಾನರ್ ಕಟ್ಟಲು ಅನುಮತಿಗಾಗಿ ಪುರಸಭೆಯಿಂದ ಹಣ ವಸೂಲಿ ಮಾಡಿದ್ದೀರಿ. ಆ ಹಣ ಪುರಸಭೆ ನಿಧಿಗೆ ಜಮಾ ಆಗಿಲ್ಲ. ಎಲ್ಲಿಗೆ ಹೋಯ್ತು? ಎಂಬುದು ಹೇಳಿ ಎಂದು ಸದಸ್ಯ ಕೋಟೇಶ್ವರ ರೇಷ್ಮಿ ಕೇಳಿದರು.
ಅಧಿಕಾರಿ ರಾಹುಲ್ ಕಾಂಬಳೆ ಉತ್ತರ ನೀಡಲು ತಡವರಿಸಿದರು. ಪುರಸಭೆಯಲ್ಲಿ ಪ್ರತಿ ತಿಂಗಳು ಝರಾಕ್ಸ್ ಮಾಡಲು ಸಿಕ್ಕಾಪಟ್ಟಿ ಹಣ ಖರ್ಚು ಮಾಡಲಾಗುತ್ತಿದೆ. ಹೀಗಾಗಿ ಹೊಸದೊಂದು ಝರಾಕ್ಸ್ ಯಂತ್ರ ಖರೀದಿ ಮಾಡಿ ಎಂದು ಸದಸ್ಯ ಶ್ರೀನಿವಾಸರೆಡ್ಡಿ ಪಾಲಪ್ ಹೇಳಿದರು. ಸಭೆಯಲ್ಲಿ ನೈರ್ಮಲ್ಯ ನಿರೀಕ್ಷಕರು ಇರುವುದು ಅವಶ್ಯವಿದೆ. ಸದಸ್ಯರ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡುವವರು ಯಾರು? ಸಭೆಯ ಮಾಹಿತಿ ಇದ್ದರೂ ಕೂಡ ಗೈರು ಹಾಜರಿಯಾಗಿರುವುದು ಸರಿಯಲ್ಲ. ಅವರ ಮೇಲೆ ಕ್ರಮ ಕೈಗೊಳ್ಳಿ ಎಂದು ವಿಪಕ್ಷ ನಾಯಕ ನಾಗರಾಜ ಭಂಕಲಗಿ ಆಗ್ರಹಿಸಿದರು.
ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಪುರಸಭೆ ಉಪಾಧ್ಯಕ್ಷೆ ಶ್ರುತಿ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷ ಗೋವಿಂದ ನಾಯಕ, ಸದಸ್ಯರಾದ ವಿನೋದ ಗುತ್ತೇದಾರ, ಕಾಶಿಬಾಯಿ ಮರೇಪ್ಪ, ಬೇಬಿ ಸುಭಾಷ, ಸಂತೋಷ ಚೌದ್ರಿ, ಶಹನಾಜಬೇಗಂ ಎಕ್ಬಾಲ್, ಶಿವರಾಜ ಪಾಳೇದ್, ಸುಶೀಲಾ ದೇವಸುಂದರ, ಶ್ಯಾಮ ಮೇದಾ, ಪ್ರಭು ಗಂಗಾಣಿ, ಅನ್ನಪೂರ್ಣ ನಾಗಪ್ಪ, ಅತೀಯಾ ಬೇಗಂ, ಮನೋಜ ರಾಠೊಡ, ಶಶಿಕಾಂತ ಭಂಡಾರಿ, ಕೋಟೇಶ್ವರ ರೇಷ್ಮಿ ಸೇರಿದಂತೆ ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.