Advertisement

ಪುರಸಭೆ ಹೈಟೆಕ್‌ ಕಟ್ಟಡ ಹಸ್ತಾಂತರಕ್ಕೆ ಗ್ರಹಣ

04:13 PM Oct 19, 2021 | Team Udayavani |

ಮಸ್ಕಿ: ಪುರಸಭೆ ಕಚೇರಿಗಾಗಿ 2 ಕೋಟಿ ಮೊತ್ತದಲ್ಲಿ ಹೈಟೆಕ್‌ ಕಟ್ಟಡ ನಿರ್ಮಾಣ ಮಾಡಲಾಗಿದೆ. ಕಾಮಗಾರಿಯೂ ಮುಕ್ತಾಯವಾಗಿ ಹಲವು ದಿನ ಕಳೆದಿವೆ. ಆದರೆ ಹೊಸ ಕಟ್ಟಡ ಆರಂಭಕ್ಕೆ ಇನ್ನು ಮೀನಮೇಷ ಎಣಿಸಲಾಗುತ್ತಿದೆ!

Advertisement

ಗ್ರಾಮ ಪಂಚಾಯಿತಿಯಿಂದ ನೇರವಾಗಿ ಪುರಸಭೆಯಾಗಿ ಮೇಲ್ದರ್ಜೆಗೇರಿದ ಬಳಿಕ ಅದೇ ಹಳೆಯ ಕಟ್ಟದಲ್ಲೇ ಇಲ್ಲಿನ ಆಡಳಿತ ನಡೆಯಿತಿತ್ತು. ಹಳೆಯ ಮತ್ತು ಕಿರಿದಾದ ಕಟ್ಟಡದಲ್ಲಿ ಸುಗಮ ಆಡಳಿತಕ್ಕೆ ಕಷ್ಟವಾಗಿದ್ದರಿಂದ ಹಳೆ ಕಟ್ಟಡ ತೆರವು ಮಾಡಿ ಹೊಸದಾಗಿ ಹೈಟೆಕ್‌ ಕಟ್ಟಡ ನಿರ್ಮಾಣಕ್ಕೆ 2ಕೋಟಿ ಅನುದಾನ ಬಿಡುಗಡೆ ಮಾಡಲಾಯಿತು.

ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ಕಾಮಗಾರಿ ವಹಿಸಲಾಗಿತ್ತು. ಆರಂಭದಲ್ಲಿ ವಿವಿಧ ಕಾರಣಕ್ಕೆ ವಿಳಂಬವಾಗಿದ್ದ ಕೆಲಸ ಈಗ ಪೂರ್ಣಗೊಂಡಿದೆ. ಆದರೆ ಪೂರ್ಣಗೊಂಡ ಕಟ್ಟಡ ಬಳಕೆ ಮಾಡಿಕೊಳ್ಳಲು ಪುರಸಭೆ ಇದುವರೆಗೂ ವಿಳಂಬ ಮಾಡುತ್ತಿರುವುದು ಸಾರ್ವಜನಿಕ ಟೀಕೆಗೆ ಗುರಿಯಾಗಿದೆ.

ತಾತ್ಕಾಲಿ ಕಚೇರಿ

ಪುರಸಭೆಗಾಗಿ ಹೊಸ ಕಟ್ಟಡ ನಿರ್ಮಾಣ ಮಾಡುತ್ತಿರುವುದರಿಂದ ತಾತ್ಕಾಲಿಕವಾಗಿ ಪುರಸಭೆ ಕಚೇರಿಯನ್ನು ಎಪಿಎಎಂಸಿ ಮಳಿಗೆಯಲ್ಲಿ ನಡೆಸಲಾಗುತ್ತಿದೆ. ಪಟ್ಟಣದ ಹೊರ ವಲಯದಲ್ಲಿರುವ ತಾತ್ಕಾಲಿಕ ಕಚೇರಿಗೆ ತೆರಳು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕಟ್ಟಡ ನಿರ್ಮಾಣ ಹಂತದಲ್ಲಿದ್ದರಿಂದ ಅನಿವಾರ್ಯವಾಗಿ ದೂರದ ಕಟ್ಟಡಕ್ಕೆ ತೆರಳಬೇಕಿತ್ತು. ಆದರೆ ಈಗ ಹೊಸ ಕಟ್ಟಡ ನಿರ್ಮಾಣ ಪೂರ್ಣವಾದರೂ ಆಡಳಿತ ಶಿಫ್ಟ್‌ ಆಗದೇ ಇರುವುದರಿಂದ ಜನರಲ್ಲಿ ಆಕ್ರೋಶ ಹೆಚ್ಚಾಗಿದೆ. ಇನ್ನು ಕಟ್ಟಡ ಹಸ್ತಾಂತರ ಕುರಿತು ಲ್ಯಾಂಡ್‌ ಆರ್ಮಿ ಮತ್ತು ಪುರಸಭೆ ಅಧಿಕಾರಿಗಳ ನಡುವೆ ಸೂಕ್ತ ಸಂವಹನದ ಕೊರತೆಯೂ ಕಾಣುತ್ತಿದೆ.

Advertisement

ರಾಜಕೀಯ ತಿಕ್ಕಾಟ?

ಇಲ್ಲಿನ ಪುರಸಭೆ ಕಟ್ಟಡ ನಿರ್ಮಾಣಕ್ಕೆ ಹಿಂದಿನ ಶಾಸಕ ಪ್ರತಾಪಗೌಡ ಪಾಟೀಲ್‌ ಶಾಸಕರಾಗಿದ್ದ ಅವಧಿಯಲ್ಲಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ ಈಗ ಕಳೆದ ಉಪಚುನಾವಣೆಯಲ್ಲಿ ಅವರು ಸೋತು ಮಾಜಿಯಾಗಿದ್ದಾರೆ.

ಆರ್‌.ಬಸನಗೌಡ ತುರುವಿಹಾಳ ಈಗ ಹಾಲಿ ಶಾಸಕರಾಗಿದ್ದು, ಇವರ ಕೈಯಿಂದಲೇ ಈಗ ಈ ಹೊಸ ಕಟ್ಟಡ ಉದ್ಘಾಟನೆಯಾಗಬೇಕಿದೆ. ಇದೇ ಕಾರಣಕ್ಕಾಗಿಯೇ ಕಟ್ಟಡ ಹಸ್ತಾಂತರ ಪಡೆಯಲು ಪುರಸಭೆ ಹಿಂದೇಟು ಹಾಕುತ್ತಿದೆ ಎನ್ನುವ ಅನುಮಾನಗಳು ಬಲವಾಗಿವೆ. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಅವ ಧಿಯಲ್ಲೇ ಈ ಕಟ್ಟಡ ಬಳಕೆಗೆ ಅರ್ಪಣೆಯಾಗಬೇಕಿತ್ತು. ಆದರೆ ಈಗ ಉದ್ಘಾಟನೆ ಮಾಡಿದರೆ ಹೇಗೆ? ಎನ್ನುವ ಪ್ರಶ್ನೆಯನ್ನು ಪುರಸಭೆಯ ಹಲವು ಮಾಜಿ ಸದಸ್ಯರು ಎತ್ತಿದ್ದಾರೆ ಎನ್ನಲಾಗುತ್ತಿದೆ. ಈ ರಾಜಕೀಯ ತಿಕ್ಕಾಟದ ಫಲವಾಗಿ ಪುರಸಭೆ ಅಧಿಕಾರಿಗಳು ಹೊಸ ಕಟ್ಟಡದ ಪ್ರವೇಶಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ಮೂತ್ರ ವಿಸರ್ಜನೆ ತಾಣ

ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಿದ ಪುರಸಭೆ ಹೊಸ ಕಟ್ಟಡ ಕಾಮಗಾರಿ ಮುಗಿದರೂ ಬಳಕೆಗೆ ಅರ್ಪಣೆಯಾಗದೇ ಇರುವುದರಿಂದ ಇಲ್ಲಿನ ಪ್ರದೇಶ ಈಗ ಬಯಲು ಮಲ, ಮೂತ್ರ ವಿಸರ್ಜನೆ ತಾಣವಾಗಿದೆ. ಕಟ್ಟಡ ಬಳಸದೇ ಕೈ ಬಿಟ್ಟಿದ್ದರಿಂದ ಮಸ್ಕಿ ಪಟ್ಟಣದ ಹೃದಯ ಭಾಗದಲ್ಲಿರುವ ಈ ಪ್ರದೇಶಕ್ಕೆ ಜನರು ಆಗಮಿಸಿ ಮಲ, ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.

-ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next