Advertisement
ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಜೂನ್, ಜುಲೈನಲ್ಲಿ ಪುರಸಭೆ ಚುನಾವಣೆ ನಿಗದಿಯಾಗುತ್ತದೆ ಎಂದು ನಿರಾಳರಾಗಿದ್ದ ಮುಖಂಡರು, ದಿಢೀರ್ ಚುನಾವಣೆ ಘೋಷಣೆಯಾಗಿದ್ದರಿಂದ ಮೈಗೊಡವಿಕೊಂಡು ಎದ್ದೇಳುವಂತೆ ಮಾಡಿದೆ.
Related Articles
Advertisement
ಆಕಾಂಕ್ಷಿಗಳು ಚುನಾವಣೆ ಘೋಷಣೆ ಆದ ಬೆನ್ನಲ್ಲೇ ಪ್ರಮುಖ ಮುಖಂಡರನ್ನು ಭೇಟಿ ಮಾಡಿ ಟಿಕೆಟ್‌ಗೆ ದುಂಬಾಲು ಬೀಳುವಂತಾಗಿದೆ. ಬಿಜೆಪಿಯಿಂದಲೂ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಅದಕ್ಕಾಗಿ, ಮುಖಂಡರು ಸೋಮವಾರ ಸಭೆ ಸೇರಲಿದ್ದಾರೆ ಎನ್ನಲಾಗಿದೆ. ಅಮಾವಾಸ್ಯೆ ಮತ್ತು ಪಾಡ್ಯಮಿ ಇರುವುದರಿಂದ ಸೋಮವಾರದಿಂದ ಸಭೆಗಳನ್ನು ಮಾಡಿ ಪುರಸಭೆ ಚುನಾವಣೆಗೆ ತಯಾರಿ ನಡೆಸಲಾಗುವುದು ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ಆಕಾಂಕ್ಷಿಗಳು ಮತ್ತು ಮುಖಂಡರು ಹಾಗೂ ಕಾರ್ಯಕರ್ತರ ಸಭೆಯನ್ನು ಶಾಸಕರ ನೇತೃತ್ವದಲ್ಲಿ ಕರೆಯಲಾಗಿದೆ ಎಂದು ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ ಹೇಳಿದ್ದಾರೆ. ಸೋಮವಾರ ಕಾಂಗ್ರೆಸ್‌ನ ಸಭೆ ಕರೆಯಲಾಗಿದೆ. ದೇವನಹಳ್ಳಿ ನಗರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸ ಹಾಗೂ ಸಿದ್ಧರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮಾಡಿರುವ ಅಭಿವೃದ್ಧಿ ಯೋಜನೆಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತೇವೆ ಎಂದು ಪುರಸಭಾ ಮಾಜಿ ಅಧ್ಯಕ್ಷ ಎಂ.ಮೂರ್ತಿ ಹೇಳುತ್ತಾರೆ.
ಕದನ ಕುತೂಹಲ: ಮಾರ್ಚ್ 14ರಂದು ಪುರಸಭೆ ಅಧಿಕಾರವಧಿ ಮುಗಿದಿತ್ತು. ದಿಢೀರ್ ಚುನಾವಣೆ ಘೋಷಣೆ ಆಗಿರುವುದರಿಂದ ಮುಖಂಡರು ಹಾಗೂ ಕಾರ್ಯಕರ್ತರು ಅನಿವಾರ್ಯವಾಗಿ ಚುನಾವಣೆ ಎದುರಿಸುವಂತಾಗಿದೆ. ಚುನಾವಣೆ ಘೋಷಣೆ ಆಗುತ್ತಿದ್ದಂತೆ ಕೆಲವೆಡೆ ಸಾರ್ವಜನಿಕರು ಯಾವ ಯಾವ ಪಕ್ಷದಲ್ಲಿ ಆಕಾಂಕ್ಷಿಗಳು ಇದ್ದಾರೆ ಎಂಬುದರ ಬಗ್ಗೆ ಗಹನ ಚರ್ಚೆಯಲ್ಲಿ ತೊಡಗಿರುವುದು ಕಂಡುಬರುತ್ತಿದೆ. ಹಾಗಾಗಿ, ಚುನಾವಣೆ ಘೋಷಣೆ ಆದ ಕೂಡಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿದಂತಾಗಿವೆ.
ಕಳೆದ ಪುರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 10, ಜೆಡಿಎಸ್ 9 ಹಾಗೂ 4ಮಂದಿ ಪಕ್ಷೇತರರು ಗೆಲವು ಸಾಧಿಸಿದ್ದರಿಂದ ಯಾವುದೇ ಪಕ್ಷಕ್ಕೂ ಬಹುಮತ ಸಿಗದ ಕಾರಣ 2ಪಕ್ಷಗಳು ಸೇರಿ ಅಧಿಕಾರ ನಡೆಸಿದ್ದವು. ಈ ಬಾರಿಯ ಕದನ ಕುತೂಹಲಕ್ಕೆ ಮೇ 31ರಂದು ಹೊರಬೀಳುವ ಪುರಸಭಾ ಚುನಾವಣಾ ಫಲಿತಾಂಶದೊಂದಿಗೆ ತೆರೆಬೀಳಲಿದೆ.
* ಎಸ್.ಮಹೇಶ್