ರಾಮನಗರ: ಜಿಲ್ಲೆಯ ಕನಕಪುರ ನಗರಸಭೆ ಮತ್ತು ಮಾಗಡಿ ಪುರಸಭೆಗಳಿಗೆ ನವೆಂಬರ್ 12ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಪ್ರಕಟಿಸಿದೆ. ಜಿಲ್ಲೆಯಲ್ಲಿ ರಾಜಕೀಯ ಗರಿಗೆದರಿದೆ. ಸ್ಪರ್ಧಾಕಾಂಕ್ಷಿಗಳು ಟಿಕೆಟ್‌ಗಾಗಿ ತಮ್ಮ ನಾಯಕರ ದುಂಬಾಲು ಬಿದ್ದಿದ್ದಾರೆ.
ಕನಕಪುರ ನಗರಸಭೆ ಮತ್ತು ಮಾಗಡಿ ಪುರಸಭೆಯ ಆಡಳಿತಾವಧಿ ಕಳೆದ ಮಾರ್ಚ್ ನಲ್ಲೇ ಅಂತ್ಯವಾಗಿತ್ತು. ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಾರ್ಡ್‌ಗಳಿಗೆ ನಿಗಧಿಯಾದ ಮೀಸಲಾತಿ ವಿಚಾರದಲ್ಲಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಹೀಗಾಗಿ ವಿಳಂಬವಾಗಿದೆ. ಇದೀಗ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಕನಕಪುರ ನಗರ ಮತ್ತು ಮಾಗಡಿ ಪಟ್ಟಣಗಳಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ.
ಡಿಕೆಶಿ ಗೈರಿನಲ್ಲಿ ಚುನಾವಣೆ!: ಕನಕಪುರ ಶಾಸಕ ಡಿ.ಕೆ. ಶಿವಕುಮಾರ್ ತಿಹಾರ ಜೈಲಿನಲ್ಲಿದ್ದಾರೆ. ಸಂಸದ ಡಿ.ಕೆ. ಸುರೇಶ್ ಅವರು ಸಹೋದರನ ಕಾನೂನು ಹೋರಾಟಕ್ಕೆ ಸಹಕಾರ ನೀಡುತ್ತ ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದಾರೆ.ಡಿಕೆ ಸಹೋದರರಿಲ್ಲದೇ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಕನಕಪುರ ಕಾಂಗ್ರೆಸ್ಸಿಗರಲ್ಲಿದೆ. ಕನಕಪುರ ರಾಜಕೀಯದ ಇತಿಹಾಸದಲ್ಲೆಂದು ಬಹುಶಃ ಇಂತಹ ಪರಿಸ್ಥಿತಿಯನ್ನು ಅಲ್ಲಿನ ಕಾಂಗ್ರೆಸ್ಸಿಗರು ಎದುರಿಸಿಲ್ಲ ಎಂಬ ವಿಚಾರ ಜಿಲ್ಲಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಚುನಾವಣೆಗೂ ತಮ್ಮಲ್ಲೇ ಒಮ್ಮತಕ್ಕೆ ಬರಲಾರದೆ, ಸಂಸದ ಡಿ.ಕೆ.ಸುರೇಶ್ ಅವರಮೊರೆ ಹೋಗಿದ್ದರು. ಇದೀಗ ಕನಕಪುರ ನಗರಸಭೆಯ 31 ವಾರ್ಡ್‌ಗಳಿಗೆ ಚುನಾವಣೆ ಎದುರಾಗಿದ್ದು, ಕನಕಪುರದ ಕಾಂಗ್ರೆಸ್ಸಿಗರಲ್ಲಿ ಆತಂಕ ಮನೆ ಮಾಡಿದೆ.
ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ: ಎಲ್ಲಾ ಪಕ್ಷಗಳಂತೆ ಕನಕಪುರ ಕಾಂಗ್ರೆಸ್‌ನಲ್ಲೂ ಭಿನ್ನಾಭಿಪ್ರಾಯಗಳು ಇವೆ. ಆದರೆ, ಡಿಕೆ ಸಹೋದರ ಹಿಡಿತದಿಂದಾಗಿ ಒಂದು ಸಣ್ಣ ಘಟನೆಗೂ ಇಲ್ಲಿ ಅವಕಾಶವಿರಲಿಲ್ಲ. ಆಕಾಂಕ್ಷಿಗಳು ಟಿಕೆಟ್‌ಗಾಗಿ ನವದೆಹಲಿಯಲ್ಲಿರುವ ಡಿ.ಕೆ.ಸುರೇಶ್ ಅವರೊಟ್ಟಿಗೆ ಸಂಪರ್ಕಕ್ಕೆ ಹಾತೊರೆಯುತ್ತಿದ್ದಾರೆ. ಕನಕಪುರ ನಗರಸಭೆಯ ಚುನಾವಣೆ ಹಿನ್ನೆಲೆಯಲ್ಲಿ ಇದೀಗ ಡಿಕೆ ಸಹೋದರರ ಗೈರಿನಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ರವಿ ಅವರ ಹೊಣೆಗಾರಿಕೆ ಹೆಚ್ಚಾದಂತಿದೆ. ಒಟ್ಟಾರೆ ಸ್ಪರ್ಧಾಳುಗಳ ಪಟ್ಟಿಗೆ ಅಂತಿಮ ಮುದ್ರೆ ಒತ್ತುವುದು ಸಂಸದ ಡಿ.ಕೆ.ಸುರೇಶ್. ಹೀಗಾಗಿ ಸ್ಥಳೀಯ ಮುಖಂಡರು, ಆಕಾಂಕ್ಷಿಗಳ ಪಟ್ಟಿಯನ್ನು ಹಿಡಿದು ನವದೆಹಲಿಗೆ ಹಾರಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಮಾಗಡಿಯಲ್ಲಿ ಬಾಲಕೃಷ್ಣ, ಮಂಜು ನಿರ್ಧಾರ: ಮಾಗಡಿ ಪುರಸಭೆಯ 23 ವಾರ್ಡ್‌ಗಳಿಗೆ ಆಕಾಂಕ್ಷಿಗಳ ಪಟ್ಟಿಯನ್ನು ಇತ್ಯಾರ್ಥಗೊಳಿಸುವ ವಿಚಾರದಲ್ಲಿ ಯಾವ ಆತಂಕವೂ ಇಲ್ಲ. ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಕಾಂಗ್ರೆಸ್ ಸ್ಪರ್ಧಾಳುಗಳ ಪಟ್ಟಿಯನ್ನು ಇತ್ಯರ್ಥಗೊಳಿಸಲಿದ್ದಾರೆ. ಜೆಡಿಎಸ್ ವಿಚಾರದಲ್ಲಿ ಶಾಸಕ ಎ.ಮಂಜು ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಅಣತಿ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.
ಚುನಾವಣೆ ವೇಳಾ ಪಟ್ಟಿ: ಅ.24ಕ್ಕೆ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರೆಡಿಸುವರು. ಅ.31ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆ ದಿನ. ನ.2ಕ್ಕೆ ನಾಮಪತ್ರಗಳನ್ನು ಪರಿಶೀಲಿಸುವ ದಿನ. ನ.4 ಉಮೇದುವಾರಿಕೆಗಳನ್ನು ಹಿಂಪಡೆಯಲು ಕೊನೆ ದಿನ. ನ.12 ಮತದಾನದ ಅವಶ್ಯಕತೆ ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ಮತದಾನ. ನ.13 ಮರು ಮತದಾನ (ಅವಶ್ಯಕತೆ ಇದ್ದರೆ). ನ.14 ಮತ ಎಣಿಕೆ ದಿನ.
-ಬಿ.ವಿ.ಸೂರ್ಯ ಪ್ರಕಾಶ್