Advertisement
ಪುರಸಭೆ ಮಾಜಿ ಅಧ್ಯಕ್ಷ ಡಿ.ಕುಮಾರ್, ಜಬೀನ್‌ತಾಜ್, ಮಾಜಿ ಉಪಾಧ್ಯಕ್ಷ ಅಸ್ಲಂ ಪಾಷ, ವೆಂಕಟೇಶಗೌಡ ಹಾಗೂ ಜೆಡಿಎಸ್‌ನಲ್ಲಿ ಗೆದ್ದಿದ್ದರೂ ಕಾಂಗ್ರೆಸ್ ಪಕ್ಷದಲ್ಲಿ ಗುರ್ತಿಸಿಕೊಂಡಿದ್ದ ಸಾದಿಕ್ ಪಾಷರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿರುವುದರಿಂದ ಡಿ.ಕುಮಾರ್ ಅವರ ಪುತ್ರಿ ಹಾಗೂ ಸಾದಿಕ್ ಪಾಷ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದಾರೆ.
Related Articles
Advertisement
ಹಿಂದೆ ಸರಿದ ಅಸ್ಲಂಪಾಷ: ಪುರಸಭೆ 1 ರಿಂದ 7ರವರೆಗಿನ ಕ್ಷೇತ್ರಗಳಲ್ಲಿ ಮುಸ್ಲಿಮರ ಪ್ರಾಬಲ್ಯವಿದೆ. ಇಲ್ಲಿ ಮುಸ್ಲಿಂ ಮುಖಂಡರಲ್ಲಿಯೇ ಪೈಪೋಟಿ ಎದುರಾಗಿದೆ. ಎರಡು ಬಾರಿ ಪುರಸಭೆ ಉಪಾಧ್ಯಕ್ಷರಾಗಿದ್ದ ಅಸ್ಲಂಪಾಷಗೆ ಈ ಬಾರಿ ಮೀಸಲಾತಿ ಬದಲಾವಣೆಯಾಗಿರುವುದರಿಂದ ಅವಕಾಶ ಕೈತಪ್ಪಿದೆ. ಬೇರೆ ಕಡೆ ಪ್ರಯತ್ನ ಮಾಡಿದರೂ ಟಿಕೆಟ್ ಸಿಕ್ಕಿಲ್ಲ. ಕಾಂಗ್ರೆಸ್ ಟಿಕೆಟ್ ತಪ್ಪಲು ಶಂಶುದ್ಧೀನ್ ಬಾಬು ಕಾರಣ ಎಂದು ಅವರ ವಿರುದ್ಧ ಸ್ಪರ್ಧೆ ಮಾಡುವುದಾಗಿ ಹೇಳಿಕೆ ನೀಡಿದ್ದ ಅವರು, ಅಂತಿಮ ಕ್ಷಣದಲ್ಲಿ ಚುನಾವಣೆಯಿಂದಲೇ ದೂರ ಉಳಿದಿದ್ದಾರೆ.
ಕಳೆದ ಅವಧಿಯಲ್ಲಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಜೆಡಿಎಸ್ ಪಕ್ಷಕ್ಕೆ ಸೇರಿ ಕಾಂಗ್ರೆಸ್ ಪ್ರಭಾವಿ ಮುಖಂಡ ಶಂಶುದ್ದೀನ್‌ಬಾಬು ವಿರುದ್ಧವೇ ಗೆಲುವು ಸಾಧಿಸಿದ್ದ ಪಿ.ಸಾಧಿಕ್ ಪಾಷ ಗೆದ್ದ 6 ತಿಂಗಳಲ್ಲಿಯೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಅನಂತರ ಬರುವ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿಕೊಂಡಿದ್ದರು. ಈ ಅವಧಿಯಲ್ಲಿ ಒಮ್ಮೆ ಉಪಾಧ್ಯಕ್ಷರಾಗಿ ಆಯ್ಕೆಯಾಗಲು ನಡೆಸಿದ ಕಸರತ್ತು ವಿಫಲವಾಗಿದೆ. ಮತ್ತೆ ವಾರ್ಡ್ ನಂ 4ರಲ್ಲಿ ಸೇಟ್ಕಾಂಪೌಂಡ್ ಕ್ಷೇತ್ರದಿಂದ ಟಿಕೆಟ್ ಬಯಸಿದರೂ ಅಂತಿಮ ಗಳಿಗೆಯಲ್ಲಿ ಶಂಶುದ್ದೀನ್ ಬಾಬು ಅವರ ಭಾಮೈದ ರಫಿಕ್‌ಗೆ ಟಿಕೆಟ್ ನೀಡಿದ್ದರಿಂದ ಇವರ ವಿರುದ್ಧ ಮತ್ತೆ ಪಕ್ಷೇತರರಾಗಿ ಸ್ಪರ್ಧೆಯಲ್ಲಿದ್ದಾರೆ.
ಪುರಸಭೆ ಸದಸ್ಯರಾಗಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಬಲಗೈ ಬಂಟರಾಗಿದ್ದ ಜಿ.ವೆಂಕಟೇಶಗೌಡ ಸ್ಪರ್ಧಿಸಲು ಎಷ್ಟೇ ಪ್ರಯತ್ನ ಮಾಡಿದರೂ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸ್ವತಃ ಟಿಕೆಟ್ ತಪ್ಪಿಸಿ ಪಕ್ಷೇತರರಾಗಿಯೂ ಸಹ ಸ್ಪರ್ಧಿಸದಂತೆ ಅಡ್ಡಗಾಲು ಹಾಕಿದ್ದರಿಂದ ಚುನಾವಣೆಯಿಂದಲೇ ದೂರ ಉಳಿದಿದ್ದಾರೆ. ಇನ್ನೂ ಶಾಸಕರ ಮತ್ತೂಬ್ಬ ಬಲಗೈ ಬಂಟ ಮುಕ್ತಿಯಾರ್ ವಾರ್ಡ್ ನಂ 4ರಲ್ಲಿ ಸೇಟ್ ಕಾಂಪೌಂಡ್ ಕ್ಷೇತ್ರದಲ್ಲಿ ಸ್ಪರ್ಧಿಸಲು ಎಷ್ಟೇ ಪ್ರಯತ್ನ ಮಾಡಿದರೂ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಚುನಾವಣೆಯಿಂದಲೇ ದೂರವಾಗಿದ್ದಾರೆ. ಇವರ ಪತ್ನಿ ಜಬೀನ್‌ತಾಜ್ ಸಹ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರೂ ಸ್ಪರ್ಧಿಸಲು ಕ್ಷೇತ್ರದ ಅಭಾವದಿಂದ ಈ ಬಾರಿ ಟಿಕೆಟ್ ಕೈ ತಪ್ಪಿದೆ.
ಕಾಂಗ್ರೆಸ್ ಭದ್ರಕೋಟೆಯಾಗಿರುವ ಐದಾರು ವಾರ್ಡ್‌ಗಳಲ್ಲಿ ಕಾಂಗ್ರೆಸ್ ಟಿಕೆಟ್ ಪೈಪೋಟಿಯಿಂದ ಬಂಡಾಯ ಎದ್ದಿರುವುದರಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕಾಂಗ್ರೆಸ್ ಬಂಡಾಯ ಶಮನ ಮಾಡಲು ಎರಡು ದಿನಗಳಿಂದ ತೀವ್ರ ಕಸರತ್ತು ಮಾಡುತ್ತಿದ್ದರೂ ಸಫಲವಾಗುತ್ತಿಲ್ಲ. ಕಾಂಗ್ರೆಸ್-ಕಾಂಗ್ರೆಸ್ ನಡುವೆ ಪೈಪೋಟಿ ಹೆಚ್ಚಾಗಿರುವುದರಿಂದ ಕಾಂಗ್ರೆಸ್ ಭಿನ್ನಮತ ಯಾವ ಮಟ್ಟಕ್ಕೆ ಶಮನವಾಗುವುದೋ ಕಾದುನೋಡಬೇಕಾಗಿದೆ.
● ಎಂ.ಸಿ.ಮಂಜುನಾಥ್