ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ನಗರಸಭೆ ಚುನಾವಣೆ ರಂಗೇರಿದ್ದು ಸ್ಥಳೀಯವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಶುರುವಾಗಿದೆ. ಅನೇಕ ವಾರ್ಡ್‌ಗಳಲ್ಲಿ ರಾಜಕೀಯ ಪಕ್ಷಗಳಿಗೆ ಬಂಡಾಯ ಅಭ್ಯರ್ಥಿಗಳೇ ದೊಡ್ಡ ತಲೆನೋವಾಗಿದ್ದು ಗೆಲ್ಲುವುದಕ್ಕಿಂತ ಸೋಲಿಸುವ ವಿಚಾರದಲ್ಲಿಯೇ ಬಹುತೇಕರ ಆಲೋಚಿಸುತ್ತಿರುವುದರಿಂದ ಚುನಾವಣೆ ಮಳೆಗಾಲದಲ್ಲೂ ಹೆಚ್ಚು ಕಾವು ಪಡೆದುಕೊಂಡಿದೆ. ಇನ್ನು ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಹಂಚಿಕೆ ಮುಖಂಡರ ನಡುವಿನ ಭಿನ್ನಾಭಿಪ್ರಾಯಕ್ಕೆ ಇಂಬು ನೀಡಿದ್ದು ಇದು ಪಕ್ಷದೊಳಗಿನ ಒಳಬೇಗುದಿ ಬೆಂಕಿಯಂತಾಗಿದೆ.
ಈ ಹಿಂದೆ ಮೂರು-ನಾಲ್ಕು ಬಾರಿ ನಗರಸಭೆಗೆ ಆಯ್ಕೆಯಾದವರಲ್ಲಿ ಕೆಲವರು ಮೀಸಲಾತಿ ಬದಲಾಗಿ ಬೇರೆ ವಾರ್ಡ್‌ಗೆ ವಲಸೆ ಹೋಗಿದ್ದಾರೆ. ಮತ್ತೆ ಕೆಲವರು ತಮ್ಮ ಕೆಟಗೆರಿಯ ಮಹಿಳಾ ಮೀಸಲಾತಿ ಇರುವಲ್ಲಿ ತಮ್ಮ ಪತ್ನಿ, ಸಹೋದರಿ, ಸಂಬಂಧಿಗಳನ್ನು ಸ್ಪರ್ಧೆಗಿಳಿಸಿ ಅವರನ್ನು ಗೆಲ್ಲಿಸಲು ತಂತ್ರ ರೂಪಿಸಿದ್ದಾರೆ. ಹೀಗಾಗಿ ಚುನಾವಣೆ ತುರುಸು ಪಡೆದುಕೊಂಡಿದೆ.
ಅಧಿಕಾರ ಹಿಡಿಯಲು ಯತ್ನ: ಇನ್ನು ರಾಜಕೀಯ ಪಕ್ಷಗಳ ವಿಚಾರಕ್ಕೆ ಬಂದರೆ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಜಿಲ್ಲಾ ಕೇಂದ್ರ ಹಾವೇರಿ ನಗರಸಭೆಯ ಅಧಿಕಾರದ ಗುದ್ದಗೆ ಹಿಡಿಯಲು ಸೆಣಸಾಟ ಶುರು ಮಾಡಿವೆ.
ಬಲ ಇದ್ದರೂ ಅಧಿಕಾರ ನಡೆಸಿಲ್ಲ: ಕಳೆದ ಚುನಾವಣೆಯಲ್ಲಿ ಬಿಜೆಪಿ-ಕೆಜೆಪಿ ಪ್ರತ್ಯೇಕವಾಗಿ ಸೆಣಸಾಡಿದ್ದವು. ಈ ಸಂದರ್ಭದಲ್ಲಿ ಕಾಂಗ್ರೆಸ್ 13, ಬಿಜೆಪಿ 9, ಕೆಜೆಪಿ 8 ಹಾಗೂ ಬಿಎಸ್‌ಆರ್ ಕಾಂಗ್ರೆಸ್ 1 ಸ್ಥಾನ ಪಡೆದಿತ್ತು. ಬಿಎಸ್‌ಆರ್ ಕಾಂಗ್ರೆಸ್ ಸದಸ್ಯ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದರಿಂದ ಬಿಜೆಪಿ, ಕೆಜೆಪಿ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಸೇರಿದರೆ ಸಂಖ್ಯಾಬಲ 18 ಆಗಿದ್ದರೂ ಕೆಜೆಪಿ-ಬಿಜೆಪಿ ಬಣಗಳ ಭಿನ್ನಾಭಿಪ್ರಾಯದಿಂದಾಗಿ ಕೈಗೆ ಬಂದಿದ್ದ ಅಧಿಕಾರವನ್ನು ನಿರಾಯಾಸವಾಗಿ ಕಾಂಗ್ರೆಸ್ ಬಾಯಿಗೆ ಹಾಕಲಾಗಿತ್ತು. ಹೀಗಾಗಿ ಕೇವಲ 13 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ ಪೂರ್ಣಾವ ಅಧಿಕಾರ ನಡೆಸಿತು. 2018ರ ವಿಧಾನಸಭೆ ಚುನಾವಣೆ ನಡೆದು ಹಾವೇರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನೆಹರು ಓಲೇಕಾರ ಶಾಸಕರಾಗಿ ಆಯ್ಕೆಯಾದ ಬಳಿಕ ನಗರಸಭೆಯ ಆಡಳಿತ ಹಿಡಿಯುವ ಪ್ರಯತ್ನ ಬಿಜೆಪಿ ನಡೆಸಿತಾದರೂ ಅದು ಕಾನೂನು ತೊಡಕುಗಳಿಗೆ ಸಿಲುಕಿ ಕೈ ತಪ್ಪಿತು.
ಅಧಿಕಾರ ಹಿಡಿಯಲು ತಂತ್ರ: ಈಗ ನಗರಸಭೆ ಅಧಿಕಾರ ಗದ್ದುಗೆ ಬಿಜೆಪಿ ಹಿಡಿಯುವಂತೆ ಮಾಡಲು ಸ್ಥಳೀಯ ಶಾಸಕ ನೆಹರು ಓಲೇಕಾರ ಕಾರ್ಯತಂತ್ರ ರೂಪಿಸಿದ್ದಾರೆ. ಇದರ ಬೆನ್ನಲ್ಲೇ ಟಿಕೆಟ್ ಹಂಚಿಕೆ ವಿಷಯದಲ್ಲಿ ಶಾಸಕರು ಮತ್ತು ಜಿಲ್ಲಾಧ್ಯಕ್ಷರ ನಡುವೆ ಭಿನ್ನಾಭಿಪ್ರಾಯ ಉದ್ಭವಿಸಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಶಿವರಾಜ ಸಜ್ಜನರ ರಾಜೀನಾಮೆಯೂ ಸಲ್ಲಿಸಿದ್ದಾರೆ. ಬಿಜೆಪಿಯಲ್ಲಿನ ಈ ಬೆಳವಣಿಗೆಯಿಂದಾಗಿ ಚುನಾವಣಾ ಕಣದಲ್ಲಿ ಬಂಡಾಯ ಹಾಗೂ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿ ಉಳಿಯುವಂತಾಗಿದ್ದು ಬಿಜೆಪಿಗೆ ಬಂಡಾಯಗಾರರನ್ನು ಎದುರಿಸುವುದೇ ದೊಡ್ಡ ಸವಾಲಾಗಿದೆ.
ಕಾಂಗ್ರೆಸ್‌ನಲ್ಲಿಯೂ ಭಿನ್ನಾಭಿಪ್ರಾಯ ಒಳಗೊಳಗೇ ಇದ್ದು ಬೂದಿಮುಚ್ಚಿದ ಕೆಂಡವಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಿಗೆ ಬಂಡಾಯ, ಮುಖಂಡರ ಭಿನ್ನಾಭಿಪ್ರಾಯ ಹಿನ್ನಡೆಯ ಅಂಶಗಳಾಗಿವೆ. ಈ ಹಿಂದೆ ಅಧಿಕಾರ ಪಡೆದು ಮಾಡಿದ ಕೆಲಸ ಕಾಂಗ್ರೆಸ್‌ಗೆ ಶ್ರೀರಕ್ಷೆಯಾದರೆ, ನೂತನವಾಗಿ ಬಿಜೆಪಿ ಅಭ್ಯರ್ಥಿ ಶಾಸಕರಾಗಿರುವುದು ಬಿಜೆಪಿಗೆ ಧನಾತ್ಮಕ ಅಂಶ ಎಂದೇ ಹೇಳಬಹುದಾಗಿದೆ. ಒಟ್ಟಾರೆ ನಗರಸಭೆ ಚುನಾವಣೆ ಕಣ ರಂಗೇರಿದ್ದು ರಾಜಕೀಯ ಪಕ್ಷಗಳು, ಮುಖಂಡರಿಗೆ ಇದು ಮುಂದಿನ ಲೋಕಸಭೆ ಚುನಾವಣೆಯ ತಾಲೀಮು ಎಂಬಂತಾಗಿದೆ.
ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಮತವಿಲ್ಲ. ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಎಲ್ಲರಿಗೂ ಮನವಿ ಮಾಡಲಾಗಿದೆ. ಈ ಸಲ ಪೂರ್ಣ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರ ಹಿಡಿಯುವ ವಿಶ್ವಾಸವಿದೆ.
ರುದ್ರಪ್ಪ ಲಮಾಣಿ, ಮಾಜಿ ಸಚಿವರು
ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ. ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಗೆಲ್ಲಿಸಲು ಒಟ್ಟಾಗಿ ಕೆಲಸ ಮಾಡುತ್ತೇವೆ. ಈ ಬಾರಿ ಬಹುಮತದೊಂದಿಗೆ ನಗರಸಭೆಯ ಆಡಳಿತ ಹಿಡಿಯುತ್ತೇವೆ.
ನೆಹರು ಓಲೇಕಾರ, ಹಾವೇರಿ ಶಾಸಕರು
ಎಚ್.ಕೆ. ನಟರಾಜ