Advertisement

ಪುರಸಭೆ ಅಭಿವೃದ್ಧಿ ರೂಪರೇಷೆ

03:07 PM May 27, 2019 | Suhan S |

ಮುಂಡರಗಿ: ಪುರಸಭೆ ಚುನಾವಣೆಗಳು ಮೇ 29ರಂದು ನಡೆಯಲಿದ್ದು, ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಪಕ್ಷೇತರರು ಸೇರಿದಂತೆ 72 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. 72 ಅಭ್ಯರ್ಥಿಗಳಲ್ಲಿ 23 ಅಭ್ಯರ್ಥಿಗಳು ಆಯ್ಕೆಯಾಗಿ ಪುರಸಭೆಯಲ್ಲಿ ಐದು ವರ್ಷಗಳವರೆಗೆ ಆಡಳಿತ ನಡೆಸಬೇಕಿದೆ.

Advertisement

ಪುರಸಭೆ 23 ವಾರ್ಡುಗಳಲ್ಲಿ 9836 ಪುರುಷರು, 10,067 ಮಹಿಳಾ ಮತದಾರರು ಸೇರಿದಂತೆ ಒಟ್ಟಾರೆಯಾಗಿ 19,903 ಮತದಾರರು ಇದ್ದಾರೆ. ಪುರಸಭೆಯ 23 ವಾರ್ಡುಗಳಲ್ಲಿ ಮುಂದಿನ ಐದು ವರ್ಷಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಆಡಳಿತ ನಡೆಸಲಿರುವ ಜನಪ್ರತಿನಿಧಿಗಳ ದೃಷ್ಟಿಕೋನದಲ್ಲಿ ಮುನ್ನೋಟವು ಏನಾಗಿರಬೇಕು ಎನ್ನುವುದು ಚರ್ಚಿಸಬೇಕಾಗಿರುವ ಅನಿವಾರ್ಯವಾದ ವಿಷಯವಾಗಿದೆ.

ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಬಿಎಸ್‌ಪಿ, ಪಕ್ಷೇತರ ಅಭ್ಯರ್ಥಿಗಳು ತಮ್ಮ ಆಯ್ಕೆಗಾಗಿ ಚುನಾವಣೆಯ ಕರಪತ್ರಗಳಲ್ಲಿ ವಾರ್ಡಿನ ಸರ್ವತೋಮುಖ ಅಭಿವೃದ್ಧಿ ಮತ್ತು ಮತದಾರರ ಸೇವೆ ಮಾಡುವ ಕಳಕಳಿಯ ಮನವಿಯನ್ನು ಮಾಡಿಕೊಂಡಿದ್ದಾರೆ. ಸರ್ವತೋಮುಖ ಅಭಿವೃದ್ಧಿ ಎಂಬ ಒಂದೇ ವಾಕ್ಯವು ಮುಂದಿನ ಐದು ವರ್ಷಗಳಲ್ಲಿ ವಾರ್ಡಿನಲ್ಲಿ ಆಗಬೇಕಿರುವ ಕೆಲಸ-ಕಾರ್ಯಗಳು, ಮಾಡಬೇಕಿರುವ ಕಾಮಗಾರಿಗಳು, ಮೂಲಭೂತ ಸೌಲಭ್ಯಗಳ ಕುರಿತಾಗಿ ಸ್ಪಷ್ಟವಾದ ಮಾಹಿತಿಯನ್ನು ನೀಡದೇ ಅಪೂರ್ಣವಾಗಿರುವುದು ಖೇದಕರ ಸಂಗತಿಯಾಗಿದೆ.

ಈ ಹಿನ್ನೆಲೆಯಲ್ಲಿ ಪುರಸಭೆಯ 23 ವಾರ್ಡುಗಳಲ್ಲಿ ಸಮಗ್ರವಾದ ಅಭಿವೃದ್ಧಿಯ ಮುನ್ನೋಟವನ್ನು ನೀಡುವ ಕುರಿತು ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಬಿಎಸ್‌ಪಿ ಪಕ್ಷಗಳು ಕನಿಷ್ಠ ಒಂದು ಪ್ರಣಾಳಿಕೆಯನ್ನು ಬಿಡುಗಡೆ ಮಾಡಬೇಕಾಗಿತ್ತು. ಆದರೇ ಮುಂದಿನ ಐದು ವರ್ಷಗಳ ಪುರಸಭೆಯ ಸಮಗ್ರವಾದ ಅಭಿವೃದ್ಧಿ ಎಂಬುದು ಮುಖ್ಯ ವಿಷಯವಾಗದೇ, ಚುನಾವಣೆಯು ಬರೀ ವ್ಯಕ್ತಿ ಮತ್ತು ಪಕ್ಷದ ಪ್ರತಿಷ್ಠೆಯ ಮಟ್ಟಕ್ಕೆ ಬಂದು ನಿಂತಿರುವದು ಗೋಚರವಾಗುತ್ತದೆ.

ಪುರಸಭೆಯ 23 ವಾರ್ಡುಗಳಲ್ಲಿ ಕುಡಿಯುವ ನೀರಿಗೆ ಆದ್ಯತೆ, ಸ್ವಚ್ಛತೆ ಕಡೆಗೆ ಗಮನ, ರಸ್ತೆ, ಚರಂಡಿಗಳ ನಿರ್ಮಾಣ, ಬೀದಿ ದೀಪಗಳ ನಿರ್ವಹಣೆ, ಅಂತರಜಲ ಮಟ್ಟವನ್ನು ಹೆಚ್ಚಿಸಲು ಮಳೆ ಕೊಯ್ಲು ಯೋಜನೆ ಅನುಷ್ಠಾನ, ಪುರಸಭೆ ಆಡಳಿತವು ಪಾರದರ್ಶಕ ಆಗಿರಲು ಕಾಗದ ರಹಿತ ಆಡಳಿತ ಜಾರಿಗೆ, ಪುರಸಭೆಯ ಆದಾಯ ಹೆಚ್ಚಿಸಲು ಆದಾಯದ ಮೂಲಗಳ ಕ್ರೊಡೀಕರಣ, ಸ್ವಚ್ಛ, ನಿರ್ಮಲವಾದ ಪರಿಸರ ನಿರ್ಮಿಸಲು ಗಿಡಗಳ ನೆಡುವ, ಉದ್ಯಾನವನಗಳ ನಿರ್ವಹಣೆ ಮಾಡುವ, ಕಸ ವಿಲೇವಾರಿಯಲ್ಲಿ ನಾಗರಿಕರ ಪಾತ್ರ, ಸಾರ್ವಜನಿಕ ಮಹಿಳಾ ಶೌಚಾಲಯಗಳು, ವೈಯಕ್ತಿಕ ಶೌಚಾಲಯಗಳು, ಕನಕರಾಯನ ಗುಡ್ಡದ ಮೇಲೆ ಪ್ರವಾಸಿತಾಣ ಮಾಡಲು ಉದ್ಯಾನವನ ನಿರ್ಮಾಣ, ಗುಡ್ಡದ ಮೇಲಿರುವ ಐತಿಹಾಸಿಕ ಕೋಟೆಯನ್ನು ಉಳಿಸಿಕೊಳ್ಳಲು ಮಾಡಬೇಕಿರುವ ಕಾಮಗಾರಿ, ಬಡವರಿಗೆ ಹಂಚಬೇಕಿರುವ ಆಶ್ರಯ ನಿವೇಶನಗಳು, ಸ್ಮಶಾನಗಳಲ್ಲಿ ಮಾಡಬೇಕಿರುವ ಅಭಿವೃದ್ಧಿ ಮತ್ತು ಪರಿಸರಕ್ಕಾಗಿ ಗಿಡಗಳು ಹಚ್ಚಿ ನಿರ್ಮಲವಾದ ವಾತಾವರಣ ನಿರ್ಮಿಸುವ ಈ ಎಲ್ಲ ಸಂಗತಿಗಳು ಚುನಾವಣೆಯಲ್ಲಿ ಚರ್ಚೆಯ ಮುನ್ನೆಲೆಗೆ ಬರಬೇಕಿದ್ದ ವಿಷಯಗಳು ಆಗಿದ್ದವು.

Advertisement

ಆದರೇ ಮುಖ್ಯವಾಗಿ ಚರ್ಚಿಸಬೇಕಿದ್ದ ಪಟ್ಟಣದ ಸಮಗ್ರವಾದ ಅಭಿವೃದ್ಧಿಯು ತೆರೆಮರೆಗೆ ಸರಿದು, ವ್ಯಕ್ತಿಗಳ ಮುಖ ನೋಡಿ ಮತದಾನ ಮಾಡುವ ಅನಿವಾರ್ಯತೆಯು ಮತದಾರರಿಗೆ ಬಂದಿದೆ. ಮತದಾರರು ಕೂಡಾ ಸಮಗ್ರವಾದ ಅಭಿವೃದ್ಧಿಗಾಗಿ ಸಮಾಜದಲ್ಲಿರುವ ವೈದ್ಯರು, ಇಂಜನಿಯರ್‌ಗಳು, ಶಿಕ್ಷಕರು, ಸಮಾಜ ಸೇವಕರು, ಪತ್ರಕರ್ತರನ್ನು ಒಳಗೊಂಡಿರುವ ಸಮಿತಿಯ ಮೂಲಕ ಹಕ್ಕೊತ್ತಾಯಗಳು ಮಂಡಿಸಬೇಕಾಗಿತ್ತು.

•ಹು.ಬಾ.ವಡ್ಡಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next