ತಿಪಟೂರು: ತಿಪಟೂರು ಜಿಲ್ಲಾ ಕೇಂದ್ರವಾಗುವ ಎಲ್ಲ ಅರ್ಹತೆ ಹೊಂದಿದ್ದರೂ ಸಾಕಷ್ಟು ಸಮಸ್ಯೆಗಳ ಸುಳಿ ಯಲ್ಲಿ ಸಿಲುಕಿ ನಲುಗುತ್ತಿದೆ. ನಗರ ಬೆಳೆದಂತೆಲ್ಲಾ ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆ ದುಪ್ಪಟ್ಟಾಗು ತ್ತಿರುವುದರಿಂದ ಪಾದಚಾರಿಗಳಿಗೆ ಓಡಾಡಲು ಜಾಗವೇ ಇಲ್ಲದಂತಾಗಿದೆ. ನಗರಸಭೆ ಕೂಡಲೆ ಫುಟ್ಪಾತ್ ತೆರವು ಮಾಡುವ ಮೂಲಕ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬುದು ನಾಗರಿಕರ ಒತ್ತಾಯವಾಗಿದೆ.
ನಗರದ ಮಧ್ಯೆ ಹಾಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206 ಹಾಗೂ ಕೆಲ ಮುಖ್ಯ ರಸ್ತೆಗಳ ಎರಡೂ ಬದಿಯಲ್ಲಿ ಸಾರ್ವಜನಿಕರ ಓಡಾಟಕ್ಕೆ ಈವರೆಗೂ ಸರಿಯಾದ ಪುಟ್ಪಾತ್ ನಿರ್ಮಾಣ ಮಾಡಿಲ್ಲ. ಹೆದ್ದಾರಿಯ ಅಕ್ಕಪಕ್ಕದಲ್ಲಿದ್ದ ಚರಂಡಿಗಳ ಮೇಲೆ ಸಾರ್ವಜನಿಕರು ಓಡಾಡುತ್ತಿದ್ದು ಇದಕ್ಕೆ ಕಂಬಿಗಳನ್ನು ಅಳವಡಿಸಿ ಅನುಕೂಲ ಮಾಡಿದ್ದರೂ, ಆ ಸ್ಥಳಗಳಲ್ಲಿ ತರಕಾರಿ ಅಂಗಡಿ, ಬಟ್ಟೆ ಮಾರುವವರು, ಹಣ್ಣಿನ ಅಂಗಡಿಗಳು, ಟೀ-ಕಾಫಿ ಗೂಡಂಗಡಿ ಹೋಟೆಲ್ಗಳು, ಪಾನಿಪೂರಿ, ಗೋಬಿ ಸ್ಟಾಲ್ಗಳವರು ಬಹು ಪಾಲು ಫುಟ್ಪಾತ್ ಅತಿಕ್ರಮಣ ಮಾಡಿ ನಿತ್ಯ ವ್ಯಾಪಾರ-ವಹಿವಾಟು ನಡೆಸುತ್ತಿದ್ದಾರೆ. ಇದರಿಂದ ದಿನನಿತ್ಯ ಓಡಾಡುವ ಸಾವಿರಾರು ಪಾದಚಾರಿಗಳು ಹಾಗೂ ವಿದ್ಯಾರ್ಥಿಗಳು ಪಾದಚಾರಿ ಮಾರ್ಗವನ್ನು ಬಿಟ್ಟು ರಸ್ತೆಯಲ್ಲಿಯೇ ನಡೆದದಾಡುವಂತಾಗಿದೆ. ಇದರ ಪರಿಣಾಮ ಪ್ರತಿನಿತ್ಯ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಿದ್ದು ಇದಕ್ಕೆ ನಗರಸಭೆ, ಪೊಲೀಸ್ ಇಲಾಖೆಯ ಅಧಿಕಾರಿಗಳೇ ನೇರ ಹೊಣೆ ಎಂದು ಸಾರ್ವಜನಿಕರ ಆರೋಪವಾಗಿದೆ.
ಬೇಜವಾಬ್ದಾರಿ ನಗರಸಭೆ : ಫುಟ್ಪಾತ್ ಅಂಗಡಿ ಗಳನ್ನು ತೆರವು ಕಾರ್ಯದಲ್ಲಿ ನಗರಸಭೆ ಮೀನಮೇಷ ಎಣಿಸುತ್ತಿದ್ದು, ಈ ಬಗ್ಗೆ ಸಾಮಾನ್ಯ ಸಭೆ, ವಿಶೇಷ ಸಭೆ ಗಳಲ್ಲಿ ಮಾತ್ರ ಶೀಘ್ರದಲ್ಲಿಯೆ ಫುಟ್ಪಾತ್ ತೆರವು ಮಾಡಲಾಗುತ್ತದೆ ಎಂದು ಅಧಿಕಾರಿಗಳು ಬಾಯಿ ಮಾತಿಗೆ ಹೇಳುತ್ತಾರೆ. ಆದರೆ ವರ್ಷಗಳೆ ಕಳೆದರೂ ತೆರವು ಕಾರ್ಯ ಮಾತ್ರ ಮಾಡಿಲ್ಲ. ನಗರದಾದ್ಯಂತ ಬಹುತೇಕ ನಗರಸಭೆ ಜಾಗವನ್ನು ಫುಟ್ಪಾತ್ ವ್ಯಾಪಾರಿಗಳೇ ಆಕ್ರಮಿಸಿಕೊಂಡಿದ್ದು, ಸುಗಮ ಸಂಚಾರಕ್ಕೆ ತೊಂದರೆಯೊಡ್ಡಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆಯೂ ಸಾಥ್ ನೀಡುತ್ತಿದೆ. ನಗರಸಭೆ, ಪೊಲೀಸ್ ಇಲಾಖೆ ಬೇಜವಾಬ್ದಾರಿ ತನ ದಿಂದಾಗಿ ಅಕ್ರಮವಾಗಿ ಫುಟ್ಪಾತ್ ವ್ಯಾಪಾರಕ್ಕೆ ಅನುವು ಮಾಡಿ ಕೊಟ್ಟು ಸಾರ್ವಜನಿಕರ ಹಿತಕ್ಕೆ ಎಳ್ಳುನೀರು ಬಿಟ್ಟಿದೆ. ಇನ್ನು ಪೊಲೀಸರು ಗೂಡಂಗಡಿ ಗಳಿಂದ ಮಾಮೂಲಿ ಪಡೆದು ಕಣ್ಮುಚ್ಚಿ ಕುಳಿತಿರುವುದು ಜಗಜ್ಜಾಹಿರವಾದ ವಿಷಯವಾಗಿದೆ.
ಜಿಲ್ಲಾಧಿಕಾರಿಗಳಿಗೆ ಒತ್ತಾಯ: ನಗರದ ಹೆದ್ದಾರಿ ಅಕ್ಕಪಕ್ಕದ ಫುಟ್ಪಾತ್ ಮಾತ್ರ ಒತ್ತುವರಿಯಾಗಿದೆ. ನಗರದ ಪ್ರಮುಖ ಟಿ.ಬಿ. ಸರ್ಕಲ್, ಹಾಸನ ಸರ್ಕಲ್, ಕೋಡಿ ಸರ್ಕಲ್, ಸಿಂಗ್ರಿ ನಂಜಪ್ಪ ಸರ್ಕಲ್ಗಳಲ್ಲಂತೂ ಜನರ ಹಾಗೂ ವಾಹನಗಳ ಓಡಾಟಕ್ಕೆ ಸ್ವಲ್ಪವೂ ಜಾಗ ಬಿಡದಂತೆ ರಸ್ತೆಗಳನ್ನೇ ಅತಿಕ್ರಮಿಸಿ ಪೆಟ್ಟಿಗೆ ಅಂಗಡಿ ಗಳವರು ವ್ಯಾಪಾರ-ವಹಿವಾಟು ನಡೆಸುತ್ತಿದ್ದು ಇದ ರಿಂದ ನಿತ್ಯ ಅಪಘಾತಗಳಾಗುತ್ತಿವೆ. ಇದು ನಗರ ಸಭೆ ಅಧಿಕಾರಿಗಳು ಹಾಗೂ ಪೊಲೀಸರ ಎದುರಿನಲ್ಲೇ ನಡೆಯುತ್ತಿದ್ದರೂ ಯಾವುದೇ ಕಠಿಣ ಕ್ರಮ ತೆಗದು ಕೊಳ್ಳದಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಸದ್ಯ ನಗರಸಭೆಗೆ ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿ ಆಗಿರುವುದರಿಂದ ತಿಪಟೂರು ನಗರದ ಒಳಗೆ ಹಾಗೂ ಪ್ರಮುಖ ಸರ್ಕಲ್ಗಳ ರಸ್ತೆಗಳ ಒತ್ತುವರಿ ಯನ್ನು ಖುದ್ದು ಪರಿಶೀಲಿಸಿ, ತೆರವುಗೊಳಿಸುವ ದಿಟ್ಟ ಕ್ರಮ ಜರುಗಿಸಬೇಕೆಂಬುದು ನಗರದ ಸಾರ್ವಜನಿಕರ ಒತ್ತಾಯವಾಗಿದೆ.
● ಬಿ. ರಂಗಸ್ವಾಮಿ, ತಿಪಟೂರು