Advertisement
ಸುಮಾರು 60 ಎಕರೆ ಪ್ರದೇಶದಲ್ಲಿ ವ್ಯಾಪಿಸಿದ್ದ ಕೆರೆ ಅಕ್ರಮ ಒತ್ತುವರಿಯಿಂದಾಗಿ ಕೆಲವೇ ಎಕರೆ ಪ್ರದೇಶ ಉಳಿದುಕೊಂಡಿದೆ. ಪಟ್ಟಣದಲ್ಲಿ ನಿತ್ಯವೂ ನೂತನ ಕಟ್ಟಡಗಳ ನಿರ್ಮಾಣದಿಂದಾಗಿ ಉತ್ಪಾದನೆಯಾಗುವ ಕಟ್ಟಡ ತ್ಯಾಜ್ಯವನ್ನು ವ್ಯವಸ್ಥಿತವಾಗಿ ಕೆರೆ ಅಂಚಿನಲ್ಲಿ ಸುರಿಯಲಾಗುತ್ತಿದೆ. ಇದರಿಂದ ನಿತ್ಯವೂ ಕೆರೆಯ ವಿಸ್ತೀರ್ಣ ಕಡಿಮೆಯಾಗುತ್ತಲೇ ಇದೆ. ಆದರೆ ಕೆರೆ ಯನ್ನು ರಕ್ಷಿಸಿ, ಅಭಿವೃದ್ಧಿಗೊಳಿಸಿ ನಿರ್ವಹಿಸಬೇಕಾದ ಅಧಿಕಾರಿಗಳು ಸಂಪೂರ್ಣ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ.
Related Articles
Advertisement
ನಗರಸಭೆಯೇ ಕಾರಣ: ಎಲ್ಲಾ ಕೆರೆಗಳಂತೆಯೇ ಮಳೆಗಾಲದಲ್ಲಿ ನೀರು ತುಂಬಿಸಿಕೊಂಡು ಬೇಸಿಗೆ ಯಲ್ಲಿ ಜನಜಾನುವಾರುಗಳಿಗೆ ನೀರುಣಿಸುತ್ತಿದ್ದ ಶೆಟ್ಟಿಹಳ್ಳಿ ಕೆರೆಗೆ ಈ ದುಸ್ಥಿತಿ ಬಂದಿದೆ. ಕೆರೆಯ ಈ ದುಸ್ಥಿತಿಗೆ ಮುಖ್ಯ ಕಾರಣ ನಮ್ಮ ನಗರಸಭೆಯಾಗಿದೆ. ನಗರದ ಕೊಳಚೆ ನೀರನ್ನು ಶೆಟ್ಟಿಹಳ್ಳಿ ಕೆರೆಗೆ ಹರಿಸಿದ ಪರಿಣಾಮ ಕೆರೆ ಗಬ್ಬೆದ್ದು ನಾರುತ್ತಿದ್ದು, ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದೆ ಎಂದು ಸಮೀಪದ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಳಚರಂಡಿ ನೀರು ಶುದ್ಧೀಕರಿಸಿ: ಅಥವಾ ನಗರದ ಕೊಳಚೆ ನೀರನ್ನು ಶುದ್ಧೀಕರಿಸಿ ನಂತರ ಆ ನೀರನ್ನು ಕೆರೆಗೆ ಹರಿಸಬೇಕೆಂಬ ಪರಿಸರ ಇಲಾಖೆಯ ನಿಯಮಕ್ಕೆ ಇಲ್ಲಿ ಕಿಂಚಿತ್ತೂ ಬೆಲೆ ಸಿಕ್ಕಿಲ್ಲ. ಚರಂಡಿಯಲ್ಲಿ ಸಾಗಿ ಬಂದ ನೀರು ನೇರವಾಗಿ ಶೆಟ್ಟಿಹಳ್ಳಿ ಕೆರೆ ಸೇರುವಂತೆ ಮಾಡಿ ತನ್ನ ಕೆಲಸ ಮುಗಿಯಿತೆಂದು ನಗರಸಭೆ ಕೈ ತೊಳೆದುಕೊಂಡಿದೆ. ನಗರ ಬೆಳೆದಂತೆಲ್ಲ ಈ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಾಗಿ ಈಗ ಕೆರೆ ತುಂಬ ಕೊಳಕು ನೀರು ತುಂಬಿ, ಯಾರೊಬ್ಬರೂ ಹತ್ತಿರಕ್ಕೆ ಸುಳಿಯದಂತಾಗಿದೆ.
ಸಾರ್ವಜಕರಿಂದ ವ್ಯಾಪಕ ದೂರುಗಳು ಬಂದ ಹಿನ್ನಲೆಯಲ್ಲಿ ಶೆಟ್ಟಿಹಳ್ಳಿ ಕೆರೆಯನ್ನು ಮುಚ್ಚಿ ಕ್ರೀಡಾಂಗಣ ನಿರ್ಮಾಣ ಮಾಡುವ ಕನಸು ನ್ಯಾಯಾಲಯ ವ್ಯತಿರಿಕ್ತ ಆದೇಶದಿಂದ ಆರಂಭದಲ್ಲೇ ಮುಗ್ಗರಿಸಿತು. ಇದರಿಂದಾಗಿ ಕ್ರೀಡಾಸಕ್ತರೂ ಸೇರಿದಂತೆ ಶೆಟ್ಟಿಹಳ್ಳಿ ಕೆರೆ ವ್ಯಾಪ್ತಿಯ ನಾಗರಿಕರಿಗೆ ನಿರಾಸೆಯಾಗಿತ್ತು. ನಿವಾಸಿಗಳು ಮುಚ್ಚದಿದ್ದರೂ ಕೆರೆಯನ್ನು ಪುನಶ್ಚೇತನಗೊಳಿಸಲು ಸಂಬಂಧಿಸಿದ ನಗರಸಭೆ ಮುಂದಾಗಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಗುಬ್ಬುನಾತ ಬೀರುತ್ತ ಜನರ ನೆಮ್ಮದಿಗೆ ಸಂಚಕಾರ ತಂದಿರುವ ಶೆಟ್ಟಿಹಳ್ಳಿ ಕೆರೆಯನ್ನು ನಗರಸಭೆ ಅಥವಾ ಯೋಜನೆ ಪ್ರಾಧಿಕಾರ ಪುನಶ್ಚೇತನಗೊಳಿಸಲು ಮುಂದಾದರೆ, ಕೆರೆ ವೈಭವ ಮರುಕಳಿಸುವುದರಲ್ಲಿ ಸಂಶಯವಿಲ್ಲ. ಹಾಗೆಯೇ ಒತ್ತುವರಿಯಾಗಿರುವ ಜಾಗವನ್ನು ವಶಕ್ಕೆ ತೆಗೆದುಕೊಂಡು ಕೆರೆಯ ಸುತ್ತಲೂ ಉದ್ಯಾನ ನಿರ್ಮಿಸಿದರೆ ನಗರದ ಜನತೆಗೂ ಅನುಕೂಲವಾಗಲಿದೆ. ನಗರಸಭೆ ಅಥವಾ ಪ್ರಾಧಿಕಾರ ಈ ಕಾರ್ಯಕ್ಕೆ ಆದಷ್ಟು ಬೇಗ ಮುಂದಾಗಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
● ಎಂ.ಶಿವಮಾದು