Advertisement

ಬೈಕಂಪಾಡಿ ಕೈಗಾರಿಕಾ ನಗರ ಪ್ರಾಧಿಕಾರ ರಚನೆಗೆ ಅಡ್ಡಿಯಾದ ಮುನ್ಸಿಪಲ್‌ ಕಾಯ್ದೆ

10:10 AM Mar 21, 2020 | mahesh |

ಮಹಾನಗರ: “ಕರ್ನಾಟಕ ಪೌರಾಡಳಿತ ಕಾಯ್ದೆ (ಕೆಎಂಸಿ ಕಾಯ್ದೆ)’ಯ ತೊಡಕಿನಿಂದಾಗಿ ಬೈಕಂಪಾಡಿ ಕೈಗಾರಿಕಾ ನಗರ ಪ್ರಾಧಿಕಾರ ಸ್ಥಾಪನೆಯು ನನೆಗುದಿಯಲ್ಲಿದ್ದು, ಈ ಭಾಗದ ಉದ್ಯಮಿಗಳ ಬಹುಕಾಲದ ಬೇಡಿಕೆ ಈಡೇರುವ ಲಕ್ಷಣ ಸದ್ಯಕ್ಕೆ ಕಾಣಿಸುತ್ತಿಲ್ಲ.

Advertisement

ರಾಜ್ಯದ ಪ್ರಮುಖ ಕೈಗಾರಿಕಾ ಕೇಂದ್ರ ಗಳಲ್ಲೊಂದಾಗಿರುವ ಮಂಗ ಳೂರಿನ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಹೆಚ್ಚು ಒತ್ತು ಲಭಿಸುವ ನಿಟ್ಟಿನಲ್ಲಿ ಕೈಗಾರಿಕಾ ನಗರ ಪ್ರಾಧಿಕಾರವನ್ನು ರಚಿಸಬೇಕೆಂಬ ಬೇಡಿಕೆ ಕೈಗಾರಿಕೋದ್ಯಮಿಗಳಿಂದ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಬೈಕಂಪಾಡಿ ಕೈಗಾರಿಕಾ ಪ್ರದೇಶವನ್ನು ಕರ್ನಾಟಕ ಪುರಸಭೆ ಕಾಯ್ದೆ 1964ರ ಕಾಲಂ 364ರನ್ವಯ ಕೈಗಾರಿಕಾ ಪ್ರಾಧಿಕಾರವನ್ನಾಗಿ ರಚಿಸಲು ಜಿಲ್ಲಾ ಕೈಗಾರಿಕಾ ಕೇಂದ್ರದಿಂದ 2017ರ ಡಿ. 14ರಂದು ಕೇಂದ್ರ ಕಚೇರಿಗೆ ಅನು ಮೋದನೆಗೆ ಕಳುಹಿಸಲಾಗಿತ್ತು.

ನಿರಾಕ್ಷೇಪಣ ಪತ್ರ ಸಲ್ಲಿಸಲು ಸೂಚನೆ
ಕೇಂದ್ರ ಕಚೇರಿಯು ಈ ಪ್ರಸ್ತಾವನೆಯನ್ನು ಪರಿಶೀಲಿಸಿ ಪ್ರಾಧಿಕಾರ ಸ್ಥಾಪಿಸಲು ಒಳಪಡುವ ಕೈಗಾರಿಕಾ ಪ್ರದೇಶ ಭಾಗಶಃ ಮಂಗಳೂರು ಪಾಲಿಕೆ, ಸುತ್ತ-ಮುತ್ತಲಿನ ಏಳು ಗ್ರಾಮಗಳ ಭಾಗಶಃ ಪ್ರದೇಶಗಳನ್ನು ಒಳಗೊಂಡಿದ್ದು, ಇದಕ್ಕೆ ಸಂಬಂಧಿಸಿದ ಗಾ.ಪಂ.ಗಳ ಒಪ್ಪಿಗೆ ಪಡೆದು ನಿರಾಕ್ಷೇಪಣ ಪತ್ರ ಸಲ್ಲಿಸುವಂತೆ ಸೂಚಿಸಿತ್ತು.

ಕಳವಾರು, ಬಾಳ ಗ್ರಾಮಗಳಿಗೆ ಸಂಬಂಧಿಸಿದಂತೆ ಬಾಳ ಗ್ರಾ.ಪಂ., ಪೆರ್ಮುದೆ, ಕುತ್ತೆತ್ತೂರು ಗ್ರಾಮಗಳಿಗೆ ಸಂಬಂಧಿಸಿದಂತೆ ಪೆರ್ಮುದೆ ಗ್ರಾ.ಪಂ., ಕೆಂಜಾರು ಗ್ರಾಮಕ್ಕೆ ಸಂಬಂಧಪಟ್ಟಂತೆ ಮಳವೂರು ಗ್ರಾ,ಪಂ. ಪ್ರಾಧಿಕಾರ ರಚನೆ ಕುರಿತು ಈಗಾಗಲೇ ನಿರಾಪೇಕ್ಷಣಾ ಪತ್ರ ನೀಡಿವೆ. ತೋಕೂರು, ಬಜಪೆ ಗ್ರಾಮಗಳಿಗೆ ಸಂಬಂಧಿಸಿದಂತೆ ನಿರಾಕ್ಷೇಪಣ ಪತ್ರ ಲಭಿಸಬೇಕಾಗಿದೆ.

ಕೆಎಂಸಿ ಕಾಯ್ದೆ ಅಡಚಣೆ
ಕೈಗಾರಿಕಾ ಪ್ರಾಧಿಕಾರ ಸ್ಥಾಪಿಸಲು ಕರ್ನಾಟಕ ಮುನ್ಸಿಪಲ್‌ ಆ್ಯಕ್ಟ್ 1976ರಲ್ಲಿ ತಿದ್ದುಪಡಿಯಾಗಬೇಕಾಗಿದೆ. ಈ ಬಗ್ಗೆ ಹಿಂದಿನ ಸರಕಾರದ ಅವಧಿಯಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಯು.ಟಿ. ಖಾದರ್‌ ಅವರು ಕಾಯೊì ನ್ನುಖವಾ ಗಿದ್ದರೂ ಬಳಿಕ ಅದು ನೆನೆಗುದಿಯಲ್ಲಿತ್ತು. ಬೈಕಂಪಾಡಿ ಇಂಡಸ್ಟ್ರಿಯಲ್‌ ಟೌನ್‌ ಶಿಪ್‌ ಪ್ರಾಧಿಕಾರ ರಚನೆ ವಿಳಂಬ ಹಿನ್ನೆಲೆಯಲ್ಲಿ ನಿರ್ವಹಣೆಗೆ ಸ್ಪೆಷಲ್‌ ಪರ್ಪಸ್‌ ವೆಹಿಕಲ್‌ (ಎಸ್‌ವಿಪಿ) ರಚಿಸಲು ಸೂಚಿಸಿದ್ದರು. ಅನಂತರ ಈ ಬಗ್ಗೆ ಹೆಚ್ಚಿನ ಬೆಳವಣಿಗೆಯಾಗಿಲ್ಲ.

Advertisement

ಕೈಗಾರಿಕಾ ಸಚಿವರ ಭರವಸೆ
ರಾಜ್ಯ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಅವರು ಫೆ. 29ರಂದು ಮಂಗಳೂರಿಗೆ ಆಗಮಿಸಿದ್ದ ಸಂದರ್ಭ ಜರಗಿದ ಕೈಗಾರಿಕಾಭಿವೃದ್ಧಿ ಸಭೆಯಲ್ಲಿ ಬೈಕಂಪಾಡಿ ಕೈಗಾರಿಕಾ ನಗರ ಪ್ರಾಧಿಕಾರ ಸ್ಥಾಪನೆಗೆ ತ್ವರಿತ ಕ್ರಮ ಅನುಸರಿಸುವಂತೆ ಕೆನರಾ ಸಣ್ಣ ಕೈಗಾರಿಕಾ ಸಂಘ ಮನವಿ ಮಾಡಿತ್ತು. ಇದಕ್ಕೆ ಸ್ಪಂದಿಸಿರುವ ಸಚಿವರು ಬೈಕಂಪಾಡಿ ಸಹಿತ ರಾಜ್ಯದ 10 ಕಡೆ ಕೈಗಾರಿಕಾ ನಗರ ಪ್ರಾಧಿಕಾರ ಸ್ಥಾಪನೆ ಪ್ರಸ್ತಾವನಗಳಿದ್ದು, ಕೆಎಂಸಿ ಆ್ಯಕ್ಟ್ 1976ಕ್ಕೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಕ್ರಮವಹಿಸುವುದಾಗಿ ಭರವಸೆ ನೀಡಿದ್ದರು.

ಕೈಗಾರಿಕಾ ನಗರ ಪ್ರಾಧಿಕಾರ
ಸುಮಾರು 48 ವರ್ಷಗಳ ಹಿಂದೆ ಸ್ಥಾಪನೆಯಾದ ಬೈಕಂಪಾಡಿ ಇಂಡಸ್ಟ್ರಿಯಲ್‌ ಏರಿಯಾ 1,407.16 ಎಕರೆ ಜಾಗವನ್ನು ಹೊಂದಿದೆ. ಈ ಪ್ರದೇಶ ಈಗ ಕೆಐಎಡಿಬಿ ವ್ಯಾಪ್ತಿಗೆ ಬರುತ್ತದೆ. ಕೆಐಎಡಿಬಿಗೆ ಸರಕಾರದಿಂದ ಸೂಕ್ತ ಅನುದಾನ ಕೊರತೆಯಿಂದ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇದರ ಜತೆಗೆ ಇನ್ನಷ್ಟು ಪ್ರದೇಶವನ್ನು ಸೇರಿಸಿ ಕೈಗಾರಿಕಾ ನಗರ ಪ್ರಾಧಿಕಾರ ಸ್ಥಾಪನೆ ಮಾಡಿ ಪ್ರದೇಶದ ನಿರ್ವಹಣೆಯನ್ನು ಇದಕ್ಕೆ ವಹಿಸಿಕೊಡುವ, ಇದರಲ್ಲಿ ಸಂಗ್ರಹವಾಗುವ ತೆರಿಗೆ, ಸೆಸ್‌ನಲ್ಲಿ ಶೇ. 70 ಭಾಗವನ್ನು ಪ್ರಾಧಿಕಾರಕ್ಕೆ, ಶೇ.30 ಭಾಗವನ್ನು ವ್ಯಾಪ್ತಿಯ ಗ್ರಾ.ಪಂ.ಗಳು, ನಗರ ಪಾಲಿಕೆಗೆ ನೀಡುವ ಪ್ರಸ್ತಾವನೆ ಒಳಗೊಂಡಿದೆ.

ಪ್ರಾಧಿಕಾರ ರಚನೆಗೆ ಸಚಿವರಿಗೆ ಮನವಿ
ಬೈಕಂಪಾಡಿ ಕೈಗಾರಿಕಾ ನಗರ ಪ್ರಾಧಿಕಾರ ರಚನೆ ಬಹಳ ವರ್ಷದ ಬೇಡಿಕೆಯಾಗಿದ್ದು, ಈ ಹಿಂದೆಯೇ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಕೆಯಾಗಿದೆ. ಪ್ರಾಧಿಕಾರ ರಚನೆ ಬಗ್ಗೆ ಪೂರಕ ಪ್ರಕ್ರಿಯೆಗಳು ಮಟ್ಟದಲ್ಲಿ ನಡೆಯಬೇಕಾಗಿದೆ. ಪ್ರಾಧಿಕಾರ ಶೀಘ್ರ ರಚನೆಯಾಗುವ ನಿಟ್ಟಿನಲ್ಲಿ ರಾಜ್ಯ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವರಿಗೆ ಈಗಾಗಲೇ ಮನವಿ ಮಾಡಲಾಗಿದ್ದು, ಈ ಬಗ್ಗೆ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
-ಅಜಿತ್‌ ಕಾಮತ್‌, ಅಧ್ಯಕ್ಷರು, ಕೆನರಾ ಸಣ್ಣ ಕೈಗಾರಿಕಾ ಸಂಘ

ಕಾಯ್ದೆಗೆ ತಿದ್ದುಪಡಿಗೆ ಪ್ರಸ್ತಾವನೆ
ಬೈಕಂಪಾಡಿ ಕೈಗಾರಿಕಾ ನಗರ ಪ್ರಾಧಿಕಾರ ರಚನೆ ಕುರಿತು ಕೆಎಂಸಿ ಕಾಯ್ದೆ 1976 ಕ್ಕೆ ಸೂಕ್ತ ತಿದ್ದುಪಡಿ ಆಗಬೇಕಾಗಿದೆ. ಆದುದರಿಂದ ಪ್ರಾಧಿಕಾರ ರಚಿಸಲು ಅನುಕೂಲವಾಗುವಂತೆ ಸೂಕ್ತ ತಿದ್ದುಪಡಿ ಮಾಡುವ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಕೇಂದ್ರ ಕಚೇರಿಗೆ ಪತ್ರ ಬರೆಯಲಾಗಿದೆ. ಇದರಂತೆ ಪೂರಕ ಪ್ರಕ್ರಿಯೆಗಳು ಆಗುತ್ತಾ ಇವೆ.
-ಗೋಕುಲ್‌ದಾಸ್‌ ನಾಯಕ್‌, ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕರು, ದ.ಕ.

-  ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next