ಮ್ಯೂನಿಚ್: ಮ್ಯೂನಿಚ್ ಪ್ಯಾರಾ ಶೂಟಿಂಗ್ ವಿಶ್ವಕಪ್ ಕೂಟದ ಅಂತಿಮ ದಿನ ಪ್ಯಾರಾಲಿಂಪಿಕ್ಸ್ ಪದಕ ವಿಜೇತ ಸಿಂಗ್ರಾಜ್ ಅಧಾನ ಎರಡು ಚಿನ್ನದ ಪದಕ ಗೆಲ್ಲುವುದರೊಂದಿಗೆ ಭಾರತ ಈ ಕೂಟದಲ್ಲಿ ಅತ್ಯುತ್ತಮ ಸಾಧನೆಯೊಂದಿಗೆ ಗುರುತಿಸಿಕೊಂಡಿತು.
ಭಾರತ ಒಟ್ಟು 10 ಪದಕ ಗೆದ್ದು ಅಗ್ರಸ್ಥಾನಿಯಾಯಿತು. 6 ಚಿನ್ನ, 3 ಬೆಳ್ಳಿ ಮತ್ತು ಒಂದು ಕಂಚು ಭಾರತಕ್ಕೆ ಒಲಿದಿದೆ. ಫ್ರಾನ್ಸ್ (11 ಪದಕ) ಮತ್ತು ಉಕ್ರೇನ್ (15 ಪದಕ) 2ನೇ ಹಾಗೂ 3ನೇ ಸ್ಥಾನಿಯಾದವು. ಇವು ಕ್ರಮವಾಗಿ 4 ಮತ್ತು 3 ಚಿನ್ನ ಜಯಿಸಿವೆ.
ಟೋಕಿಯೊ ಪ್ಯಾರಾಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಸಿಂಗ್ರಾಜ್ ಅಧಾನ ಪಿ4 ವಿಭಾಗದ ಸ್ಪರ್ಧೆಯಲ್ಲಿ 224.1 ಅಂಕಗಳೊಂದಿಗೆ ಅಗ್ರಸ್ಥಾನಿ ಯಾದರು. ಉಕ್ರೇನ್‌ನ ಒಲೆಕ್ಸಿ ಡೆನಿಸಿಯುಕ್ ಬೆಳ್ಳಿ (216.2) ಮತ್ತು ಕೊರಿಯಾದ ಜಿಯಾಂಗ್‌ದು ಜೊ ಕಂಚು ಗೆದ್ದರು (193.9).
ಇದಕ್ಕೂ ಮೊದಲು ನಡೆದ ತಂಡ ಸ್ಪರ್ಧೆಯಲ್ಲೂ ಸಿಂಗ್ರಾಜ್ ಸ್ವರ್ಣ ಸಾಧನೆಗೈದಿದ್ದರು. ಇಲ್ಲಿನ ಜತೆಗಾರರೆಂದರೆ ದೀಪೇಂದರ್ ಸಿಂಗ್ ಮತ್ತು ಮನೀಷ್ ನರ್ವಾಲ್.
ಬಹಳ ಖುಷಿಯಾಗಿದೆ :
“ಕೊನೆಗೂ ಪಿ4 ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಕ್ಕೆ ಖುಷಿಯಾಗುತ್ತಿದೆ. ಇದನ್ನು ಕಳೆದ ಫ್ರಾನ್ಸ್ ಕೂಟದಲ್ಲೇ ಜಯಿಸುವುದು ನನ್ನ ಗುರಿಯಾಗಿತ್ತು. ಮ್ಯೂನಿಚ್‌ನಲ್ಲಿ ನನ್ನ ಯೋಜನೆ ಯಶಸ್ವಿಯಾಯಿತು’ ಎಂದು ಸಿಂಗ್ರಾಜ್ ಅಧಾನ ಪ್ರತಿಕ್ರಿಯಿಸಿದ್ದಾರೆ.