Advertisement

ಮುಂಡುಂ ನೆರಿಯಥುಂ

05:19 PM Jul 06, 2019 | mahesh |

ಕೇರಳ ರಾಜ್ಯದ ಮಹಿಳೆಯರ ಸಾಂಪ್ರದಾಯಿಕ ಉಡುಗೆ ಹೆಚ್ಚಾಗಿ ಬಿಳಿ ಬಣ್ಣ ಹೊಂದಿರುತ್ತದೆ. ಮುಂಡುಂ ನೆರಿಯಥುಂ ಎಂಬ ಹೆಸರಿನಿಂದ ಈ ಸಾಂಪ್ರದಾಯಿಕ ಉಡುಗೆಯನ್ನು ಕರೆಯುತ್ತಾರೆ. ಮುಂಡ ವಸ್ತ್ರದಲ್ಲಿ ಎರಡು ಭಾಗವಿದ್ದು ಅದನ್ನು ಸೊಂಟದ ಸುತ್ತ ಸುತ್ತಿಕೊಳ್ಳಲಾಗುತ್ತದೆ. ಇದು ಶುದ್ಧ ಹತ್ತಿಯಿಂದ ತಯಾರಾದ ಶುಭ್ರ ಬಣ್ಣದ ಬಟ್ಟೆ. ಇದು ಉಡಲೂ ಸುಲಭ, ಬೇಸಿಗೆಯಲ್ಲಿ ಆರಾಮದಾಯಕ. ಇದು ಬಿಳಿ ಅಥವಾ ಕೆನೆ ಬಿಳಿಬಣ್ಣದಿಂದ ಕೂಡಿದ್ದು, ಜರಿ ಅಥವಾ ಬಣ್ಣದ ಅಂಚನ್ನು ಹೊಂದಿರುತ್ತದೆ. ಇದಕ್ಕೆ “ಕರಾ’ ಎಂದು ಕರೆಯುತ್ತಾರೆ.

Advertisement

ಇದರ ಮೇಲೆ ಉಡುವ ವಿಶಿಷ್ಟ ಶೈಲಿಯ ರವಿಕೆ ಮೇಲೆ “ನೆರಿಯಥು’ ಎಂಬ ಬಟ್ಟೆಯಿಂದ ಸೀರೆಯನ್ನು ಸುತ್ತಿದ ಹಾಗೆ ಬಟ್ಟೆ ಉಡಲಾಗುತ್ತದೆ.

ಇದು ನಿತ್ಯದಲ್ಲಿ ಧರಿಸುವ ಹಾಗೂ ಸಭೆಸಮಾರಂಭ, ಹಬ್ಬಗಳಲ್ಲಿ ಉಡುವ ಸಾಂಪ್ರದಾಯಿಕ ತೊಡುಗೆಯೂ ಹೌದು. ವಿಶೇಷ ಸಮಾರಂಭಗಳಲ್ಲಿ ವಿಶಿಷ್ಟ ದಪ್ಪದ ಬಣ್ಣ ಬಣ್ಣದ ಜರಿಯಂಚಿನ ಮುಂಡು ಧರಿಸಿದರೆ ಅದರ ಜೊತೆಗೆ ವೈವಿಧ್ಯಮಯ ಆಭರಣ ತೊಡುತ್ತಾರೆ.

ಓಣಂ ಸಮಯದಲ್ಲಿ ಮಹಿಳೆಯರು ವಿಶೇಷ ಬಗೆಯ ಸೀರೆಯುಟ್ಟು ಜಾನಪದ ನೃತ್ಯ “ಕಲಕೊಟ್ಟಿ ಕಲ್ಲಿ ನೃತ್ಯ’ ಮಾಡುತ್ತಾರೆ. ಆ ಸಮಯದಲ್ಲಿ ಸೀರೆಯೊಂದಿಗೆ ವೈವಿಧ್ಯಮಯ ಆಭರಣಗಳು ರಾರಾಜಿಸುತ್ತವೆ.

ಮುಖ್ಯವಾಗಿ ಕೇರಳದಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್‌ ಜನರು ಅಧಿಕವಾಗಿದ್ದು ಉಡುಗೆ ತೊಡುಗೆಯಲ್ಲಿ ಅಲ್ಪಸ್ವಲ್ಪ ಬದಲಾವಣೆಗಳಿವೆ. ಆದರೆ, ಮೂಲ ಅಥವಾ ಮುಖ್ಯ ಉಡುಗೆಯ ಶೈಲಿ ಮಾತ್ರ ಒಂದೇ ಆಗಿರುವುದು ಪ್ರಾದೇಶಿಕ ವೈಶಿಷ್ಟéವೂ ಹೌದು. ಒಂದು ರಾಜ್ಯ ಅಥವಾ ಪ್ರದೇಶದ ಉಡುಗೆ ತೊಡುಗೆಯು ಆ ರಾಜ್ಯ-ಪ್ರದೇಶದ ಭೌಗೋಳಿಕ ಪ್ರಾಮುಖ್ಯತೆ, ಹವಾಮಾನ ಇತ್ಯಾದಿಗಳೊಂದಿಗೆ ಮೇಳೈಸಿಕೊಂಡು ಹೋಗುತ್ತದಷ್ಟೆ !

Advertisement

ವಿಶೇಷ ಸಮಾರಂಭಗಳಲ್ಲಿ ಹಿಂದೂ ಮಹಿಳೆಯರು ಕಾಂಚೀಪುರಂ ಸೀರೆ ಉಡುತ್ತಾರೆ. ರೇಶೆ¾ಯಿಂದ ಕೂಡಿದ ವೈಭವೋಪೇತವಾಗಿ ಕಾಣುವ ಈ ಸೀರೆಗೆ ಜರದೋಸಿ ಇತ್ಯಾದಿಗಳಿಂದ ಅಲಂಕರಿಸಿ ಉಡುತ್ತಾರೆ. ಗಾಢ ಬಣ್ಣಗಳ ಸೀರೆ ಉಡುವುದೇ ಹೆಚ್ಚು. ಮುಸ್ಲಿಂ ಮಹಿಳೆಯರು ಸೀರೆ ಅಥವಾ ಲೆಹಂಗಾ ಧರಿಸುತ್ತಾರೆ. ಬಂಗಾರದ ಬಣ್ಣದ ಜರಿಯಿಂದ ಅಲಂಕೃತವಾದ ಮೇಲುಡುಗೆ ಹಾಗೂ ಪರದಾ ಬಳಸುತ್ತಾರೆ.

ಕೇರಳದ ಕ್ರಿಶ್ಚಿಯನ್‌ ಮಹಿಳೆಯರು ಬಿಳಿ ಸೀರೆ ಹಾಗೂ ಬಿಳಿ ರವಿಕೆಯನ್ನು ಅಲಂಕರಿಸಿ ಧರಿಸುತ್ತಾರೆ. ಇಂದು ಆಧುನಿಕ ಕಾಲದಲ್ಲಿ ಬಿಳಿ ಗೌನ್‌ ಧರಿಸುವುದೂ ಇದೆ. ಅದರ ಮೇಲೆ ಶಾಲು ಬಳಸುತ್ತಾರೆ.

ಮುಖ್ಯವಾಗಿ ಕೇರಳದ ಸಾಂಪ್ರದಾಯಿಕ ದಿರಿಸಿನ ಕುರಿತು ಸರಳವಾಗಿ ಹೇಳುವುದಾದರೆ ಅವರು ಹತ್ತಿಯ ಹಾಗೂ ಬಿಳಿಯ ದಿರಿಸನ್ನು ಧರಿಸುವುದೇ ಹೆಚ್ಚು. ಇದು ಉಷ್ಣತೆ ಅಧಿಕವಿರುವುದರಿಂದ ಆರಾಮದಾಯಕವೂ ಹೌದು. ಸುಲಭವಾಗಿ ಉಡುವ ವಿಧಾನ, ಸರಳ ಶೈಲಿಗಳು ಕೇರಳದ ಪಾರಂಪರಿಕ ದಿರಿಸಿಗೆ ಪ್ರಾಮುಖ್ಯತೆ ನೀಡುವ ಎರಡು ವಿಷಯಗಳಾಗಿವೆ.

“ವಿಷು’ ಹಬ್ಬವು ಕೇರಳದ ಹೊಸವರ್ಷ. ಈ ಹಬ್ಬವನ್ನು ಕೇರಳಿಗರು ಬಲು ಸಂಭ್ರಮದಿಂದ ಆಚರಿಸುತ್ತಾರೆ. ಈ ಸಮಯದಲ್ಲಿ ಕೇರಳದ ಮಹಿಳೆಯರು ಧರಿಸುವ ಸಾಂಪ್ರದಾಯಿಕ ಸೀರೆಗೆ “ಕಸುವು ಸೀರೆ’ ಎನ್ನುತ್ತಾರೆ. ಇದು ಕೈಮಗ್ಗದಿಂದ ನೇಯ್ದ ಬಿಳಿ ಸೀರೆಯಾಗಿದ್ದು, ಚಿನ್ನದ ಬಣ್ಣದ ಅಂದದ ಅಂಚನ್ನು ಹೊಂದಿರುತ್ತದೆ. ಇದಕ್ಕೆ ಬಿಳಿಯ ಬಣ್ಣದ ರವಿಕೆ ಚಿನ್ನದ ಅಂಚಿರುವುದನ್ನು ಬಳಸುತ್ತಾರೆ. ಅಥವಾ ಚಿನ್ನದ ಬಣ್ಣದ ರವಿಕೆಯನ್ನೂ ಧರಿಸುವ ಸಂಪ್ರದಾಯವಿದೆ.

“ಓಣಂ’ ಇನ್ನೊಂದು ಕೇರಳಿಗರ ಸಂಭ್ರಮದ ಹಬ್ಬ. ಓಣಂ ಹಾಗೂ ತಿರುಓಣಂ ಹಬ್ಬದಂದು ಸೆಟ್ಟು ಮುಂಡು ವಿಧದ ವಸ್ತ್ರಧಾರಣೆಯೇ ಸಾಂಪ್ರದಾಯಕ ಉಡುಗೆಯಾಗಿ ಇಂದಿಗೂ ಜನಪ್ರಿಯವಾಗಿದೆ. ಮಗ್ಗದ ಬಿಳಿಯ ಹತ್ತಿಯ ಸೀರೆಗೆ, ಹಸಿರು ಬಣ್ಣದ ರವಿಕೆ ತೊಡುವುದು ಮುಖ್ಯ ಈ ದಿನ. ಜೊತೆಗೆ ಸಾಂಪ್ರದಾಯಿಕ ಆಭರಣ ಧಾರಣೆ ಈ ಉಡುಗೆಗೆ ಇನ್ನೂ ಅಧಿಕ ಮೆರುಗು ನೀಡುತ್ತದೆ.

ಇಂದು ತೆಯ್ಯಂ ಚಿತ್ರಗಳೊಂದಿಗೆ (ಮ್ಯೂರಲ್‌ ಕಲೆಯ) ಕೇರಳದ ಸಾಂಪ್ರದಾಯಿಕ ಉಡುಗೆಗೆ ಎಲ್ಲೆಡೆ ಬೇಡಿಕೆ ಇದೆ. ಸಾಂಪ್ರದಾಯಿಕ ಉಡುಗೆಗೆ ಆಧುನಿಕತೆಯ ಮೆರುಗೂ ದೊರೆತು ಸೀರೆಯ ಜೊತೆಗೆ ತೊಡುವ ರವಿಕೆಗೆ ವೈವಿಧ್ಯಮಯ ಕಸೂತಿ, ವಿನ್ಯಾಸ, ಹ್ಯಾಂಡ್‌ ಪೇಯಿಂಟ್‌ನಿಂದ ವಿನ್ಯಾಸ ಮಾಡುವುದು ಜನಪ್ರಿಯವಾಗುತ್ತಿದೆ. ಸೀರೆಯ ಅಂಚುಗಳಿಗೆ ಬಂಗಾರದ ಬಣ್ಣಕ್ಕೆ ಬದಲಾಗಿ ಬೆಳ್ಳಿಯ ಬಣ್ಣದ ಅಂಚನ್ನೂ ಧರಿಸಲಾಗುತ್ತದೆ. ಇದು ಹಳೆ ಬೇರು ಹೊಸ ಚಿಗುರಿನ ನೆನಪನ್ನು ಹೊತ್ತು ತರುತ್ತದೆ!

ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next