ಕಾರ್ಕಳ: ವರುಣನ ಆರ್ಭಟ ಕಾರ್ಕಳದಲ್ಲಿ ಮತ್ತಷ್ಟು ಬಿರುಸುಗೊಂಡಿದ್ದು ನದಿ, ಹಳ್ಳ, ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ದುರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡ್ಲಿ ಜಲಾಶಯ ತುಂಬಿ ಹರಿಯುತ್ತಿದ್ದು, ಸ್ಥಳೀಯರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ. ಈ ಬಾರಿ ಸಕಾಲಕ್ಕೆ ಜಲಾಶಯದ ಗೇಟ್ ತೆರೆದಿರುವ ಕಾರಣ ಸರಾಗವಾಗಿ ನೀರು ಹರಿಯುವಂತಾಗಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ. ಮೂರು ವರ್ಷಗಳ ಹಿಂದೆ ಜಲಾಶಯದ ನೀರು ಉಕ್ಕಿ ಹರಿದು ಈ ಪರಿಸರದ ಕೃಷಿ ತೋಟ, ಮನೆಗಳಿಗೂ ಹಾನಿಯಾಗಿತ್ತು. ಇಲ್ಲಿನ ಸೇತುವೆ ಸಂಪರ್ಕ ರಸ್ತೆಯೂ ಕಡಿತವಾಗಿತ್ತು.
ಸಂಪರ್ಕ ಕಡಿತ
ನೂರಾಳ್ ಬೆಟ್ಟು ಗ್ರಾಮದ ಕಂಪೆಟ್ಟು – ಪಿಜನೊಟ್ಟುವಿನಲ್ಲಿ ಅಳವಡಿಸಿದ್ದ ಮೋರಿ ಮಳೆ ನೀರಿಗೆ ಕೊಚ್ಚಿಹೋದ ಪರಿಣಾಮ ಕುಂಟೋಣಿ, ಕನ್ಯಾಲು ಪ್ರದೇಶಗಳ ಸುಮಾರು 120 ಮನೆಗಳ ಸಂಪರ್ಕ ಕಡಿತವಾಗಿದೆ. ಸ್ಥಳಕ್ಕೆ ಶಾಸಕ ವಿ. ಸುನಿಲ್ ಕುಮಾರ್, ತಹಶೀಲ್ದಾರ್ ಪುರಂದರ ಹೆಗ್ಡೆ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮೇ| ಹರ್ಷ, ತಾ.ಪಂ. ಸದಸ್ಯೆ ಮಂಜುಳಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಳೆ ಹಾನಿ
ಶನಿವಾರ ಸುರಿದ ಮಳೆಗೆ ಎರ್ಲಪ್ಪಾಡಿ ಗ್ರಾಮದ ವಿಜಯ ಶೆಟ್ಟಿ ಅವರ ಕೃಷಿ ತೋಟಕ್ಕೆ ಹಾನಿಯಾಗಿ 45 ಅಡಿಕೆ ಮರ ಮತ್ತು 250 ಬಾಳೆಗಿಡಗಳು ನಾಶವಾಗಿ ಸುಮಾರು 50 ಸಾವಿರ ರೂ. ನಷ್ಟ ಸಂಭವಿಸಿದೆ.
ಕಾಂತಾವರ ಗ್ರಾಮದ ಮೊರಂತಗುಡ್ಡೆ ಗಿರೀಶ್ ಪೂಜಾರಿ ಅವರಿಗೆ ಸೇರಿದ ಗೂಡಂಗಡಿಗೆ ಮರ ಬಿದ್ದು, 10 ಸಾವಿರ ರೂ., ಮೊರಂತಗುಡ್ಡೆ ಲೀಲಾ ನಲ್ಕೆ ಅವರ ಮನೆಗೆ ಭಾಗಶಃ ಹಾನಿಯಾಗಿ 10 ಸಾವಿರ ರೂ., ಯಾದವ ಅವರ ಮನೆಗೆ ಹಾನಿಯಾಗಿ 10 ಸಾವಿರ ರೂ., ಸುಂದರ ನಲ್ಕೆ ಅವರ ಮನೆಗೆ ಹಾನಿಯಾಗಿ 8 ಸಾವಿರ ರೂ. ಮತ್ತು ಬೇಲಾಡಿ ಗ್ರಾಮದ ಜಯಶ್ರೀ ವಿ. ಭಟ್ ಅವರ ವಾಸದ ಮನೆಗೆ ಭಾಗಶಃ ಹಾನಿಯಾಗಿ 20 ಸಾವಿರ ರೂ. ನಷ್ಟ ಸಂಭವಿಸಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.
ಶುಕ್ರವಾರ ರಾತ್ರಿ ಶುರುವಾದ ಮಳೆ ಶನಿವಾರವೂ ಮುಂದುವರಿದಿದೆ. ಶನಿವಾರ ಕಾರ್ಕಳ ನಗರದಲ್ಲಿ 133.2 ಮಿ.ಮೀ., ಇರ್ವತ್ತೂರು 131.8 ಮಿ.ಮೀ., ಅಜೆಕಾರು 141.2 ಮಿ.ಮೀ., ಬೆಳಂಜೆ 168.1 ಮಿ.ಮೀ., ಸಾಣೂರು 137.8 ಮಿ.ಮೀ., ಕೆದಿಂಜೆ 89.2 ಮಿ.ಮೀ., ಮುಳಿಕ್ಕಾರು 238.2 ಮಿ.ಮೀ., ಕೆರ್ವಾಶೆ 206.4 ಮಿ.ಮೀ. ಮಳೆಯಾಗಿದೆ.