Advertisement

ಮುಂಡ್ಲಿ  ಸೇತುವೆ ದುರಸ್ತಿಗೆ ಕೊನೆಗೂ ಪ್ರಸ್ತಾವನೆ ಸಲ್ಲಿಕೆ

03:43 AM Mar 17, 2019 | |

ಅಜೆಕಾರು: ಅಪಾಯಕಾರಿಯಾಗಿ ಬಿರುಕು ಬಿಟ್ಟಿರುವ ಮುಂಡ್ಲಿ ಸೇತುವೆ ದುರಸ್ತಿ ಪಡಿಸುವಂತೆ ಸ್ಥಳೀಯರು ನಿರಂತರ ಮನವಿ ಮಾಡುತ್ತಾ ಬಂದಿದ್ದು  ಶಿರ್ಲಾಲು ಗ್ರಾ.ಪಂ. ಅಧಿಕಾರಿಗಳು ಜನರ ಮನವಿಯಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. 

Advertisement

ಸುಮಾರು 35 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಮುಂಡ್ಲಿ ಸೇತುವೆಯ ಆಧಾರ ಸ್ತಂಭಗಳು ಬಿರುಕು ಬಿಟ್ಟು ಅಪಾಯಕಾರಿ ಸ್ಥಿತಿಯಲ್ಲಿರುವ ಬಗ್ಗೆ ಗ್ರಾಮಸ್ಥರು ಹಲವು ಗ್ರಾಮ ಸಭೆಗಳಲ್ಲಿ ಪ್ರಸ್ತಾವ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಇತ್ತೀಚೆಗೆ ನಡೆದ ಗ್ರಾಮ ಸಭೆಯಲ್ಲಿ ಮತ್ತೆ ಸೇತುವೆ ದುರಸ್ತಿ ಬಗ್ಗೆ ಪ್ರಸ್ತಾವ ಮಾಡಿದ ಗ್ರಾಮಸ್ಥರು ಮಳೆಗಾಲದ ಮೊದಲು ಸೇತುವೆ ಅಭಿವೃದ್ದಿಪಡಿಸದಿದ್ದಲ್ಲಿ ಕಳೆದ ಮಳೆಗಾಲದಲ್ಲಿ ಬಂಟ್ವಾಳ ತಾಲೂಕಿನ ಸೇತುವೆ ಮಳೆ ನೀರಿಗೆ ಕೊಚ್ಚಿ ಹೋದಂತೆ ಮುಂಡ್ಲಿ ಸೇತುವೆಯು ಕೊಚ್ಚಿ ಹೋಗಲಿದೆ ಎಂದು ಎಚ್ಚರಿಸಿದ್ದರು. ಈ ಬಗ್ಗೆ ಗ್ರಾಮ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಪಂಚಾಯತ್‌ ಅಧಿಕಾರಿ ಗಳು ಈಗ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಸೇತುವೆಯು ಸುಮಾರು 100 ಮೀ. ಉದ್ದವಿದ್ದು ಕಾರ್ಕಳದಿಂದ ತೆಳ್ಳಾರು ಮಾರ್ಗವಾಗಿ ಮುಂಡ್ಲಿ, ಶಿರ್ಲಾಲು, ಕೆರ್ವಾಶೆ ಗ್ರಾಮಗಳನ್ನು ಸಂಪರ್ಕಿಸುವ ಪ್ರಮುಖ ಸಂಪರ್ಕ ಕೊಂಡಿಯಾಗಿದೆ.  ಸೇತುವೆ ತಳಭಾಗದಲ್ಲಿ 7 ಆಧಾರ ಸ್ತಂಭಗಳಿದ್ದು ಇದರಲ್ಲಿ 4 ಆಧಾರ ಸ್ತಂಭಗಳು ಬಿರುಕು ಬಿಟ್ಟಿದ್ದು ತಳದಿಂದ ಮೇಲ್ಭಾಗದವರೆಗೂ ಸಿಮೆಂಟ್‌ ಕಾಂಕ್ರೀಟ್‌ ಕೊಚ್ಚಿಹೋಗಿ ಆಧಾರ ಸ್ತಂಭಗಳಿಗೆ ಅಳವಡಿಸಲಾದ ಕಬ್ಬಿಣದ ಸಲಾಕೆಗಳು ಹೊರಬಂದಿವೆೆ.

 ಮೇಲ್ಭಾಗದ ಕಾಂಕ್ರೀಟ್‌ ಸಹ ಕಿತ್ತುಹೋಗಿ ಅಳವಡಿಸಲಾದ ಕಬ್ಬಿಣದ ಸಲಾಕೆಗಳಗೆ ತುಕ್ಕು ಹಿಡಿದು ಸೇತುವೆಯಲ್ಲಿ ರಂದ್ರಗಳು ಉಂಟಾಗಿವೆೆ. ದುರ್ಬಲಗೊಂಡಿರುವ ಈ ಸೇತುವೆ ಮೇಲಿಂದ ವಾಹನಗಳು ಸಂಚರಿಸುವಾಗ ಸೇತುವೆಯು ಕಂಪಿಸುತ್ತಿದ್ದು ಪ್ರಯಾಣಿಕ ರಲ್ಲಿ ಭಯಭೀತಿ ಹುಟ್ಟಿಸುತ್ತಿದೆ.

Advertisement

ಹಲವು ಬಾರಿ ಮನವಿ ಮಾಡಿ ನಿಷ್ಪ್ರಯೋಜಕವಾಗಿದ್ದರೂ ಈ ಬಾರಿ ಪಂಚಾಯತ್‌ ಮೂಲಕ ಮೇಲಾಧಿಕಾರಿ ಗಳಿಗೆ ಪ್ರಸ್ತಾವನೆ ಹೋಗಿರುವುದರಿಂದ ಸೇತುವೆಯ ಅಭಿವೃದ್ಧಿ ಕಾಮಗಾರಿ ನಡೆಯಬಹುದೆಂಬ ಆಶಾಭಾವನೆಯಲ್ಲಿ ಸ್ಥಳೀಯರಿದ್ದಾರೆ.

ಪ್ರತಿ ವರ್ಷ ಕುಸಿಯುವ  ರಸ್ತೆ
ಪವರ್‌ ಪ್ರಾಜೆಕ್ಟ್ ನಿರ್ಮಾಣಗೊಂಡ ಬಳಿಕ ಪ್ರತಿ ವರ್ಷ ಸೇತುವೆಯ ಒಂದು ಪಾರ್ಶ್ವದ ಸಂಪರ್ಕ ರಸ್ತೆಯು ಕುಸಿಯುತಿದ್ದು ಮಳೆಗಾಲದಲ್ಲಿ ಸಂಚಾರ ನಡೆಸಲು ಸಂಕಷ್ಟಪಡಬೇಕಾಗಿದೆ. 2014ರಲ್ಲಿ ಸೇತುವೆಯ ಪಕ್ಕದಲ್ಲಿಯೇ ನೀರಿನ ಭಾರೀ ಸೆಳೆತಕ್ಕೆ ರಸ್ತೆ ಕೊಚ್ಚಿಹೋಗಿ ಸಂಪರ್ಕ ಕಡಿತಗೊಂಡಿತ್ತು. ಕಳೆದ ಮಳೆಗಾಲದಲ್ಲಿಯೂ  ಸುರಿದ ಭಾರೀ ಮಳೆಗೆ ರಸ್ತೆಯ ಅಂಚು ಸಂಪೂರ್ಣ ಕುಸಿದಿದ್ದು ತಾತ್ಕಾಲಿಕವಾಗಿ ಅರ್ಧ ಭಾಗಕ್ಕೆ ಮರಳಿನ ಚೀಲ ಇಡಲಾಗಿತ್ತು. ರಸ್ತೆ ಕುಸಿದ ಸಂದರ್ಭಗಳಲ್ಲಿ ಸೌಹಾರ್ದ ಫ್ರೆಂಡ್ಸ್‌ ಕ್ಲಬ್‌ ಜಾರ್ಕಳ  ಮುಂಡ್ಲಿ ಹಾಗೂ ಗ್ರಾಮಸ್ಥರು ಸೇರಿ ಜಲ್ಲಿ ಹಾಗೂ ಕಲ್ಲುಗಳನ್ನು ಹಾಕಿ ತಾತ್ಕಾಲಿಕ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡುತ್ತಾರೆಯೇ ವಿನಃ  ಇಲಾಖಾಧಿಕಾರಿಗಳು ಯಾವುದೇ ಸಹಾಯಕ್ಕೆ ಬರುವುದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಪ್ರಸ್ತಾವನೆ ಸಲ್ಲಿಕೆ
ಮುಂಡ್ಲಿ ಸೇತುವೆ ದುರ್ಬಲ ಗೊಂಡಿರುವ ಬಗ್ಗೆ  ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತುರ್ತು ದುರಸ್ತಿಯ ಬಗ್ಗೆ ಮತ್ತೆ ಮನವಿ ಮಾಡಲಾಗುವುದು.
ಸಂಗಮೇಶ ಬಣಾಕಾರ,  ಪಿಡಿಒ, ಶಿರ್ಲಾಲು ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next