ಬೆಳ್ಮಣ್: ಇತ್ತೀಚೆಗೆ ಮುಂಡ್ಕೂರು ಗ್ರಾಮಸಭೆಯಲ್ಲಿ ಜನಾಕ್ರೋಶಕ್ಕೆ ಕಾರಣವಾದ ಮದ್ಯದಂಗಡಿ ವಿವಾದ ಮತ್ತೆ ಎದ್ದಿದ್ದು ಮದ್ಯದಂಗಡಿ ವಿರುದ್ಧ ಹೋರಾಟ ನಡೆಸುತ್ತಿದ್ದ ಸಂತೃಸ್ತ ಕೊರಗ ಕುಟುಂಬಗಳು ತಮ್ಮ ಬೆಂಬಲಿತ ಸಂಘಟನೆಯೊಂದಿಗೆ ಸೋಮವಾರ ಪಂ. ಎದುರು ಅಹೋರಾತ್ರಿ ಉಪವಾಸ ನಡೆಸಲಾರಂಭಿಸಿವೆ.
ಬೆಳ್ಮಣ್ ವಲಯ ಕೊರಗ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಜಿಲ್ಲಾ ಮಟ್ಟದ ನಾಯಕರೊಂದಿಗೆ ಪ್ರತಿಭಟನೆಯಲ್ಲಿ ತೊಡಗಿದ್ದು ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಅಬಕಾರಿ ಆಧಿಕಾರಿಗಳು ಬಂದು ಸಂತೈಸಿದರೂ ಕದಲಲೊಪ್ಪಲಿಲ್ಲ.
ಇತ್ತೀಚೆಗೆ ನಡೆದಿದ್ದ ಮುಂಡ್ಕೂರು ಗ್ರಾಮ ಸಭೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಈ ಮದ್ಯದಂಗಡಿಯ ಬಗ್ಗೆ ಅಬಕಾರಿ ಆಧಿಕಾರಿಗಳು ಹಾಗೂ ಅಂಗಡಿ ಮಾಲಕರ ನಡುವೆ ಮಾತುಕತೆ ನಡೆದು ವಿವಾದಿತ ಮದ್ಯದಂಗಡಿಯನ್ನು ಸ್ಥಳಾಂತರಿಸುವುದಾಗಿ ಮಾಲಕರು ಮಾತು ಕೊಟ್ಟಿದ್ದರು. ಈ ಬಗ್ಗೆ ಯಾವುದೇ ಅಭಿವೃದ್ಧಿ ಕಾಣದ ಹಿನ್ನೆಲೆಯಲ್ಲಿ ಬೆಳ್ಮಣ್ ವಲಯ ಕೊರಗ ಸಂಘಟನೆಯ ಪದಾಧಿಕಾರಿಗಳು ಸೋಮವಾರ ಮುಂಡ್ಕೂರು ಗ್ರಾ.ಪಂ. ಎದುರು ಸಾಂಘಿಕ ಪ್ರತಿಭಟನೆ ನಡೆಸಿದರು.ಸಂಘಟನೆಯ ಜಿಲ್ಲಾಧ್ಯಕ್ಷ ಬೊಗ್ರ ಕೊರಗ, ಒಕ್ಕೂಟದ ಕಾರ್ಯದರ್ಶಿ ದಿವಾಕರ, ಬೆಳ್ಮಣ್ ವಲಯದ ಶಶಿಕಲಾ, ಗೌರಿ ಕೆಂಜೂರು, ವಲಯಾಧ್ಯಕ್ಷ ಕುಡ³ ಕೊರಗ ಮತ್ತಿತರರಿದ್ದರು.
ಮುಂಡ್ಕೂರು ಪಂಚಾಯತ್ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಪಿಡಿಒ ಶಂಕರ ನಾಯಕ್, ಕಾರ್ಕಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಗೋಪಾಲ ಮೂಲ್ಯ, ಸದಸ್ಯೆ ಆಶಾ ದೇವೇಂದ್ರ ಶೆಟ್ಟಿ ಮತ್ತಿತರರಿದ್ದು ಮುಂಡ್ಕೂರು ಪಂಚಾಯತ್ ಈ ಬಗ್ಗೆ ಯಾವುದೇ ಡೋರ್ ನಂಬರ್ ನೀಡಿಲ್ಲ ಆಲ್ಲದೆ ಪಂಚಾಯತ್ ಈ ಮದ್ಯದಂಗಡಿಗೆ ಯಾವುದೇ ಪರವಾನಿಗೆ ನೀಡಿಲ್ಲವೆಂದು ಸ್ಪಷ್ಟ ಪಡಿಸಿದರು.
ಅನಂತರ ಕಾರ್ಕಳ ತಹಶೀಲ್ದಾರರು ಸಮಸ್ಯೆಯನ್ನು ಸರಿಪಡಿಸಲು 5 ದಿನದ ಗಡುವು ನೀಡಬೇಕು ಎಂದು ಬಿನ್ನವಿಸಿದ ಕಾರಣ ಪತ್ರಿಭಟನೆಯನ್ನು ಸದ್ಯ ಹಿಂಪಡೆಯಲಾಯಿತು.