Advertisement

ಮುಂಡ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ

01:04 PM Nov 09, 2019 | Sriram |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಬೆಳ್ಮಣ್‌: ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಸನ್ನಿಧಿಯಲ್ಲಿ 1906ರಲ್ಲಿ ದಿ| ಅಣ್ಣಪ್ಪ ಶ್ಯಾನುಭಾಗರಿಂದ ಆರಂಭಿಸಲಾದ ಮುಂಡ್ಕೂರು ಸರಕಾರಿ ಮಾದರಿ ಹಿ.ಪ್ರಾ. ಶಾಲೆ ಸಹಸ್ರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದೆ.

ಗ್ರಾಮೀಣ ಭಾಗವಾದ ಮುಂಡ್ಕೂರು, ಮುಲ್ಲಡ್ಕ, ಇನ್ನಾ , ಬೋಳ, ಉಳೆಪಾಡಿ, ಸಂಕಲಕರಿಯದಲ್ಲಿ ಕೃಷಿಕರೇ ಅಧಿಕವಾಗಿರುವ ಈ ಊರಲ್ಲಿ ಅಣ್ಣಪ್ಪ ಶ್ಯಾನುಭಾಗರು, ಹಿಂದಿನ ಮುಖ್ಯ ಶಿಕ್ಷಕ ಪುಂಡಲೀಕ ಮಲ್ಯರು ದೇಗುಲದ ಮಾಜಿ ಆಡಳಿತ ಮೊಕ್ತೇಸರ ನಡಿಗುತ್ತು ಜಗದೀಶ್ಚಂದ್ರ ಹೆಗ್ಡೆಯವರ ಮೂಲಕ ಶಾಲೆಗೆ ಹೊಸ ಜಾಗದ ತಲಾಶೆ ನಡೆಸಿ ನಿವೇಶನ ಹೊಂದುವಲ್ಲಿ ಯಶಸ್ವಿಯಾದರು.

ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಪ್ರಧಾನ ಅರ್ಚಕ ಜಯರಾಮ ಆಚಾರ್ಯ, ಡಾ| ಪಿ. ಬಾಲಕೃಷ್ಣ ಆಳ್ವರ ಮುತುವರ್ಜಿಯಲ್ಲಿ 1986ರಲ್ಲಿ ಅಂದಿನ ಸಚಿವ ಕೆ. ಅಮರನಾಥ ಶೆಟ್ಟಿಯವರ ಆಧ್ಯಕ್ಷತೆಯಲ್ಲಿ, ಶಿಕ್ಷಣ ಸಚಿವ ಗೋವಿಂದೇ ಗೌಡರಿಂದ ಪಂಚಾಯತ್‌ ಬಳಿಯಲ್ಲಿ ನೂತನ ಕಟ್ಟಡ ಉದ್ಘಾಟಿಸಲ್ಪಟ್ಟಿತು.

ಪ್ರಸ್ತುತ 120 ವಿದ್ಯಾರ್ಥಿಗಳು
ಪ್ರಸ್ತುತ 120 ವಿದ್ಯಾರ್ಥಿಗಳಿದ್ದು ಮುಖ್ಯ ಶಿಕ್ಷಕರು , ದೈಹಿಕ ಶಿಕ್ಷಣ ಶಿಕ್ಷಕರು
ಸೇರಿದಂತೆ ಒಟ್ಟು ಐವರು ಖಾಯಂ ಶಿಕ್ಷಕರು, ಓರ್ವ ಗುಬ್ಬಚ್ಚಿ ನ್ಪೋಕನ್‌ ಇಂಗ್ಲಿಷ್‌ ಕಲಿಕೆಯ ಶಿಕ್ಷಕಿ ಹಾಗೂ ಓರ್ವ ಗೌರವ ಶಿಕ್ಷಕಿ ಈ ಶಾಲೆಯಲ್ಲಿ ಸೇವೆ
ಸಲ್ಲಿಸುತ್ತಿದ್ದಾರೆ.ಶಾಲೆಯಲ್ಲಿ ಸಾಕಷ್ಟು ಕೊಠಡಿ ವ್ಯವಸ್ಥೆ ಇದ್ದು, ಸಭಾಭವನ, ರಂಗವೇದಿಕೆ, ಶಾಲಾ ಆವರಣಗೋಡೆ, ಬಿಸಿಯೂಟ ಆಡುಗೆ ಕೋಣೆ ಸಹಿತ ಸಕಲ ವ್ಯವಸ್ಥೆಗಳು ಇವೆ.

Advertisement

ಸಾಧಕ ಹಳೆವಿದ್ಯಾರ್ಥಿಗಳು
ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಗೌರವಯುತ ಸ್ಥಾನದಲ್ಲಿದ್ದಾರೆ. ವೈದ್ಯರಾಗಿ, ಎಂಜಿನಿಯರ್‌ಗಳಾಗಿ, ಉದ್ಯಮಿಗಳಾಗಿ, ಹೊಟೇಲ್‌ ಮಾಲಕರಾಗಿ , ಸಮಾಜ ಸೇವಕರಾಗಿ,ಶಿಕ್ಷಕರಾಗಿ, ಜನಪ್ರತಿನಿಧಿಗಳಾಗಿ ಗುರುತಿಸಿಕೊಂಡ ನೂರಾರು ಮಂದಿ ಈ ಶಾಲೆಯನ್ನು ಇನ್ನೂ ಮರೆತಿಲ್ಲ.
ಮುಂಡ್ಕೂರು ಫ್ರೆಂಡ್ಸ್‌ ಎಂಬ ಹಳೆ ವಿದ್ಯಾರ್ಥಿಗಳ ಬಳಗ ಈ ಶಾಲೆಯ ಒಂದನೇ ತರಗತಿ ನೋಂದಣಿಗೆ ತಲಾ 2, 000 ರೂ. ಹಾಗೂ ನಿವೃತ್ತ ಕಂದಾಯ ಆಧಿಕಾರಿ ಅವಿಲ್‌ ಡಿ’ಸೋಜಾ ತಲಾ 1,000ರೂ. ನೀಡಿ ಈ ಶಾಲೆಯ ಉಳಿವಿಗಾಗಿ ಸಹಕರಿಸುತ್ತಿದ್ದಾರೆ.

ಆಶ್ರಯದ ಆಸರೆ
ಶಾಲೆಯಲ್ಲಿ ಕಳೆದ 4 ವರ್ಷಗಳ ಹಿಂದೆ ವಿದ್ಯಾರ್ಥಿಗಳ ಸಂಖ್ಯೆ ನೂರರ ಕೆಳಗೆ ತಲುಪಿದಾಗ ಮುಲ್ಲಡ್ಕ ಗುರುಪ್ರಸಾದ್‌, ಸುಧಾಕರ ಶೆಟ್ಟರ ನೇತೃತ್ವದ ಆಶ್ರಯ ಚಾರಿಟೆಬಲ್‌ ಟ್ರಸ್ಟ್‌ ವಿವಿಧ ಸೌಕರ್ಯಗಳಿಗಾಗಿ ಸುಮಾರು 15 ಲಕ್ಷ ರೂ.ಗಳಿಗೂ ಆಧಿಕ ಹಣ ವ್ಯಯಿಸಿ ಶಾಲೆಯ ಉಳಿವಿಗೆ ಸಹಕರಿಸಿತ್ತು. ನೂತನ ಕಂಪ್ಯೂಟರ್‌ ಕೊಠಡಿ, ವಾಚನಾಲಯ, ಶೌಚಾಲಯ, ಸಮವಸ್ತ್ರ, ಕ್ರೀಡಾ ಸಮವಸ್ತ್ರ, ಪಠ್ಯೇತರ ಚಟುವಟಿಕೆಗಳ ಆಯೋಜನೆ ನಡೆಸಿ ಶಾಲೆಗೆ ಹೈಟೆಕ್‌ ಸ್ಪರ್ಶ ನೀಡಿತ್ತು. ಪರಿಣಾಮವಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಮಖ್ಯೆ 150ಕ್ಕೆ ತಲುಪಿತ್ತು. ಹಿಂದಿ ಚಿತ್ರ ರಂಗದ ತಾರೆ ನಾನಾಪಾಟೇಕರ್‌ ಈ ಶಾಲೆಗೆ ಭೇಟಿ ನೀಡಿದ್ದು ಕಂಪ್ಯೂಟರ್‌ ಕೊಠಡಿಗೆ ಅನುದಾನ ನೀಡಿದ್ದರು.

ಶತಮಾನ ಕಂಡ ನಮ್ಮೂರ ಹೆಮ್ಮೆಯ ಕನ್ನಡ ಶಾಲೆಯ ಬಗ್ಗೆ ನಮಗೆ ಹೆಮ್ಮೆ ಇದೆ. ಎಲ್ಲ ಕಡೆಗಳಂತೆ ವಿದ್ಯಾರ್ಥಿಗಳ ಕೊರತೆ ಬಾಧಿಸುತ್ತಿದೆ. ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿಗಳು, ಶಿಕ್ಷಣಪ್ರೇಮಿಗಳು ಹಾಗೂ ಇತರ ದಾನಿಗಳು ಈ ಕನ್ನಡ ಶಾಲೆಯನ್ನು ಉಳಿಸಲು ನಮ್ಮೊಂದಿಗೆ ಶ್ರಮಿಸುತ್ತಿದ್ದಾರೆ. ಉತ್ತಮ ಶಿಕ್ಷಕರ ಬಳಗ ಇದೆ. ಈ ಶಾಲೆಯನ್ನು ಉಳಿಸುವ ಜವಾಬ್ದಾರಿ ಎಲ್ಲರದ್ದಾಗಿದೆ.
-ಪೂರ್ಣಿಮಾ ಭಟ್‌ , ಶಾಲೆಯ ಮುಖ್ಯ ಶಿಕ್ಷಕಿ

ಶತಮಾನ ಕಂಡ ಮುಂಡ್ಕೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಎನ್ನಲು ಹೆಮ್ಮೆ ಎನಿಸುತ್ತದೆ. ಅಂದು ಈ ಶಾಲೆಯಲ್ಲಿ ಗುರುಗಳು ಕಲಿಸಿದ ಪಾಠ ಇಂದು ಬದುಕುವ ಪಾಠ ಕಲಿಸಿತು.
-ಡಾ| ಗೋಪಾಲ ಮುಗೆರಾಯರು,
ನಿರ್ದೇಶಕರು, ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ , ಗೋವಾ

-ಶರತ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next