ಕನ್ನಡ ಚಿತ್ರಗಳು ವಿದೇಶದಲ್ಲಿ ಬಿಡುಗಡೆಯಾಗುವುದೇ ಸಂತಸದ ಸುದ್ದಿ. ಅದರಲ್ಲೂ ಅಲ್ಲಿನ ಕನ್ನಡಿಗರು ಮೆಚ್ಚಿಕೊಂಡರೆ ಅದಕ್ಕಿಂತ ಖುಷಿಯ ಸಂಗತಿ ಮತ್ತೂಂದಿಲ್ಲ. ಈಗ ಕನ್ನಡದ ಚಿತ್ರವೊಂದು ವಿದೇಶದಲ್ಲಿ ಬಿಡುಗಡೆಯಾಗುವುದರ ಜೊತೆಯಲ್ಲಿ ಆ ದೇಶಗಳ ಭಾಷೆಯಲ್ಲಿ ಡಬ್ ಆಗಿ ರಿಲೀಸ್ ಆಗುತ್ತಿದೆ ಅನ್ನೋದು ವಿಶೇಷ. ಹೌದು, ಈಗಾಗಲೇ ತಮಿಳು, ತೆಲುಗು, ಹಿಂದಿ ಸಿನಿಮಾಗಳು ವಿದೇಶಗಳಲ್ಲಿನ ಆಯಾ ಭಾಷೆಯಲ್ಲಿ ಬಿಡುಗಡೆ ಆಗಿದ್ದು ಗೊತ್ತೇ ಇದೆ. ಈಗ ಕನ್ನಡದ “ಮುಂದಿನ ನಿಲ್ದಾಣ’ ಚಿತ್ರಕ್ಕೆ ಚೈನಾ ಹಾಗೂ ಜಪಾನ್ ಭಾಷೆಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡುವಂತೆ ಬೇಡಿಕೆ ಬಂದಿದೆ. ಈ ಕುರಿತು ಸ್ವತಃ ನಿರ್ಮಾಪಕ ಮುರಳಿ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾಗಿರುವ “ಮುಂದಿನ ನಿಲ್ದಾಣ’ ಚಿತ್ರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿದೆ. ಆ ಕುರಿತು ಹೇಳಿಕೊಂಡ, ನಿರ್ಮಾಪಕರು, “ಈ ರಂಗ ನಮಗೆ ಹೊಸದು. ಆರಂಭದಲ್ಲಿ ಸ್ವಲ್ಪ ಭಯ ಇತ್ತು. ಚಿತ್ರವನ್ನು ಜನ ಹೇಗೆ ಸ್ವೀಕರಿಸುತ್ತಾರೋ ಏನೋ ಅಂತ. ಆದರೆ, ಈಗ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ನಮ್ಮಲ್ಲಿ ಮತ್ತಷ್ಟು ಉತ್ಸಾಹ ತುಂಬಿ, ಇನ್ನೊಂದು ಚಿತ್ರ ಮಾಡುವ ಯೋಚನೆ ಬಂದಿದೆ. ವಿದೇಶಗಳಲ್ಲೂ ಚಿತ್ರ ಬಿಡುಗಡೆಯಾಗಿದ್ದು, ಅಮೆರಿಕ, ಯುರೋಪ್ ದೇಶಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿದೆ’ಎಂದು ವಿವರಿಸುತ್ತಾರೆ ನಿರ್ಮಾಪಕರು.
ಇನ್ನು, ನಿರ್ದೇಶಕ ವಿನಯ್ ಭಾರದ್ವಜ್ ಅವರಿಗೆ ಸಹಜವಾಗಿಯೇ ಖುಷಿ ಕೊಟ್ಟಿದೆ. “ಚಿತ್ರ ನೋಡಿದವರೆಲ್ಲರೂ ಚಿತ್ರದ ಬಗ್ಗೆ ಒಳ್ಳೆಯ ಮಾತು ಹೇಳುತ್ತಿರುವುದರಿಂದ ಚಿತ್ರ ನೋಡುಗರ ಸಂಖ್ಯೆ ಏರಿಕೆಯಾಗಿದೆ. ಇದು ಹೀಗೆ ಮುಂದುವರೆದರೆ ಎರಡನೆ ವಾರಕ್ಕೆ ಹಾಕಿದ ಬಂಡವಾಳ ಹಿಂದಿರುಗಬಹುದು’ ಎಂಬುದು ನಿರ್ದೇಶಕ ವಿನಯ್‌ಭಾರದ್ವಾಜ್ ಮಾತು.
ನಾಯಕ ಪ್ರವೀಣ್ ತೇಜ್ ಅವರ ಮೊಗದಲ್ಲಿ ಮಂದಹಾಸ ಮೂಡಿದ್ದು, “ಚಿತ್ರ ಮೆಚ್ಚುಗೆ ಪಡೆದಿದೆ ಅಂದರೆ, ಅದಕ್ಕೆ ಕಾರಣ, ಚಿತ್ರತಂಡ, ಪ್ರೇಕ್ಷಕರು, ಮಾದ್ಯಮ, ತಂತ್ರಜ್ಞರು ಹಾಗು ಕಲಾವಿದರ ಸಹಕಾರ, ನಿರ್ಮಾಪಕರ ಪ್ರೋತ್ಸಾಹ, ನಿರ್ದೇಶಕರ ಶ್ರಮ ಕಾರಣ’ ಎಂದರು ಪ್ರವೀಣ್.
ನಾಯಕಿ ರಾಧಿಕಾ ನಾರಾಯಣ್ ಅವರಿಗೆ, “ಒಳ್ಳೆಯ ಚಿತ್ರವನ್ನು ಕನ್ನಡಿಗರು ಎಂದೂ ಕೈ ಬಿಟ್ಟಿಲ್ಲ ಎಂಬ ನಂಬಿಕೆ ನಿಜವಾಗಿದೆಯಂತೆ. ಅನನ್ಯಾ ಅವರಿಗೆ ಒಳ್ಳೆಯ ಚಿತ್ರದಲ್ಲಿ ನಟಿಸಿದ್ದು ಖುಷಿ ಕೊಟ್ಟಿದೆಯಂತೆ. ಜನರು ಪ್ರೋತ್ಸಾಹಿಸಿದ್ದರಿಂದ ಸಿನಿಮಾಗೆ ಎಲ್ಲೆಡೆಯಿಂದ ಮೆಚ್ಚುಗೆ ಸಿಗುತ್ತಿದೆ’ ಎಂದರು ಅನನ್ಯಾ.