ಶಿರಸಿ: ಕೋವಿಡ್ ಸೋಂಕು ಇಳಿಮುಖವಾಗುತ್ತಿದ್ದಂತೇ ರಾಜ್ಯ ಸರಕಾರದ ಲಾಕ್ ಡೌನ್‌ದಿಂದ ಅನ್‌ಲಾಕ್‌ಗೆ ಆದೇಶ ಮಾಡುತ್ತಿದ್ದಂತೇ ಇತ್ತ ಅನ್‌ಲಾಕ್‌ಗೂ ಒಂದು ದಿನ ಮೊದಲೇ ಸಾವಿರಾರು ಬೆಳ್ಳಕ್ಕಿಗಳು ತಾಲೂಕಿನ ಸೋಂದಾ ಭಾಗದ ಮುಂಡಿಗೆಕೆರೆ ಪಕ್ಷಧಾಮಕ್ಕೆ ದಾಂಗುಡಿ ಇಟ್ಟಿವೆ.
ಮುಂಗಾರು ಆರಂಭವಾಗುವ ಸೂಚನೆಯಾಗಿ ಸಹಸ್ರಾರು ಪಕ್ಷಿಗಳು ಮುಂಡಗೇಕೇರೆಗೆ ಬರುತ್ತಿದ್ದು, ಇಲ್ಲಿ ವಂಶಾಭಿವೃದ್ಧಿ ನಡೆಸಿಕೊಂಡು ಹಾರಿ ಹೋಗುವದು ವಾಡಿಕೆ ಆಗಿದೆ. ಈ ವಾಡಿಕೆಯಂತೆ ಭಾನುವಾರ ಮುಂಜಾನೆ 6 ಗಂಟೆಯಿಂದಲೇ ಎಲ್ಲೆಲ್ಲಿಂದಲೋ ಸಾವಿರಾರು ಬೆಳ್ಳಕ್ಕಿಗಳು ಹಾರಿ ಬಂದಿವೆ.
ಹಿಂಡು ಹಿಂಡಾಗಿ ಬಂದ ಸುಮಾರು 80ರಿಂದ 90 ಪಕ್ಷಿಗಳು ಕೆರೆಯ ಪಕ್ಕದಲ್ಲಿಯ ಎತ್ತರದ ಮರದ ಮೇಲೆ ಕುಳಿತು ಕೊಂಡರೆ, ಅವುಗಳಲ್ಲಿ ಕೆಲವು ಕೆರೆಯ ಮೇಲೆ ಹಾರಾಟ ನಡೆಸಿ ಸಮೀಕ್ಷೆ ಮಾಡುತ್ತಿರುವುದು ಕಂಡು ಬಂದಿದೆ. 8:30ರವೇಳೆಗೆ ಎಲ್ಲ ಬೆಳ್ಳಕ್ಕಿಗಳು ಒಮ್ಮೆಲೇ ಹಾರಿ ನೇರವಾಗಿ ಕೆರೆಗೆ ಇಳಿದಿವೆ. ಸಂಜೆ ವೇಳೆಗೆ ಇನ್ನೂ ಕೆಲವು ಹಕ್ಕಿಗಳು ಬಂದಿಳಿದಿವೆ ಹಾಗೂ ಅಲ್ಲಿಯೇ ವಸತಿ ಮಾಡಿವೆ. ಇದು ಮುಂಗಾರು ಆಗಮನದ ಮುನ್ಸೂಚನೆ.
ಇನ್ನು ಮುಂದಿನ 5 ರಿಂದ6ದಿನಗಳಲ್ಲಿ ನಿರಂತರ ಮಳೆ ಆಗುತ್ತದೆ ಎಂಬುದು 26 ವರ್ಷಗಳ ದಾಖಲೆಗಳ ಅಧ್ಯಯನದಿಂದ ದೃಢಪಟ್ಟಿದೆ. ಈ ದಾಖಲಾತಿಯನ್ನು ಸೋಂದಾ ಜಾಗೃತ ವೇದಿಕೆ 1995 ರಿಂದ ನಿರಂತರವಾಗಿ ಮಾಡುತ್ತಾ ಬಂದಿದೆ ಎನ್ನುತ್ತಾರೆ ವೇದಕೆ ಪ್ರಮುಖ ರತ್ನಾಕರ ಹೆಗಡೆ ಬಾಡಲಕೊಪ್ಪ ಕಳೆದ ಮೇ ತಿಂಗಳಲ್ಲಿ ಚಂಡಮಾರುತದ ಪ್ರಭಾವದಿಂದ ಮಳೆಯಾಗಿದೆ. ಇದರಿಂದ ಹಕ್ಕಿಗಳು ಮೇ 16ರಿಂದಕೆರೆಯ ಮೇಲ್ಗಡೆ ಹಾರಾಟ ನಡೆಸಿದ್ದವು. ನಂತರ ವಾಪಸ್ ಆಗಿದ್ದವು. ಈಗ ಪುನಃ ನಿನ್ನೆ ಕೆರೆಗೆ ಇಳಿದಿವೆ.
ಪಕ್ಷಿಗಳಿಗೆ ಈ ರೀತಿಯ ಗೊಂದಲ ಆಗಿರುವುದು ಇದು 2ನೇ ಬಾರಿ. 2005ರ ಮೇ ತಿಂಗಳಲ್ಲಿ ಕೆರೆಗೆ ಇಳಿದ ಪಕ್ಷಿ ಗಳು ವಾತಾವರಣದಲ್ಲಿ ಉಂಟಾದ ವೈಪರೀತ್ಯ ದ ಕಾರಣ ಕೆರೆ ಬಿಟ್ಟು ಹೋಗಿದ್ದವು. ತೌಕ್ತೆ ಚಂಡ ಮಾರುತ ದಿಕ್ಕು ತಪ್ಪಿಸಿರಬೇಕು ಎಂದು ಹೇಳುತ್ತಾರೆ ಪಕ್ಷಿ ಪ್ರಿಯರು.