ಮುಂಡರಗಿ: ತಾಲೂಕಿನಲ್ಲಿ ಬಿತ್ತನೆಯಾಗಿರುವ ಗೋವಿನಜೋಳ ಬೆಳೆಗೆ ಲದ್ದಿಹುಳು(ಸೈನಿಕ)ವಿನ ಕಾಟ ಹೆಚ್ಚಾಗಿದ್ದು, ರೈತರು ಕಂಗಾಲಾಗಿದ್ದಾರೆ.
ತಾಲೂಕಿನ 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯ ಗುರಿ ಹೊಂದಲಾಗಿತ್ತು.ಆದರೇ ತಾಲೂಕಿನಲ್ಲಿ 5676 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಮೆಕ್ಕೆಜೋಳ ಬಿತ್ತನೆಯಾಗಿದೆ. ಬಿತ್ತನೆಯಾದ ಮೆಕ್ಕೆಜೋಳಕ್ಕೆ ಶೇ.80 ಪ್ರದೇಶದಲ್ಲಿ ಬೆಳೆಯು(ಸೈನಿಕ)ಲದ್ದಿಹುಳುವಿನ ಬಾಧೆ ಉಂಟಾಗಿದ್ದು, ಸಾವಿರಾರು ರೂಪಾಯಿ ವ್ಯಯಿಸಿದ ರೈತರು ಚಿಂತಾಕ್ರಾಂತರಾಗಿದ್ದಾರೆ.
ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡು ಚಿಂತಿಸುವಂತೆ ಆಗಿದೆ. ಮೆಕ್ಕೆಜೋಳ ಹುಟ್ಟಿ ನಾಲ್ಕೈದು ಎಲೆಗಳು ಇದ್ದಾಗಲೇ ಲದ್ದಿಹುಳು ಕಾಣಿಸಿಕೊಂಡಿದ್ದು, ಬೆಳೆ ನಾಶ ಮಾಡುತ್ತಿರುವುದು ರೈತರಲ್ಲಿ ಬೆಳೆ ಕೈಗೆ ಸಿಗದಂತಹ ಪರಿಸ್ಥಿತಿ ಇದೆ. ರೈತರು ಲದ್ದಿಹುಳು ನಿಯಂತ್ರಿಸಲು ಕ್ರಿಮಿನಾಶಕ ಸಿಂಪಡಿಸಲು ಮುಂದಾಗಿದ್ದಾರೆ. ಮೆಕ್ಕೆಜೋಳದ ಸುಳಿಯಲ್ಲಿ ಕ್ರಿಮಿನಾಶಕ ಗುಳಿಗೆಯನ್ನು ಇಟ್ಟರೂ ಜಗ್ಗದ ಲದ್ದಿಹುಳು ಮೆಕ್ಕೆಜೋಳವನ್ನೂ ಬಿಡದಂತೆ ನಾಶ ಮಾಡುತ್ತಿವೆ.
ಮೆಕ್ಕೆಜೋಳಕ್ಕೆ ಖರ್ಚು: ಒಂದು ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲು ಭೂಮಿ ಸಾಗು ಮಾಡುತ್ತಿರುವುದರಿಂದ ಹಿಡಿದು ಬೀಜ,ಗೊಬ್ಬರ,ಬಿತ್ತನೆಗಾಗಿ ಏನಿಲ್ಲವೆಂದರೂ 8 ಸಾವಿರ ರೂಪಾಯಿ ಖರ್ಚು ಬರಲಿದೆ.ಆದರೆ ಬಿತ್ತನೆಯಾಗಿ ಬೆಳೆಯುತ್ತಿರುವ ಬೆಳೆಗೆ ಹತ್ತಿದ ಲದ್ದಿ ಹುಳುಗಳನ್ನು ರೈತರು ಆರಿಸಿ ತಂದು ಹೊಲದ ಬದುವಿನಲ್ಲಿ ಹಾಕುತ್ತಿದ್ದಾರೆ.ಕ್ರಿಮಿನಾಶಕದಿಂದ ಕೆಲವೇ ಕೆಲವು ಹುಳು ಸಾಯುತ್ತಿದ್ದರೂ, ಹೊಲದ ತುಂಬೆಲ್ಲಾ ಲದ್ದಿಹುಳುಗಳ ಸಾಮ್ರಾಜ್ಯವೇ ಸೃಷ್ಟಿಯಾಗಿದೆ.
ಮಕ್ಕೆಜೋಳವನ್ನು ಉತ್ತಮವಾಗಿ ಬೆಳೆಯಲು, ಫಾಲ್ ಸೈನಿಕ ಲದ್ದಿಹುಳು ಹಾಗೂ ಇತರ ಕೀಟಗಳ ದಾಳಿಯಿಂದ ಬೆಳೆ ರಕ್ಷಿಸಿಕೊಳ್ಳಲು ಸೂಕ್ತ ನಿರ್ವಹಣಾ ಕ್ರಮಗಳ ಅವಶ್ಯವಿದೆ. ಕ್ರಿಮಿನಾಶಕಗಳಾದ ಸೈಂಟ್ರಾನಿಲಿಪ್ರೊಲ್ 19.8%ಥೈಮಿಥೋಕ್ಸಾಮ್ 19.8% ಕೀಟನಾಶಕವನ್ನು ಪ್ರತಿ ಕಿ.ಗ್ರಾಂ. ಬೀಜಕ್ಕೆ 4 ಗ್ರಾಂ.ನಂತೆ ಬೀಜೋಪಚಾರ ಮಾಡುವುದರಿಂದ ಆರಂಭದಲ್ಲಿ 2 ರಿಂದ 3 ವಾರಗಳವರೆಗೆ ಕೀಟಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಅಲ್ಲದೇ ಬೆಳೆ ಬಿತ್ತಿದ 30 ದಿನದೊಳಗೆ ಉಸುಕು+ಸುಣ್ಣವನ್ನು 9:1ರ ಅನುಪಾತದಲ್ಲಿ ಸುಳಿಯಲ್ಲಿ ಹಾಕುವುದರಿಂದ ನಿರ್ವಹಣೆ ಕೀಟ-ಹುಳು ನಿಯಂತ್ರಣ ಮಾಡಬಹುದು. 5-8 ಲೀಟರ್ ನೀರಿನಲ್ಲಿ 250 ಮಿ.ಲೀ. ಮೋನೊಕ್ರೊಟೊಫಾಸ್ 36 ಎಸ್.ಎಲ್ ಕೀಟನಾಶಕವನ್ನು 2 ಕೆ.ಜಿ ಬೆಲ್ಲದೊಂದಿಗೆ ಬೆರೆಸಿ 20 ಕೆ.ಜಿ ಅಕ್ಕಿ ಅಥವಾ ಗೋ ತೌಡನಲ್ಲಿ ಬೆರೆಸಿ ಒಂದು ಡ್ರಮ್ ಅಥವಾ ಪ್ಲಾಸ್ಟಿಕ್ ಚೀಲದಲ್ಲಿ 24 ಗಂಟೆಗಳ ಕಾಲ ಕಳಿಯಲು ಬೀಡಬೇಕು. ಕಳಿತ ಪಾಷಾಣವನ್ನು ಆದಷ್ಟು ಸುಳಿಯಲ್ಲಿಯೇ ಬೀಳುವಂತೆ ಸಂಜೆಯ ಸಮಯದಲ್ಲಿ ಹಾಕಬೇಕು. ಕೀಟನಾಶಕಗಳಾದ ಕ್ಲೋರ್‍ಯಾಂಟ್ರಿನಿಲಿಪ್ರೊಲ್ 18.5 ಇ.ಸಿಯನ್ನು 0.4 ಮಿ.ಲಿ. ಅಥವಾ ಲ್ಯಾಮ್ಡಾ ಸೈಯಲೊತ್ರಿನ್ 49 ಇ.ಸಿ.ಯನ್ನು 1 ಮಿ.ಲೀ. ಅಥವಾ ಎಮಾಮೆಕ್ಟಿನ್ ಬೆಂಜೊಯೇಟ್ ಎಸ್.ಜಿ.ಯನ್ನು 0.5 ಮಿ. ಲೀ. ಅಥವಾ ಸ್ಪ್ತ್ರೈನೋಸ್ಯಾಡ್ 45 ಎಸ್.ಸಿ.ಯನ್ನು 0.2 ಮಿ.ಲೀ. ಅಥವಾ ಇಂಡಾಕ್ಸಿಕಾರ್ಬ್ 14.5 ಎಸ್.ಸಿಯನ್ನು 0.5 ಮಿ.ಲಿ ಅಥವಾ ಸ್ಪೆನೆಟ್ರಾಮ್ 11.7 ಎಸ್.ಸಿಯನ್ನು 0.5 ಮಿ.ಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸುಳಿಯಲ್ಲಿ ಬೀಳುವಂತೆ ಸಿಂಪರಿಸಬೇಕು. ಅಲ್ಲದೇ ಲದ್ದಿಹುಳುವಿನ ನಿಯಂತ್ರಣಕ್ಕಾಗಿ ರೈತ ಸಂಪರ್ಕ ಕೇಂದ್ರ, ಮುಂಡರಗಿ-ಡಂಬಳದಲ್ಲಿ ಸಹಾಯಧನದಲ್ಲಿ ಕ್ರಿಮಿನಾಶಕ ದೊರಕಲಿದ್ದು ರೈತರು ಪ್ರಯೋಜನ ಪಡೆಯಬೇಕೆಂದು ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ಕೋರಿದ್ದಾರೆ.
2ಎಕರೆ ಪ್ರದೇಶದಲ್ಲಿ 15 ಸಾವಿರ ರೂ. ಖರ್ಚು ಮಾಡಿ ಮಕ್ಕೆಜೋಳ ಬಿತ್ತನೆ ಮಾಡಿದ್ದು,ಲದ್ದಿಹುಳುವಿನ ಬಾಧೆಯಿಂದ ಬೆಳೆ ರಕ್ಷಿಸಲು ಕ್ರಿಮಿನಾಶಕ ಮತ್ತು ಆಳುಗಳಿಗಾಗಿ 5 ಸಾವಿರಗಳನ್ನು ಖರ್ಚು ಮಾಡಿದ್ದೇನೆ.ಆದರೂ ಕೂಡಾ ಲದ್ದಿಹುಳುಗಳು ನಿಯಂತ್ರಣಕ್ಕೆ ಬರುತ್ತಿಲ್ಲ.
•ಲಕ್ಷ್ಮಣ ತಗಡಿನಮನಿ, ಶೀರನಳ್ಳಿ ರೈತ