ಹು.ಬಾ. ವಡ್ಡಟ್ಟಿ.
ಮುಂಡರಗಿ: ಇಲ್ಲಿನ ಕೃಷಿ ಇಲಾಖೆ ಕಾರ್ಯಾಲಯದ ಪಕ್ಕದಲ್ಲಿ ಮತ್ತು ನೂತನ ಎಪಿಎಂಸಿ ರಸ್ತೆ ಬದಿ ಇಂದಿರಾ ಕ್ಯಾಂಟೀನ್ ಕಟ್ಟಡವು ಪೂರ್ಣಗೊಂಡು ಹಲವು ತಿಂಗಳು ಕಳೆದರೂ ಉದ್ಘಾಟನೆ ಭಾಗ್ಯದಿಂದ ವಂಚಿತವಾಗಿವೆ.
ಲಕ್ಷಾಂತರ ರೂಪಾಯಿ ಅನುದಾನ ಬಳಿಸಿ ಕಟ್ಟಿರುವ ಈ ಇಂದಿರಾ ಕ್ಯಾಂಟೀನ್ ಕಟ್ಟಡದ ಸುತ್ತಮುತ್ತ ಬರ್ಹಿದೆಸೆಯಿಂದ ಬಯಲು ಶೌಚಾಲಯವಾಗುವ ಮೊದಲು ಈ ಕಟ್ಟಡ ಉದ್ಘಾಟಿಸಬೇಕಾಗಿದೆ. ಈ ಇಂದಿರಾ ಕ್ಯಾಂಟೀನ್ ಉದ್ಘಾಟನೆಯಾದರೆ ಕಡಿಮೆ ಬೆಲೆಯ ತಿಂಡಿ-ಊಟ ಬಡವರ ಹೊಟ್ಟೆ ತುಂಬಿಸಲಿದೆ. ಉದ್ಘಾಟನೆಗಾಗಿ ಕಾದಿರುವ ಇಂದಿರಾ ಕ್ಯಾಂಟೀನ್ ಕಟ್ಟಡದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯಕ ಇತ್ತ ಗಮನ ಹರಿಸಿ ಆದಷ್ಟು ಬೇಗ ಉದ್ಘಾಟಿಸುವ ಕಾರ್ಯಾರಂಭಗೊಳಿಸಬೇಕಿದೆ.
ಈಗಿರುವ ಇಂದಿರಾ ಕ್ಯಾಂಟೀನ್ ಕಟ್ಟಡದ ಸುತ್ತಮುತ್ತಲೂ ತಹಶೀಲ್ದಾರ್ ಕಾರ್ಯಾಲಯ, ಪೊಲೀಸ್ ಠಾಣೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಕಾರ್ಯಾಲಯಗಳು, ಅಲ್ಲದೇ ನೂತನ ಎಪಿಎಂಸಿಯೂ ಇದೆ. ಈ ಕಾರ್ಯಾಲಯಗಳು ಮತ್ತು ಎಪಿಎಂಸಿಗೆ ಪ್ರತಿದಿನ ನೂರಾರು ಜನರು ಆಗಮಿಸುತ್ತಾರೆ. ಪಟ್ಟಣಕ್ಕೆ ಬರುವ ರೈತರು, ಸಾರ್ವಜನಿಕರು ಊಟ ಮಾಡಲು ಇಲ್ಲವೇ ತಿಂಡಿ ತಿನ್ನಲು ನೂರಾರು ರೂಪಾಯಿಗಳು ಖರ್ಚು ಮಾಡಬೇಕಾಗಿದೆ. ಅದೇ ಇಂದಿರಾ ಕ್ಯಾಂಟೀನ್‌ನಲ್ಲಿ ಕಡಿಮೆ ಬೆಲೆಯಲ್ಲಿ ಸಿಗುವ ಊಟ, ತಿಂಡಿ ಮಾಡಬಹುದಾಗಿದೆ.
ಆದ್ದರಿಂದ ಈ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು, ಈ ಇಂದಿರಾ ಕ್ಯಾಂಟೀನ್ ಉದ್ಘಾಟಿಸಲು ಮುಂದಾಗಬೇಕು. ಅಲ್ಲದೇ ಇಂದಿರಾ ಕ್ಯಾಂಟೀನ್ ಸುತ್ತಲೂ ಬಯಲು ಬರ್ಹಿದೆಸೆ ಆಗದಂತೆ ನೋಡಿಕೊಳ್ಳಲು ಪುರಸಭೆಯವರು ಕಟ್ಟಡಕ್ಕೆ ಕಾವಲುಗಾರರನ್ನು ನೇಮಿಸಬೇಕು. ಬಡವರು, ರೈತರು, ಹಳ್ಳಿಗಳಿಂದ ಬರುವ ನಾಗರಿಕರಿಗೆ ಶೀಘ್ರ ಇಂದಿರಾ ಕ್ಯಾಂಟೀನ್ ಉದ್ಘಾಟನೆಯಾಗಿ ಉಪಾಹಾರ ಮತ್ತು ಊಟ ಸಿಗುವಂತೆ ಆಗಲಿ.
ಇಂದಿರಾ ಕ್ಯಾಂಟೀನ್ ಕಟ್ಟಡ ಕಾಮಗಾರಿ ಪೂರ್ಣವಾಗಿ ಕೆಲ ತಿಂಗಳು ಗತಿಸಿವೆ. ಆದರೆ ಇನ್ನೂವರೆಗೂ ಈ ಕಟ್ಟಡದ ಉದ್ಘಾಟನೆಯಾಗಿಲ್ಲ. ಇಂದಿರಾ ಕ್ಯಾಂಟೀನ್ ಉದ್ಘಾಟನೆಯಾದರೆ ಪಟ್ಟಣಕ್ಕೆ ಬರುವ ರೈತರು, ಬಡವರಿಗೆ ಅನುಕೂಲವಾಗಲಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆಗೆ ಗಮನ ಹರಿಸಿ ಉದ್ಘಾಟಿಸಬೇಕು.
•
ನಬಿಸಾಬ ಕೆಲೂರು,
ಸ್ಥಳೀಯ ನಿವಾಸಿ
ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರರನ್ನು ಕರೆಯಿಸಿ ಮಾತುಕತೆ ನಡೆಸಿದ್ದೇವೆ. ಕಟ್ಟಡದೊಳಗೆ ಕೆಲ ಕೆಲಸಗಳು ಬಾಕಿ ಇದ್ದು, ಗುತ್ತಿಗೆದಾರರು ಪೂರ್ಣಗೊಳಿಸಿ ಕಟ್ಟಡವನ್ನು ಪುರಸಭೆಯ ಸುಪರ್ದಿಗೆ ಕೊಟ್ಟರೇ ಮಾತ್ರ ಕಟ್ಟಡದ ಸುತ್ತಲಿನ ಸ್ವಚ್ಛತೆ ಮತ್ತು ಉದ್ಘಾಟನೆಗೆ ಅಣಿಗೊಳಿಸಬಹುದು.
•
ಸತೀಶ್ ಚವಡಿ,
ಪುರಸಭೆ ಮುಖ್ಯಾಧಿಕಾರಿ