Advertisement

ಮನೆ ಸುತ್ತ ಚರಂಡಿ ನೀರು: ಊರ ತುಂಬಾ ದುರ್ನಾತ

03:30 PM Jan 05, 2020 | Naveen |

ಮುಂಡರಗಿ: ತಾಲೂಕಿನ ಕಲಕೇರಿ ಗ್ರಾಮದ ಹನುಮಂತ ದೇವಸ್ಥಾನ ಹಿಂಬದಿಯ ತಗ್ಗಿನ ಹೊಂಡದಲ್ಲಿ ಚರಂಡಿ ನೀರು ಹರಿದು ಬಂದು ನಿಂತಿರುವುದರಿಂದಾಗಿ ಸಾಂಕ್ರಾಮಿಕ ರೋಗಗಳ ತಾಣವಾಗಿ ಮಾರ್ಪಟ್ಟಿದೆ. ಸುತ್ತಲಿನ ಮನೆಯಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

Advertisement

ಮನೆ ಸುತ್ತಲೂ ಚರಂಡಿ ನೀರು ನಿಂತಿರುವುದರಿಂದಾಗಿ ಮನೆ ಗೋಡೆಗಳಿಗೆ ತೇವಾಂಶ ಹೆಚ್ಚಾಗಿ ಬೀಳುವ ಸ್ಥಿತಿ ತಲುಪಿವೆ. ಅಲ್ಲದೇ ಮನೆಯ ಗೋಡೆಗಳು ತೇವಾಂಶದಿಂದ ಯಾವಾಗ ಬೀಳುತ್ತಯೋ ಎನ್ನುವ ಆತಂಕದಲ್ಲಿ ಸ್ಥಳೀಯರು ದಿನ ದೂಡುವಂತಾಗಿದೆ. ಮನೆ ಸುತ್ತಲೂ ನೀರು ಇರುವುದರ ಜೊತೆಗೆ ರಸ್ತೆಯಲ್ಲೂ ಚರಂಡಿ ನೀರು ಹರಿಯುತ್ತದೆ. ಇದರಿಂದಾಗಿ ಮನೆಯವರು ರಸ್ತೆಯಲ್ಲಿ ಓಡಾಡಬೇಕೆಂದರೆ ಚರಂಡಿ ನೀರು ದಾಟಿಕೊಂಡೆ ಹೋಗಬೇಕಾಗುತ್ತದೆ.

ಮಕ್ಕಳು, ವಯೋವೃದ್ದರು ಚರಂಡಿಯ ನೀರಿನಲ್ಲಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಎಂಟು ಮನೆಗಳ ಚರಂಡಿಯ ನೀರಿನಿಂದಾಗಿ ಸುತ್ತಮುತ್ತಲಿನ ವಾತಾವರಣ ಕಲುಷಿತವಾಗಿದೆ. ಚರಂಡಿ ನೀರು ದುರ್ನಾತ ಬೀರುತ್ತಿರುವುದರಿಂದಾಗಿ ಮೂಗು ಮುಚ್ಚಿಕೊಂಡು ಜನರು ಓಡಾಡಬೇಕಾಗಿದೆ.

ಸುತ್ತಲಿನ ಜನ ಯಮಯಾತನೆ ಅನುಭವಿಸುವಂತಾಗಿದೆ. ಮೇಲ್ಭಾಗದಿಂದ ಹರಿದು ಬರುವ ಚರಂಡಿ ನೀರು ಸರಾಗವಾಗಿ ಗ್ರಾಮದ ಹೊರಗೆ ಹರಿದು ಹೋಗಲು ಉತ್ತಮವಾದ ಚರಂಡಿ ನಿರ್ಮಾಣ ಮಾಡಬೇಕಿದೆ. ನೀರು ನಿಲ್ಲದಂತೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮುಂದಾಗಬೇಕಿದೆ.

ಮನೆಯ ಸುತ್ತಲೂ ಗಟಾರದ ನೀರು ನಿಂತು ಮನೆಯಲ್ಲಿ ಇರಲು ಆಗುತ್ತಿಲ್ಲ. ಗಟಾರ ನೀರಿನ ಕೆಟ್ಟ ವಾಸನೆಯಿಂದ ಮನೆಯಲ್ಲಿ ಕುಳಿತುಕೊಳ್ಳಲಾಗುತ್ತಿಲ್ಲ. ಗಟಾರದ ನೀರಿನಿಂದ ಮನೆಯ ಗೋಡೆಗಳು ಜವುಳು ಅಡರಿ ಯಾವಾಗ ಬೀಳುತ್ತವೆ ಎನ್ನುವ ಭಯ ಕಾಡುತ್ತಿದೆ. ಗ್ರಾಪಂನವರಿಗೆ ಮನವಿ ಸಲ್ಲಿಸಿ ಎರಡು ತಿಂಗಳು ಗತಿಸಿದರೂ ನಮ್ಮ ಕಡೆಗೆ ಕಣ್ಣೆತ್ತಿ ನೋಡದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಹಿಗೇಯೇ ಚರಂಡಿ ನೀರಿನ ಸಮಸ್ಯೆ ಬಗೆಹರಿಸದೇ ನಿರ್ಲಕ್ಷ್ಯ ಮಾಡಿದರೆ ದಯಾಮರಣ ಕೋರಿ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಮನವಿಯಲ್ಲಿ ಆಗ್ರಹಿಸಿದ್ದೇನೆ .
ರಶೀದ್‌ಸಾಬ್‌ ಕರೀಮಸಾಬ್‌ ಮೋರಗೇರಿ,
ಗ್ರಾಮಸ್ಥ

Advertisement

ಕಲಕೇರಿ ಗ್ರಾಮದ ಸಮಸ್ಯೆಯು ಗಮನಕ್ಕೆ ಬಂದಿದ್ದು, ಚರಂಡಿಯ ನೀರು ತಗ್ಗಿನಲ್ಲಿ ನಿಲ್ಲದಂತೆ ನೀರು ಗ್ರಾಮದ ಹೊರಕ್ಕೆ ಹೋಗುವಂತೆ ಶಾಶ್ವತ ಪರಿಹಾರಕ್ಕಾಗಿ 14ನೇ ಹಣಕಾಸು ಯೋಜನೆಯಲ್ಲಿ ಕ್ರಿಯಾಯೋಜನೆ ರೂಪಿಸಿ ಯೋಜನೆಯನ್ನು ಒಂದು ತಿಂಗಳ ಒಳಗಾಗಿ ಜಾರಿಗೊಳಿಸಲಾಗುವುದು.
ಎಸ್‌.ಎಸ್‌. ಕಲ್ಮನಿ,
ತಾಪಂ ಇಒ

ಮನವಿಗೆ ಸ್ಪಂದಿಸದ ಗ್ರಾಪಂ
ಚರಂಡಿ ನೀರು ಮನೆ ಸುತ್ತಲೂ ನಿಂತು ಮನೆಯವರು ಅನಾರೋಗ್ಯಕ್ಕೆ ಈಡಾಗುತ್ತಿರುವ ಬಗ್ಗೆ ಗ್ರಾಮ ಪಂಚಾಯಿತಿಗೆ ರಶೀದ್‌ ಸಾಬ್‌ ಕರೀಮಸಾಬ್‌ ಮೋರಗೇರಿಯವರು ಮನವಿ ಸಲ್ಲಿಸಿದ್ದಾರೆ. ಆದರೆ ಗ್ರಾಪಂ ಅಭಿವೃದ್ಧಿ ಅಧಿಕಾರಿಯು ಎರಡು ತಿಂಗಳು ಗತಿಸಿದರೂ ಸಮಸ್ಯೆ ಬಗ್ಗೆ ಸ್ಪಂದಿಸಿಲ್ಲ. ಇದರಿಂದ ನೊಂದುಕೊಂಡಿರುವ ರಶೀದ್‌ಸಾಬ್‌ ಮೋರಗೇರಿ ಕುಟುಂಬವು ನೆಮ್ಮದಿಯಾಗಿ ಜೀವಿಸಬೇಕೆಂದರೆ ನಮ್ಮ ಮಾನವ ಹಕ್ಕುಗಳ ಉಲ್ಲಂಘನೆಯು ಆಗುತ್ತಿದೆ. ಆದ್ದರಿಂದ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಮನವಿ ಮಾಡಿಕೊಳ್ಳುವ ಅನಿವಾರ್ಯತೆಯು ಕುರಿತು ಅಳಲು ತೋಡಿಕೊಂಡಿದ್ದಾರೆ.

„ಹು.ಬಾ. ವಡ್ಡಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next