Advertisement

ಅಭಿವೃದ್ಧಿಯತ್ತ ಮುಂಡಾಜೆಯ ರುದ್ರಭೂಮಿ

03:11 PM Feb 22, 2017 | Team Udayavani |

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮ ದಿನದಿಂದ ದಿನಕ್ಕೆ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ. ಗಾಂಧೀ ಗ್ರಾಮ ಪುರಸ್ಕಾರವನ್ನು ಪಡೆದ ಗ್ರಾ. ಪಂ. ಮುಂಡಾಜೆ. ಆದರೆ ಮುಂಡಾಜೆಯ ರುದ್ರಭೂಮಿ ತೀರಾ ನಿರ್ಲಕ್ಷ್ಯಕ್ಕೊಳಗಾಗಿತ್ತು. ಇದೀಗ ಗ್ರಾ.ಪಂ, ವಿವಿಧ ಸಂಘ ಸಂಸ್ಥೆಗಳು ಮತ್ತು ಊರಿನ ಜನರ ಸಹಕಾರದೊಂದಿಗೆ ರುದ್ರಭೂಮಿಗೆ ಕಾಯಕಲ್ಪ ನೀಡಲಾಗುತ್ತಿದೆ.

Advertisement

ಮೇಲ್ಭಾಗದ ತಗಡು ಶೀಟು ತೂತು ಬಿದ್ದು  ಮಳೆಗಾಲದಲ್ಲಿ ಸುಡುತ್ತಿರುವ ಹೆಣದ ಮೇಲೆ ನೀರು ತೊಟ್ಟಿಕ್ಕುತ್ತಿತ್ತು. ಅಲ್ಲಲ್ಲಿ ಅರ್ಧ ಸುಟ್ಟ ಕಟ್ಟಿಗೆ ತುಂಡು, ಪ್ಲಾಸ್ಟಿಕ್‌, ಪೇಪರ್‌, ಬಟ್ಟೆ ಚೂರುಗಳು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿತ್ತು. ಬಾಗಿಲಿಲ್ಲದ ಕೊಠಡಿ, ನೀರು ಬಾರದ ನಳ್ಳಿ, ಕುಳಿತುಕೊಳ್ಳಲಾಗದ ವಠಾರ ಮೊದಲಾದ ದುರವಸ್ಥೆಯಿಂದ ಕೂಡಿದ್ದ ರುದ್ರಭೂಮಿಯ ಅಭಿವೃದ್ಧಿಗಾಗಿ ಸಮಿತಿ ರಚಿಸಲಾಯಿತು. ಮುಂಡಾಜೆ ಗ್ರಾ. ಪಂ., ಉದ್ಯೋಗ ಖಾತರಿ ಯೋಜನೆ, ಮುಂಡಾಜೆ ಸಹಕಾರಿ ಸಂಘ, ವಿವಿಧ ಸಂಘ ಸಂಸ್ಥೆಗಳು, ಊರವರ ಸಹಕಾರದೊಂದಿಗೆ ರುದ್ರಭೂಮಿಯ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯಾಭಿವೃದ್ಧಿ ವತಿಯಿಂದ ಸಿಲಿಕಾನ್‌ ಛೇಂಬರ್‌ ಅಳವಡಿಸಿ ತ್ವರಿತ ಶವದಹನಕ್ಕೆ ಅನುಕೂಲತೆ ಕಲ್ಪಿಸಲಾಗಿದೆ. ರುದ್ರಭೂಮಿಯ ಪರಿಸರದಲ್ಲಿ ಸುಮಾರು 400 ಅಡಿಕೆ ಗಿಡ, 30ಕ್ಕೂ ಹೆಚ್ಚು ತೆಂಗಿನ ಗಿಡಗಳನ್ನು ನಾಟಿ ಮಾಡಲಾಗಿದೆ. ನಾದುರಸ್ತಿಯಲ್ಲಿದ್ದ ರಸ್ತೆಗೆ ಕಾಂಕ್ರೀಟು ಹಾಕಲಾಗಿದೆ.

ಆಗಬೇಕಾಗಿರುವುದು
ರುದ್ರಭೂಮಿಯ ಪ್ರವೇಶಕ್ಕೆ ಗೇಟಿನ ವ್ಯವಸ್ಥೆ, ಆಫೀಸು, ಸ್ನಾನಗೃಹ, ಶೌಚಾಲಯ, ಕಟ್ಟಿಗೆ ಸಂಗ್ರಹಕ್ಕೆ ಕೊಠಡಿ, ಎದುರು ಬದಿಯಿಂದ ಆವರಣ ಗೋಡೆ ನಿರ್ಮಾಣ, ನೆಲಕ್ಕೆ ಇಂಟರ್‌ಲಾಕ್‌ ಅಳವಡಿಕೆ, ದಾರಿದೀಪದ ವ್ಯವಸ್ಥೆ, ಹರಿಶ್ಚಂದ್ರನ ಪ್ರತಿಕೃತಿ, ರುದ್ರಮೂರ್ತಿಯ ಪ್ರತಿಮೆ ಸ್ಥಾಪನೆ, ಖಾಲಿ ಜಾಗದಲ್ಲಿ ಉದ್ಯಾನವನ್ನು ಮಾಡುವ ಇರಾದೆಯೂ ಇದೆ. ವಿದ್ಯುತ್‌, ನಳ್ಳಿನೀರು, ಕೊಳವೆಬಾವಿ, ಕುಳಿತುಕೊಳ್ಳಲು ವಿಶ್ರಾಂತಿ ತಾಣ, ಕೊಠಡಿ, ಹೆಣವನ್ನು ಸ್ನಾನ ಮಾಡಿಸಲು ವ್ಯವಸ್ಥೆಯನ್ನು ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. ಮೇ ತಿಂಗಳ ಕೊನೆಗೆ ಲೋಕಾರ್ಪಣೆಗೆ ಸಿದ್ಧವಾಗಲಿದೆ.

ಸ್ವತ್ಛತೆಗೆ ಆದ್ಯತೆ
ಈ ಹಿಂದೆ ಶಿಥಿಲಾವಸ್ಥೆಯಲ್ಲಿದ್ದುದರಿಂದ ಮಳೆಗಾಲದಲ್ಲಿ ಇಲ್ಲಿ ಶವ ದಹನ ಮಾಡಲು ಕಷ್ಟವಾಗುತ್ತಿತ್ತು. ಆದ್ದರಿಂದ ಗ್ರಾ.ಪಂ.ನಲ್ಲಿ ಸಭೆ ನಡೆಸಿ ಎನ್‌ಆರ್‌ಇಜಿ, ಗ್ರಾ.ಪಂ., ಸಂಘ ಸಂಸ್ಥೆಗಳು, ಊರವರ ಸಹಕಾರದಲ್ಲಿ ರುದ್ರಭೂಮಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸ್ವತ್ಛತೆಗೆ ಹೆಚ್ಚಿನ ಆದ್ಯತೆ ಯನ್ನು ನೀಡಲಾಗುವುದು.  ಶಾಸಕರು ಹಾಗೂ ಜಿ.ಪಂ.ನಿಂದ ಅನುದಾನ ಮಂಜೂರು ಮಾಡುವಂತೆ ವಿನಂತಿಸಲಾಗುವುದು.

– ರಾಮಣ್ಣ ಶೆಟ್ಟಿ ಅಗರಿ, ಅಧ್ಯಕ್ಷರು, ರುದ್ರಭೂಮಿ ಅಭಿವೃದ್ಧಿ ಸಮಿತಿ

5 ಲ.ರೂ. ಅನುದಾನ ಬೇಕಿದೆ
ಮಾದರಿ ರುದ್ರಭೂಮಿಯ ನೀಲಿ ನಕಾಶೆ ಯೋಜನೆ 20 ಲ.ರೂ.ಗಳಾಗಿದ್ದು ಈಗಾಗಲೇ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ 4.25 ಲ.ರೂ. ವೆಚ್ಚದ ಶ್ಮಶಾನ ಕಟ್ಟಡ, 6 ಲ.ರೂ. ವೆಚ್ಚದಲ್ಲಿ ರಸ್ತೆಗೆ ಕಾಂಕ್ರೀಟ್‌ ಕಾಮಗಾರಿ, ಭೂ ಸಮತಟ್ಟು ಮಾಡಲಾಗಿದೆ. 1.50 ಲ.ರೂ. ವೆಚ್ಚದಲ್ಲಿ ಶವ ದಹನದ ಬಗ್ಗೆ ಯಂತ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯ ಅಭಿವೃದ್ಧಿಯಿಂದ ನೀಡಿದ್ದಾರೆ. ತಾ.ಪಂ.ನಿಂದಲೂ ಅನುದಾನ ಲಭಿಸಿದೆ. ಇನ್ನೂ ಅನೇಕ ಕೆಲಸಗಳು ಬಾಕಿಯಿದ್ದು ಸುಮಾರು 5 ಲ.ರೂ. ಅನುದಾನ ಬೇಕಾಗಿದೆ. ಈ ಬಗ್ಗೆ ದೇಣಿಗೆಯನ್ನು ಸಂಗ್ರಹಿಸಿ ಅಭಿವೃದ್ಧಿಪಡಿಸಲು ಗ್ರಾ. ಪಂ. ಮತ್ತು ರುದ್ರಭೂಮಿ ಸಮಿತಿ ಸಭೆಯಲ್ಲಿ ನಿರ್ಣಯಿಸಿದೆ.

– ಸಂಜೀವ ನಾಯ್ಕ, ಅಭಿವೃದ್ಧಿ ಅಧಿಕಾರಿ, ಗ್ರಾ. ಪಂ. ಮುಂಡಾಜೆ

Advertisement

– ಗುರು ಮುಂಡಾಜೆ

Advertisement

Udayavani is now on Telegram. Click here to join our channel and stay updated with the latest news.

Next