ಪುನೀತ್ ರಾಜಕುಮಾರ್ ಅವರ “ರಾಜ್‌ಕುಮಾರ’ ಇಂದು ಬಿಡುಗಡೆಯಾಗುತ್ತಿದೆ. ಮುಂದಿನ ತಿಂಗಳು ದರ್ಶನ್ “ಚಕ್ರವರ್ತಿ’, ಗಣೇಶ್ “ಪಟಾಕಿ’, ಶಿವರಾಜಕುಮಾರ್ ಅವರ “ಬಂಗಾರ ಸನ್ ಆಫ್ ಬಂಗಾರದ ಮನುಷ್ಯ’, ಮೇನಲ್ಲಿ “ಮಾಸ್ತಿಗುಡಿ’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಅಲ್ಲಿಗೆ ಏಪ್ರಿಲ್‌ನಿಂದ ಸಾಲು ಸಾಲು ಸ್ಟಾರ್ ಸಿನಿಮಾಗಳು ಬಿಡುಗಡೆಯಾಗುವ ಮೂಲಕ ಅಭಿಮಾನಿಗಳಿಗೆ ಸಿನಿಹಬ್ಬವಾಗಲಿದೆ.
ಇಲ್ಲಿ ಒಂದಂಶವನ್ನು ಸೂಕ್ಷ್ಮವಾಗಿ ಗಮನಿಸಬೇಕು. ಏಪ್ರಿಲ್‌ನಿಂದ ಆರಂಭವಾಗುವ ಸ್ಟಾರ್‌ಗಳ ಸಿನಿಜಾತ್ರೆ ಮೇ ಹೊತ್ತಿಗೆ ಬಹುತೇಕ ಮುಗಿದೇ ಹೋಗುತ್ತದೆ. ಪುನೀತ್, ದರ್ಶನ್, ಶಿವರಾಜಕುಮಾರ್, ಗಣೇಶ್, ವಿಜಯ್ ಹೀಗೆ ಎಲ್ಲಾ ಸ್ಟಾರ್‌ಗಳ ಸಿನಿಮಾಗಳು ಈ ಎರಡು ತಿಂಗಳಲ್ಲಿ ಬಂದು ಹೋಗುತ್ತದೆ. ಉಪೇಂದ್ರ ಅವರ “ಉಪೇಂದ್ರ ಮತ್ತೆ ಬಾ’ ಚಿತ್ರ ಬಿಡುಗಡೆಯಾಗೋದು ಇನ್ನೂ ತಡವಿದೆ. ಹಾಗಾಗಿ, ಎರಡು ತಿಂಗಳ ನಂತರ ದೊಡ್ಡದೊಂದು ಗ್ಯಾಪ್ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಪುನೀತ್, ದರ್ಶನ್, ಶಿವರಾಜಕುಮಾರ್, ಗಣೇಶ್ ಸೇರಿದಂತೆ ಸ್ಟಾರ್‌ಗಳ ಸಿನಿಮಾ ಬಿಡುಗಡೆಯಾಗಿ ಬಿಟ್ಟರೆ ಮತ್ತೆ ಅವರ ಸಿನಿಮಾ ಬರಲು ಸಾಕಷ್ಟು ಸಮಯ ಕಾಯಲೇಬೇಕು. ಸುದೀಪ್ ಅವರ “ದಿ ವಿಲನ್’ ಹಾಗೂ ಯಶ್ ಅವರ “ಕೆಜಿಎಫ್’ ಈಗಷ್ಟೇ ಶೂಟಿಂಗ್‌ಗೆ ಅಣಿಯಾಗುತ್ತಿದೆ. ಪುನೀತ್ “ಅಂಜನಿ ಪುತ್ರ’ ಬರಲು ಇನ್ನೂ ತಡವಿದೆ. ಆಗಸ್ಟ್ ಹೊತ್ತಿಗೆ ಶಿವರಾಜಕುಮಾರ್ ಅವರ “ಟಗರು’ ಹಾಗೂ ಗಣೇಶ್ “ಮುಗುಳುನಗೆ’ ಬಿಡುಗಡೆಯಾಗಬಹುದು. ಆದರೆ, ಮೇನಿಂದ ಆಗಸ್ಟ್‌ವರೆಗೂ ಸ್ಟಾರ್ ಚಿತ್ರಗಳ ಬಿಡುಗಡೆಯಲ್ಲಿ ಒಂದು ದೊಡ್ಡ ಗ್ಯಾಪ್ ಸೃಷ್ಟಿಯಾಗಲಿದೆ.
ಒಂದು ಕಡೆ ಸ್ಟಾರ್ ಸಿನಿಮಾಗಳ ಬಿಡುಗಡೆ ಆರಂಭವಾಗುತ್ತಿದ್ದಂತೆ ಮತ್ತೂಂದು ಕಡೆ ಕ್ರಿಕೆಟ್ ಕೂಡಾ ಆರಂಭವಾಗುತ್ತದೆ. ಐಪಿಎಲ್ ಕ್ರಿಕೆಟ್ ಟೂರ್ನಿ ಏಪ್ರಿಲ್ 5 ರಿಂದ ಆರಂಭವಾಗಿ, ಮೇ 21ರವರೆಗೆ ನಡೆಯಲಿದೆ. ಹಾಗಾಗಿ, ಸ್ಟಾರ್ ಸಿನಿಮಾಗಳ ಜೊತೆಗೆ ಕ್ರಿಕೆಟ್ ನೋಡುವ ಅವಕಾಶ. ಸ್ಟಾರ್ ಸಿನಿಮಾಗಳೇನೋ ತಮ್ಮ ಅಭಿಮಾನಿ ವರ್ಗವನ್ನು ನಂಬಿಕೊಂಡು ಐಪಿಎಲ್ ಮಧ್ಯೆಯೇ ಬಿಡುಗಡೆಯಾಗುತ್ತಿವೆ. ಅದಕ್ಕೆ ಕಾರಣ ಏಪ್ರಿಲ್ ರಜಾ. ಕ್ರಿಕೆಟ್ ಇದ್ದರೂ ಫ್ಯಾಮಿಲಿ ಸಮೇತ ಬಂದು ತಮ್ಮ ಸಿನಿಮಾ ನೋಡಬಹುದು ಎಂಬ ವಿಶ್ವಾಸದೊಂದಿಗೆ ಸ್ಟಾರ್‌ಗಳ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಏಪ್ರಿಲ್ ಬಿಟ್ಟರೆ ಮೇನಲ್ಲಿ ರಜಾ ಮುಗಿದು ಮಕ್ಕಳು ಶಾಲೆಯತ್ತ ಧಾವಿಸಬೇಕಾಗುತ್ತದೆ. ಮೇಯೊಳಗೆ ರಿಲೀಸ್ ಮಾಡದಿದ್ದರೆ ಮತ್ತೆ ಜೂನ್ 1 ರಿಂದ 24ರವರೆಗೆ ಮತ್ತೂಂದು ಕ್ರಿಕೆಟ್ ಹಬ್ಬ. ಅದು ಟಿ20 ಕ್ರಿಕೆಟ್. ಹಾಗಾಗಿ, ಬಹುತೇಕ ಸ್ಟಾರ್ ಸಿನಿಮಾಗಳು ಏಪ್ರಿಲ್, ಮೇನಲ್ಲಿ ಬರಲಿವೆ. ಇದರಿಂದ ಸಮಸ್ಯೆ ಎದುರಾಗಿರೋದು ಹೊಸಬರಿಗೆ. ಇತ್ತ ಕಡೆ ಸ್ಟಾರ್ ಸಿನಿಮಾ, ಅತ್ತ ಕಡೆ ಕ್ರಿಕೆಟ್. ಇವೆರಡರ ಎದುರು ಬಂದರೆ ಹೊಸಬರಿಗೆ ತೊಂದರೆ ತಪ್ಪಿದ್ದಲ್ಲ. ಹಾಗಾಗಿಯೇ ಹೊಸಬರು ಕೂಡಾ ಮೇಯಿಂದ ಜೂನ್ ಒಳಗೆ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಬೇಕು.
ಹಾಗೆ ನೋಡಿದರೆ, ಸ್ಟಾರ್‌ಗಳ ಸಿನಿಮಾವಿಲ್ಲದೇ ಖಾಲಿ ಖಾಲಿಯಾಗಿರುವ ಚಿತ್ರರಂಗಕ್ಕೆ ಒಂದೆರಡು ತಿಂಗಳು ಆಕ್ಸಿಜನ್ ನೀಡಬೇಕಾಗಿರುವುದು ಕೂಡಾ ಹೊಸಬರೇ. ಒಂದಷ್ಟು ಹೊಸಬರ ಸಿನಿಮಾಗಳು ನಿರೀಕ್ಷೆ ಹುಟ್ಟಿಸಿದ್ದು, ಈ ಸಿನಿಮಾಗಳು ಮತ್ತೂಮ್ಮೆ ಹೊಸಬರ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂಬ ನಿರೀಕ್ಷೆ ಇದೆ. ಆಗಾಗ ಹೊಸಬರು ಕೂಡಾ ಹವಾ ಎಬ್ಬಿಸುತ್ತಾರೆ. ಸದ್ದಿಲ್ಲದೇ ಬಿಡುಗಡೆಯಾದ ಅದೆಷ್ಟೋ ಹೊಸಬರ ಸಿನಿಮಾಗಳು ಗೆದ್ದು ಸ್ಟಾರ್‌ಗಳು ಕೂಡಾ ಹೊಸಬರತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಈ ಬಾರಿ ಹೊಸಬರಿಂದ ಅಂತಹ ಜಾದು ಆಗುತ್ತಾ, ಸ್ಟಾರ್‌ಗಳ ಸಿನಿಮಾವಿಲ್ಲದ ಜಾಗವನ್ನು ತುಂಬಿಸಿ ಪ್ರೇಕ್ಷಕರಿಗೆ ಮಜಾ ಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕು.
– ರವಿಪ್ರಕಾಶ್ ರೈ