Advertisement

ನಗರದಲ್ಲಿ ವಿವಿಧ ಕಾಮಗಾರಿಗಳ ಅಬ್ಬರ; ಸಂಚಾರ ದುಸ್ತರ

11:10 PM Feb 20, 2021 | Team Udayavani |

ಮಹಾನಗರ: ಒಂದೆಡೆ ಸ್ಮಾರ್ಟ್‌ಸಿಟಿ; ಇನ್ನೊಂದೆಡೆ ಜಲಸಿರಿ ಯೋಜನೆ, ಮತ್ತೂಂದೆಡೆ ಮಹಾನಗರ ಪಾಲಿಕೆ ಸಾಮಾನ್ಯ ಕಾಮಗಾರಿಗಳು… ಹೀಗೆ ನಗರದೆಲ್ಲೆಡೆ ಒಂದಲ್ಲ ಒಂದು ಯೋಜನೆ ಹೆಸರಿನಲ್ಲಿ ರಸ್ತೆಗಳನ್ನು ಅಗೆದು ಹಾಕಲಾಗಿದ್ದು, ಅಲ್ಲಲ್ಲಿ ಅರ್ಧಕ್ಕೆ ನಿಂತಿರುವ, ಹಲವೆಡೆ ನಿಧಾನಗತಿಯಲ್ಲಿ ಸಾಗಿರುವ ಕಾಮಗಾರಿಯು ಜನಸಾಮಾ ನ್ಯರು-ವಾಹನ ಸವಾರರಿಗೆ ನಾನಾ ರೀತಿಯ ಕಿರಿಕಿರಿಯುಂಟು ಮಾಡುತ್ತಿದೆ.

Advertisement

ಮಂಗಳೂರು ನಗರ ಸ್ಮಾರ್ಟ್‌ ಸಿಟಿಯಾಗಿ ರೂಪುಗೊಳ್ಳುತ್ತಿದ್ದು, ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳುವ ವೇಳೆ ಜನರಿಗೆ ಅನನುಕೂಲ ಉಂಟಾಗುವುದು ಸಹಜ. ಆದರೆ ಹಲವು ಯೋಜನೆಗಳು ಏಕಕಾಲದಲ್ಲಿ ಪ್ರಾರಂಭಗೊಂಡು ಉದ್ದೇಶಿತ ಅವಧಿಗೆ ಪೂರ್ಣಗೊಳ್ಳದೆ ಹೋದಾಗ ಅಂಥ ಕಾಮಗಾರಿಗಳು ಜನರ ಅಸಮಾಧಾನಕ್ಕೆ ಕಾರಣವಾಗುತ್ತವೆ. ವಾಸ್ತವದಲ್ಲಿ ನಗರದ ರಸ್ತೆಗಳಲ್ಲಿ ಮೊದಲೇ ವಾಹನ ಪಾರ್ಕಿಂಗ್‌ಗೆ ಸ್ಥಳಾವಕಾಶದ ಕೊರತೆ ಎದುರಾಗಿದ್ದು, ಇದೀಗ ಕಾಮಗಾರಿ ಕಾರಣದಿಂದಾಗಿ ಹಲವು ಕಡೆ ವಾಹನ ನಿಲುಗಡೆಗೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕಾಪಿಕಾಡ್‌, ಲಾಲ್‌ಬಾಗ್‌, ಬಿಜೈ, ಲೇಡಿಹಿಲ್‌ ಪ್ರದೇಶದಲ್ಲಿ ಹೆಚ್ಚಾಗಿ ಗೈಲ್‌ ಪೈಪ್‌ಲೈನ್‌ ಕಾಮಗಾರಿ ನಡೆಯುತ್ತಿದೆ. ಇದಕ್ಕೆಂದು ಫುಟ್‌ಪಾತ್‌, ಹೊಸದಾಗಿ ಕಾಂಕ್ರೀಟ್‌ ಹಾಕಿರುವ ರಸ್ತೆಗಳನ್ನೂ ಅಗೆಯಲಾಗುತ್ತಿದೆ. ಕಾಮಗಾರಿ ಉದ್ದೇಶ ದಿಂದ ಕೆಲವು ಕಡೆಗಳಲ್ಲಿ ಅಪಾಯಕಾರಿ ಗುಂಡಿ ಕೂಡ ನಿರ್ಮಾಣವಾಗಿದ್ದು, ರಾತ್ರಿ ವೇಳೆ ವಾಹನ ಸವಾರರಿಗೆ ಅಪಾಯವನ್ನೂ ಆಹ್ವಾನಿಸುವಂತಿವೆ.

ಸದಾ ಜನನಿಬಿಡ ಪ್ರದೇಶವಾದ ಕಂಕನಾಡಿ-ಮಂಗಳಾದೇವಿ ರಸ್ತೆಯಲ್ಲಿ ಕಳೆದ ಅನೇಕ ದಿನಗಳಿಂದ ಕ್ವಿಮಿಪ್‌ ಜಲಸಿರಿ ಕಾಮಗಾರಿ ನಡೆಯುತ್ತಿದೆ. ರಸ್ತೆ ಬಳಿಯ ಫುಟ್‌ಪಾತ್‌, ರಸ್ತೆಯ ಕೆಲವು ಭಾಗ ಅಗೆಯಲಾಗಿದ್ದು, ಈ ಪ್ರದೇಶದಲ್ಲಿ ಟ್ರಾಫಿಕ್‌ ಕಿರಿ ಕಿರಿ ತಪ್ಪಿದ್ದಲ್ಲ. ಈ ನಡುವೆ ಮಂಗಳೂರು ಪಾಲಿಕೆ ವತಿಯಿಂದ ಅಲ್ಲಲ್ಲಿ ಒಳಚರಂಡಿ, ಫುಟ್‌ಪಾತ್‌ ಸಹಿತ ಅನೇಕ ಕಾಮಗಾರಿ ನಡೆಯುತ್ತಿವೆೆ. ಇದರ ಜತೆಗೆ ಸ್ಮಾರ್ಟ್‌ಸಿಟಿ ಕಾಮಗಾರಿ ಅರ್ಧದಲ್ಲೇ ನಿಂತಿದ್ದು, ಮತ್ತೂಂದು ಅವಾಂತರಕ್ಕೆ ಕಾರಣವಾಗಿದೆ.

Advertisement

ಹೆಸರಿಗಷ್ಟೇ ಸೀಮಿತಗೊಂಡ ಸಭೆ!
ಮಹಾನಗರ ಪಾಲಿಕೆ ವ್ಯಾಪ್ತಿಯೊಳಗೆ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಸಮರ್ಪಕ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪಾಲಿಕೆಯಲ್ಲಿ ಇತ್ತೀಚೆಗೆ ಸಭೆ ನಡೆದಿತ್ತು. ಎಡಿಬಿ, ಅಮೃತ್‌ ಯೋಜನೆಯಡಿ, ಸ್ಮಾರ್ಟ್‌ಸಿಟಿ ಯೋಜನೆಯಡಿ ಅನುಷ್ಠಾನವಾಗುತ್ತಿರುವ ರಸ್ತೆ ಅಭಿವೃದ್ಧಿ, ನೀರು ಸರಬರಾಜು, ಒಳಚರಂಡಿ ಕಾಮಗಾರಿಗಳಿಗೆ, ಗೈಲ್‌ ಸಂಸ್ಥೆಗಳಿಂದ ನಗರದ ವಿವಿಧ ಕಡೆಗಳಲ್ಲಿ ರಸ್ತೆ ಅಗೆಯಲಾಗುತ್ತಿದೆ. ನಗರದಲ್ಲಿ ಈ ಕಾಮಗಾರಿಗಳ ಸಮರ್ಪಕ ಅನುಷ್ಠಾನದ ಬಗ್ಗೆ ಪಾಲಿಕೆಯೊಂದಿಗೆ ಸಮನ್ವಯತೆ ಸಾಧಿಸಿಕೊಂಡು ಪ್ರಕ್ರಿಯೆಯನ್ನು ಮುಂದುವರಿಸುವ ಕುರಿತು ಪಾಲಿಕೆ, ಸ್ಮಾರ್ಟ್‌ಸಿಟಿ, ಕ್ವಿಮಿಫ್‌, ಗೈಲ್‌ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಭೆ ನಡೆದಿತ್ತು. ಈ ಸಭೆ ನಡೆದರೂ ಅಲ್ಲಿ ಕೈಗೊಂಡ ತೀರ್ಮಾನ ಮಾತ್ರ ಪಾಲನೆಯಾಗಿಲ್ಲ.

ಅರ್ಧ ಕಿ.ಮೀ., 4 ಕಡೆ ಕಾಂಕ್ರೀಟ್‌ ಅಗೆತ !
ಲಾಲ್‌ಬಾಗ್‌ನಿಂದ ಲೇಡಿಹಿಲ್‌ಗೆ ತೆರಳುವ ಅರ್ಧ ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಒಟ್ಟು 4 ಕಡೆಗಳಲ್ಲಿ ರಸ್ತೆ ಅಗೆಯಲಾಗುತ್ತಿದೆ. ಗೈಲ್‌ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ಒಂದೆಡೆ ಸಾಗುತ್ತಿದ್ದು, ದೊಡ್ಡ ಯಂತ್ರಗಳನ್ನು ರಸ್ತೆ ಬದಿ ನಿಲ್ಲಿಸಿ, ರಸ್ತೆಯ ಮಧ್ಯ ಭಾಗದಲ್ಲಿ ಕೆಲಸ ನಡೆಯುತ್ತಿದೆ. ಇದೇ ಕಾರಣಕ್ಕೆ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ.

ಅಧಿಕಾರಿಗಳಿಗೆ ಸೂಚನೆ
ಪಾಲಿಕೆ ವ್ಯಾಪ್ತಿಯೊಳಗೆ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಸಮರ್ಪಕ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಭೆ ನಡೆಸಿ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ. ಜಲಸಿರಿ, ಗೈಲ್‌ ಸಹಿತ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ನಗರದಲ್ಲಿ ಕಾಮಗಾರಿ ಆರಂಭಕ್ಕೂ ಮುನ್ನ ಪಾಲಿಕೆಯ ಸೂಚನೆ ಪಾಲಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ.
-ದಿವಾಕರ್‌ ಪಾಂಡೇಶ್ವರ, ಮೇಯರ್‌

ಸಮನ್ವಯ ಮುಖ್ಯ
ಕಾಮಗಾರಿ ನಡೆಸಬೇಕಾದರೆ ಸಮನ್ವಯ ಮುಖ್ಯ. ಆದರೆ ನಗರದಲ್ಲಿ ಆ ರೀತಿಯ ಪಾಲನೆ ಆಗುತ್ತಿಲ್ಲ. ಮೇಯರ್‌ ಅಧ್ಯಕ್ಷತೆಯಲ್ಲಿ ಎಲ್ಲ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕಾಮಗಾರಿ ನಡೆಸುವ ಬಗ್ಗೆ ಚರ್ಚೆ ನಡೆಸಬೇಕಿತ್ತು. ಆದರೆ ಅದು ಸಮರ್ಪ ಕವಾಗಿ ನಡೆಯಲಿಲ್ಲ.
-ಶಶಿಧರ ಹೆಗ್ಡೆ, ಮಾಜಿ ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next