Advertisement

ನಗರಸಭೆ: ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

04:04 PM Nov 09, 2021 | Team Udayavani |

ಚನ್ನಪಟ್ಟಣ: ತೀವ್ರ ಕುತೂಹಲ ಕೆರಳಿಸಿದ್ದ ನಗರಸಭೆ ನೂತನ ಅಧ್ಯಕ್ಷರಾಗಿ ಜೆಡಿಎಸ್‌ನಿಂದ 26ನೇ ವಾರ್ಡಿ ನಿಂದ ಆಯ್ಕೆಯಾಗಿದ್ದ ಸದಸ್ಯ ಪ್ರಶಾಂತ್‌ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ 19ನೇ ವಾರ್ಡಿನಿಂದ ಗೆಲುವು ಸಾಧಿಸಿದ್ದ ಸದಸ್ಯೆ ಹಸೀನಾ ಫರ್ಹಿನ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Advertisement

ದಳಕ್ಕೆ 13 ವರ್ಷಗಳ ಬಳಿಕ ಗದ್ದುಗೆ: ಹದಿಮೂರು ವರ್ಷಗಳ ನಂತರ ಜೆಡಿಎಸ್‌ ಪಕ್ಷಕ್ಕೆ ನಗರಸಭೆ ಚುಕ್ಕಾಣಿ ಸಿಕ್ಕಿದೆ. 2008ರಲ್ಲಿ ಜೆಡಿಎಸ್‌ನಿಂದ ಲಕ್ಷ್ಮಿ ಕೆಂಪಣ್ಣ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಂತರದ ದಿನಗಳಲ್ಲಿ ಜೆಡಿಎಸ್‌ಗೆ ಅಧಿಕಾರ ಹಿಡಿಯುವ ಸಂಭವಗಳಿದ್ದರೂ ಜೆಡಿಎಸ್‌ ಸದಸ್ಯರು ಇತರ ಪಕ್ಷಗಳ ಜತೆಗೆ ಕೈ ಜೋಡಿಸಿದ್ದರಿಂದ ಅಧಿಕಾರ ಕೈ ತಪ್ಪಿತ್ತು. ಪ್ರಸ್ತುತ 31ಸದಸ್ಯರ ಬಲದ ನಗರಸಭೆಯಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪ್ರಶಾಂತ್‌ ಹಾಗೂ ಫರ್ಹಿನ್‌ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಇಬ್ಬರ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಘೋಷಿಸಿದ್ದಾರೆ.

ನಾಮಪತ್ರ ಸಲ್ಲಿಸಲು ಹಿಂದೇಟು: ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷ 16 ಸ್ಥಾನ, ಬಿಜೆಪಿ 7 ಸ್ಥಾನ ಹಾಗೂ ಕಾಂಗ್ರೆಸ್‌ 7 ಮತ್ತು 1 ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದರು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆ ಜೆಡಿಎಸ್‌ ಗದ್ದುಗೆ ಮೇಲೆ ಹಿಡಿತ ಸ್ಥಾಪಿಸಿದೆ.

ಅಸಮಾಧಾನ, ಬಣ ರಾಜಕೀಯ: ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಸಮಾಧಾನ ಹಾಗೂ ಬಣ ರಾಜಕೀಯ ಸಾಕಷ್ಟು ಸದ್ದು ಮಾಡಿದವು. ಅಧ್ಯಕ್ಷ ಸ್ಥಾನಕ್ಕಾಗಿ ಪ್ರಶಾಂತ್‌ ಆಯ್ಕೆ ಮಾಡುವ ವಿಚಾರದಲ್ಲಿ 14ನೇ ವಾರ್ಡಿನ ಸದಸ್ಯ ಶ್ರೀನಿವಾಸಮೂರ್ತಿ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ತಮಗೇ ಅಧ್ಯಕ್ಷ ಸ್ಥಾನ ನೀಡುವಂತೆ ಪಟ್ಟುಹಿಡಿದಿದ್ದರು. ಆದರೆ, ಅಂತಿಮವಾಗಿ ಹೈಕಮಾಂಡ್‌ ಪ್ರಶಾಂತ್‌ ಹೆಸರಿಗೆ ಮುದ್ರೆ ಒತ್ತಿತು.

 ವರ್ಕೌಟ್‌ ಆಗದ ಲಾಬಿ: ಪ್ರಶಾಂತ್‌ ಅಧ್ಯಕ್ಷ ಸ್ಥಾನ ತಪ್ಪಿಸಲು ಜೆಡಿಎಸ್‌ನ ಇನ್ನೊಂದು ಬಣ ಸಾಕಷ್ಟು ಪ್ರಯತ್ನ ಮಾಡಿತ್ತು. ಈ ಸಂಬಂಧ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಸಾಕಷ್ಟು ಒತ್ತಡ ಹಾಕಿತ್ತು. ಪಕ್ಷಕ್ಕೆ ಕೊನೆ ಕ್ಷಣದಲ್ಲಿ ಬಂದು ಟಿಕೆಟ್‌ ಪಡೆದು ಗೆಲುವು ಸಾಧಿಸಿದ ಪ್ರಶಾಂತ್‌ಗಿಂತ ಪಕ್ಷ ಸಂಘಟನೆಗೆ ಹಿಂದಿ ನಿಂದಲೂ ಕೈಜೋಡಿಸಿದ್ದ ಶ್ರೀನಿವಾಸಮೂರ್ತಿ ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂಬುದು ಒಂದು ಬಣದ ಒತ್ತಾಯವಾಗಿತ್ತು. ಆದರೆ ಅದಕ್ಕೆ ಎಚ್‌.ಡಿ. ಕುಮಾರಸ್ವಾಮಿ ಮಣೆ ಹಾಕಲಿಲ್ಲ.

Advertisement

ಉಪಾಧ್ಯಕ್ಷ ಸ್ಥಾನಕ್ಕೂ ಪೈಪೋಟಿ: ಇನ್ನುಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿದ್ದ ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೂ ಸಾಕಷ್ಟು ಪೈಪೋಟಿ ಎದುರಾಗಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಸತೀಶ್‌ಬಾಬು, ರೇವಣ್ಣ, ಮಂಜುನಾಥ್‌, ರಫೀಕ್‌ ಸೇರಿದಂತೆ ಏಳು ಮಂದಿ ಪ್ರಮುಖರು ಆಕಾಂಕ್ಷಿಯಾಗಿದ್ದರು ಆದರೆ, ಅಂತಿ ಮ ವಾಗಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಫರ್ಹಿನ್‌ ಅವರಿಗೆ ಪಟ್ಟ ಕಟ್ಟುವ ಮೂಲಕ ವರಿಷ್ಠ ಎಚ್‌.ಡಿ.ಕುಮಾರಸ್ವಾಮಿ ಅಚ್ಚರಿ ಮೂಡಿಸಿದರು.

ಅವಕಾಶ ತಿರಸ್ಕರಿಸಿದ ಕಾಂಗ್ರೆಸ್‌: ನಗರಸಭೆ ಅಧ್ಯಕ್ಷಗಾದಿಯ ಮೇಲೆ ಕಣ್ಣಿರಿಸಿದ್ದ ಕಾಂಗ್ರೆಸ್‌ ಅಂತಿಮ ಕ್ಷಣ ದಲ್ಲಿ ಕೈಚೆಲ್ಲುವ ಮೂಲಕ ಜೆಡಿಎಸ್‌ ಅಧ್ಯಕ್ಷ ಸ್ಥಾನಕ್ಕೆ ಏರಲು ಅವಕಾಶ ಮಾಡಿಕೊಟ್ಟಿತು. ಕಾಂಗ್ರೆಸ್‌, ಬಿಜೆಪಿ ಸದ ಸ್ಯರ ಜೊತೆಗೂಡಿ ಅಧಿಕಾರ ಹಿಡಿಯಲು ಇನ್ನಿಲ್ಲದ ಪ್ರಯತ್ನ ನಡೆಸಿತ್ತು. ಕಾಂಗ್ರೆಸ್‌ನ 7, ಬಿಜೆಪಿ 7, ಸಂಸದರು, ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಅವರ ಮತಗಳು ಸೇರಿ 16 ಮತ ಪಡೆಯಬಹುದು ಎನ್ನುವ ಲೆಕ್ಕಾಚಾರವಿತ್ತು. ಇದರ ಜೊತೆಗೆ ಪಕ್ಷೇತರ ಸದಸ್ಯರನ್ನು ಸೆಳೆದು ಅಧಿಕಾರ ಹಿಡಿಯಲು ಮುಂದಾಗಿತ್ತು.ಆದರೆ, ಕೊನೆಯ ಕ್ಷಣದಲ್ಲಿ ಬಿಜೆಪಿ ಜೊತೆಗೆ ಹೊಂದಾಣಿಕೆ ಬೇಡ ಎನ್ನುವ ನಿರ್ಧಾರಕ್ಕೆ ಬದ್ಧವಾದ ಸಂಸದ ಡಿ.ಕೆ. ಸುರೇಶ್‌ ಜೆಡಿಎಸ್‌ ಅಧಿಕಾರ ಹಿಡಿಯಲು ರಹದಾರಿ ಮಾಡಿಕೊಟ್ಟರು.

ಅಭಿಮಾನಿಗಳಿಂದ ಅಭಿನಂದನೆ: ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಜೆಡಿಎಸ್‌ ಮುಖಂಡರು, ಬೆಂಬಲಿಗರು ಅಭಿನಂದಿಸಿದರು, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಅಧ್ಯಕ್ಷ ಪ್ರಶಾಂತ್‌ ಪಟ್ಟಣದ ಪೊಲೀಸ್‌ ಠಾಣೆ ಎದುರುಗಿನ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಅಭಿವೃದ್ಧಿಗೆ ಕೈಜೋಡಿಸುವೆ ಎಲ್ಲ ಸದಸ್ಯರ ಸಹಕಾರ ಪಡೆದು ನಗರಸಭೆ ಪ್ರಗತಿಪಥದತ್ತ ಕೊಂಡೊಯ್ಯುವ ಭರವಸೆ ನೀಡಿದರು. ಕಸದ ಸಮಸ್ಯೆ, ಮೂಲಭೂತ ಸೌಲಭ್ಯಕ್ಕೆ ಮೊದಲ ಆದ್ಯತೆ ನೀಡುವೆ. ಜನರು ನೇರವಾಗಿ ತಮ್ಮನ್ನು ಸಂಪರ್ಕಿಸಿ ಸಮಸ್ಯೆ ತಿಳಿಸಿದರೆ ಇತ್ಯರ್ಥಪಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ನಗರಸಭೆ ನೂತನ ಅಧ್ಯಕ್ಷ ಪ್ರಶಾಂತ್‌ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next