Advertisement

ಬಾಲಕನ ಚಿಕಿತ್ಸಾ ವೆಚ್ಚ ಭರಿಸಿದ ನಗರ ಸಭೆ

12:38 PM Apr 02, 2022 | Team Udayavani |

ಕನಕಪುರ: ಬೀದಿ ನಾಯಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕನ ಚಿಕಿತ್ಸೆಗೆ ನಗರ ಸಭೆ ವತಿಯಿಂದ ಸಹಾಯ ಧನವನ್ನು ನಗರ ಸಭೆ ಅಧ್ಯಕ್ಷ ವೆಂಕಟೇಶ್‌ ವಿತರಿಸಿದರು.

Advertisement

ನಗರದ ಬಾಣಂತ ಮಾರಮ್ಮ ಬಡಾವಣೆಯ ಸುದರ್ಶನ್‌ ಎಂಬ ಏಳು ವರ್ಷದ ಬಾಲಕನಿಗೆ ಕಳೆದ 26ರಂದು ನಾಲ್ಕೈದು ಬೀದಿ ನಾಯಿಗಳು ದಾಳಿ ಮಾಡಿ ಬಾಲಕನ ಮೊಣಕಾಲು ತೊಡೆಯ ಭಾಗದಲ್ಲಿ ಕಚ್ಚಿ ಗಂಭಿರವಾಗಿ ಗಾಯಗೊಳಿಸಿದ್ದವು. ಗಾಯಗೊಂಡ ಬಾಲಕನನ್ನು ದಯಾನಂದ ಸಾಗರ್‌ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲು ಮಾಡಲಾಗಿತ್ತು. ಬೀದಿ ನಾಯಿ ಸಂತತಿಗೆ ನಗರ ಸಭೆ ಅಧಿಕಾರಿಗಳು ಕಡಿವಾಣ ಹಾಕದಿರುವುದೇ ಈ ಘಟನೆಗೆ ಕಾರಣ ಎಂದು ನಗರದ ಸಾರ್ವಜನಿಕರು ನಗರ ಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಅದೇ ವಾರ್ಡಿನ ನಗರ ಸಭಾ ಸದಸ್ಯ ಸ್ಟುಡಿಯೋ ಚಂದ್ರು ಬೀದಿ ನಾಯಿ ಸಂತತಿಗೆ ಕಡಿವಾಣ ಹಾಕುವಂತೆ ನಗರ ಸಭೆ ಅಧ್ಯಕ್ಷರು ಮತ್ತು ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದರು. ಗಾಯಗೊಂಡಿರುವ ಬಾಲಕನ ಪೋಷಕರದ್ದು ಬಡ ಕುಟುಂಬ. ಬಾಲಕನ ಚಿಕಿತ್ಸಾ ವೆಚ್ಚವನ್ನು ನಗರ ಸಭೆಯಿಂದ ಭರಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು. ಬಾಲಕನ ಚಿಕಿತ್ಸಾ ವೆಚ್ಚ ಭರಿಸಲು ನಗರ ಸಭೆ ಅಧ್ಯಕ್ಷರು ಮತ್ತು ಅಧಿಕಾರಿಗಳು ತೀರ್ಮಾನಿಸಿ ಬೀದಿ ನಾಯಿ ದಾಳಿಗೆ ಒಳಗಾಗಿದ್ದ ಸುದರ್ಶನ್‌ ಪೋಷಕರಿಗೆ ನಗರ ಸಭೆ ಅಧ್ಯಕ್ಷ ವೆಂಕಟೇಶ್‌ 10 ಸಾವಿರ ರೂ. ಚೆಕ್‌ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ನಗರ ಸಭೆ ಅಧ್ಯಕ್ಷ ವೆಂಕಟೇಶ್‌, ಉಪಾಧ್ಯಕ್ಷ ರಾಮ ದುರ್ಗಯ್ಯ, ಪೌರಾಯುಕ್ತೆ ಶುಭಾ, ಸದಸ್ಯ ಸ್ಟೂಡಿಯೋ ಚಂದ್ರು ಹಾಗೂ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next