ಕನಕಪುರ: ನಗರಸಭೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಹಗ್ಗ ಜಗ್ಗಾಟದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿದ್ದ ಸಾರ್ವಜನಿಕ ಶೌಚಾಲಯಕ್ಕೆ ಬೀಗ ಜಡಿದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣ ವಾಗಿದೆ.
ನಗರದ ಎಂಜಿ ರಸ್ತೆಯ ಸಿಗ್ನಲ್ ಬಳಿ ಎಚ್‌ಎಎಲ್ ನಿಂದ ನಿರ್ಮಾಣವಾಗಿದ್ದ ಸಾರ್ವಜನಿಕ ಶೌಚಾಲಯಕ್ಕೆ ಗುತ್ತಿಗೆದಾರರು ಹಣ ಬಾಕಿ ಉಳಿಸಿಕೊಂಡಿದೆ ಎಂಬ ಕಾರಣಕ್ಕೆ ಬೀಗ ಜಡಿದಿದೆ.
ನಗರಸಭೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಹಗ್ಗ ಜಗ್ಗಾಟದಲ್ಲಿಸಾರ್ವಜನಿಕರು ಶೌಚ ಮತ್ತು ಮೂತ್ರ ವಿಸರ್ಜನೆಗೆ ಶೌಚಾಲಯ ಹುಡುಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ಎಂಜಿ ರಸ್ತೆಯ ಸಿಗ್ನಲ್ ಬಳಿ ಎಚ್‌ಎಎಲ್ ನಿಂದ ಸಾರ್ವಜನಿಕರ ಅನುಕೂಲಕ್ಕೆ ನಿರ್ಮಿಸಿದ ಸಾರ್ವಜನಿಕ ಶೌಚಾಲಯ ನಿರ್ವಹಣೆಯನ್ನು ವಿಶೇಷ ಚೇತನೆ ಚಂದ್ರಕಲಾ ಅವರು ಟೆಂಡರ್ ಮೂಲಕ ಪಡೆದಿದ್ದರು.ಶೌಚಾಲಯ ಹೆದ್ದಾರಿ ಬದಿಯಲ್ಲಿ ಇದ್ದಿದ್ದರಿಂದ ಸಾರ್ವಜನಿಕರಿಗೆ ಬಳಕೆಗೆ ಸುಲಭವಾಗಿತು ಆದರೆ ನಗರ ಸಭೆ ಅಧಿಕಾರಿಗಳು ಶೌಚಾಲಯಕ್ಕೆ ಬೀಗ ಜಡಿದಿದೆ.
ಡೆಪಾಸಿಟ್ ಹಣ ವಾಪಸ್ ಕೊಟ್ಟಿಲ್ಲ: ಕಳೆದ ಒಂದು ವರ್ಷದಿಂದ ಗುತ್ತಿಗೆದಾರರು ನಗರಸಭೆಗೆ ಹಣ ಪಾವತಿ ಮಾಡದ ಹಿನ್ನೆಲೆ ಶೌಚಾಲಯಕ್ಕೆ ಬೀಗ ಜಡಿದಿದ್ದೇವೆ ಎಂಬುದು ನಗರ ಸಭೆ ಆಧಿಕಾರಿಗಳ ವಾದ. ಆದರೆ ಗುತ್ತಿಗೆದಾರರು ಹೇಳುವುದೇ ಬೇರೆ. ನಾವು ಯಾವುದೇ ಹಣ ಬಾಕಿ ಉಳಿಸಿಕೊಂಡಿಲ್ಲ. ಮೊದಲ ಬಾರಿ ಟೆಂಡರ್ ಪಡೆದು 1.50 ಲಕ್ಷ ಡೆಪಾಸಿಟ್ ಹಣ ಕಟ್ಟಿದ್ದೆ. ಮೊದಲನೆ ಟೆಂಡರ್ ಅವಧಿ ಮುಗಿದಿದೆ. ನಾನು ಕಟ್ಟಿದ್ದ 1.50 ಲಕ್ಷ ಡೆಪಾಸಿಟ್ ಹಣವನ್ನು ನಗರ ಸಭೆ ಅಧಿಕಾರಿಗಳು ನಮಗೆ ವಾಪಸ್ ಕೊಟ್ಟಿಲ್ಲ ಎಂದು ದೂರಿದ್ದಾರೆ.
ಶೌಚಾಲಯದಿಂದ ಬರುವ ಆದಾಯಕ್ಕಿಂತಲೂ ನಿರ್ವಹಣೆ ವೆಚ್ಚವೇ ಹೆಚ್ಚಾಗಿದೆ. ಇದರಿಂದ ಸಾಕಷ್ಟು ನಷ್ಟ ಆಗಿದೆ. ನಾನು ದಿವ್ಯಾಂಗ. ನನ್ನ ಜೀವನ ನಿರ್ವಹಣೆಗಾಗಿ ಟೆಂಡರ್ ಹಣ ಕಡಿಮೆ ಮಾಡಿ ನನಗೆ ಕೊಡಬೇಕು ಎಂದು ನ್ಯಾಯಾಲಯದ ಮೊರೆ ಹೋಗಿರುವೆ. ಪ್ರಕರಣ ನ್ಯಾಯಾಲಯದಲ್ಲಿದೆ. ಈಗಿದ್ದರೂ ನಗರ ಸಭೆ ಅಧಿಕಾರಿಗಳು ಏಕಾಏಕಿ ನನ್ನನ್ನು ಹೊರಗೆ ಹಾಕಿ ಶೌಚಾಲಯಕ್ಕೆ ಬೀಗ ಜಡಿದಿದ್ದಾರೆ ಎಂಬುದು ಟೆಂಡರ್ ಪಡೆದಿದ್ದ ಚಂದ್ರಕಲಾ ಅವರ ವಾದ.
ನಗರ ಸಭೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಹಗ್ಗ ಜಗ್ಗಾಟದಲ್ಲಿ ಸಾರ್ವಜನಿಕರ ಬಳಕೆಗೆ ಅನುಕೂಲವಾಗಿದ್ದ ಶೌಚಾಲಯಕ್ಕೆ ಬೀಗ ಮುದ್ರೆ ಬಿದ್ದಿದೆ.