ಚನ್ನರಾಯಪಟ್ಟಣ: ಮುಖ್ಯಾಧಿಕಾರಿಗಳು ಪುರಸಭೆ ಆದಾಯ ಮೂಲ ಹೆಚ್ಚಿಸಲು ಮುಂದಾಗದೆ ತಮ್ಮ ವೈಯಕ್ತಿಕ ಲಾಭಕ್ಕೆ ಮುಂದಾಗಿದ್ದು, ಅಂಗಡಿ ಮಳಿಗೆಗಳನ್ನು ಹರಾಜು ಹಾಕದೇ, ಮಳಿಗೆದಾರರಿಂದ ಲಂಚ ಪಡೆಯುತ್ತಿದ್ದಾರೆ ಎಂದು ಸದಸ್ಯ ಪ್ರಕಾಶ್ ಆರೋಪಿಸಿದರು.
ಪಟ್ಟಣದ ಪುರಸಭಾಧ್ಯಕ್ಷ ಎಚ್.ಎನ್.ನವೀನ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದಅವರು, ಪುರಸಭೆ ಮಳಿಗೆ ಹರಾಜು ಮಾಡದೆ ನ್ಯಾಯಾಲಯದ ನೆಪವೊಡ್ಡಿ ಮಳಿಗೆದಾರರಿಂದ ಹಣವಸೂಲಿಗೆ ಮುಖ್ಯಾಧಿಕಾರಿ ಕುಮಾರ್ ಮುಂದಾಗಿದ್ದಾರೆ.
ಅಂಗಡಿ ಮಳಿಗೆಯನ್ನು ಹರಾಜು ಮಾಡುವಂತೆ ನ್ಯಾಯಾಲಯ ಹೇಳಿದ್ದರೂ ಸದಸ್ಯರಿಗೆ ತಪ್ಪು ಮಾಹಿತಿ ನೀಡಿ, 171, 154 ಹಾಗೂ 17ನೇ ನಂಬರ್ ಅಂಗಡಿ ಮಳಿಗೆಯನ್ನುಹರಾಜಿನಿಂದ ಕೈಬಿಟ್ಟಿದ್ದಾರೆ, ಅನೇಕ ಮಂದಿ ಬಾಡಿಗೆ ನೀಡದೆ ಇದ್ದರೂ ಕ್ರಮ ಕೈಗೊಂಡಿಲ್ಲ ಎಂದರು. ಇದಕ್ಕೆ ಕೋಪಗೊಂಡ ಅಧ್ಯಕ್ಷ ನವೀನ್, ಅಧಿಕಾರಿಗಳ ಬಗ್ಗೆ ಆರೋಪ ಮಾಡುವುದು ತರವಲ್ಲ, ಅವರು ಲಂಚ ಪಡೆದಿದ್ದರೆ ಸಭೆಗೆ ಸಾಕ್ಷಿ ಸಮೇತ ಸಾಬೀತು ಮಾಡಲಿ, ಸುಮ್ಮನೆ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ, ಯಾವ ಅಂಗಡಿಯವರುಬಾಡಿಗೆ ನೀಡಿಲ್ಲ ಅದನ್ನು ಬಾಗಿಲು ಹಾಕಲಾಗುತ್ತಿದೆ ಎಂದರು.
ಇದಕ್ಕೆ ಶಾಸಕ ಬಾಲಕೃಷ್ಣ ಧ್ವನಿಗೂಡಿಸಿ ದಾಖಲೆ ನೀಡಿದರೆ ಶಿಸ್ತುಕ್ರಮಕ್ಕೆ ಮುಂದಾಗಬಹುದು, ಇನ್ನು ಅಂಗಡಿ ಬಾಡಿಗೆ ವಿಷಯದಲ್ಲಿ ಕ್ರಮಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಸೂಚಿಸಿದರು.
ಖಾತೆ ಮಾಡಿಸಿಕೊಂಡು ಬಾಡಿಗೆ ಕೊಟ್ಟಿದ್ದಾರೆ: ಸದಸ್ಯ ಪ್ರಕಾಶ್ ಮಾತನಾಡಿ, ಪುರಸಭೆಗೆ ಸೇರಿದ ಗ್ರಾಮ ಠಾಣಾವನ್ನುಖಾಸಗಿ ವ್ಯಕ್ತಿ ತನ್ನ ಹೆಸರಿಗೆ ಖಾತೆ ಮಾಡಿಸಿಕೊಂಡು ಅನ್ಯರಿಗೆ ಬಾಡಿಗೆ ನೀಡಿದ್ದಾನೆ. ಮಾಸಿಕವಾಗಿ ಬಾಡಿಗೆ ಹಣ ವಸೂಲಿ ಮಾಡುತ್ತಿದ್ದಾನೆ. ಈ ಬಗ್ಗೆ ಚರ್ಚಿಸಲು ಅಕ್ರಮ ಖಾತೆವಿಷಯವನ್ನು ಸಭೆ ಅಜೆಂಡಾಕ್ಕೆ ತರುವಂತೆ ಅಧ್ಯಕ್ಷರಿಗೆ ತಿಳಿಸಿದ್ದರೂ ಇದನ್ನು ಕೈ ಬಿಟ್ಟಿದ್ದಾರೆ. ಇದನ್ನು ಗಮನಿಸಿದರೆ ಖಾತೆದಾರರ ಪರವಾಗಿ ಅಧ್ಯಕ್ಷರು ನಿಂತಿದ್ದಾರೆ ಎಂದು ಅನುಮಾನ ವ್ಯಕ್ತ ಪಡಿಸಿದರು.
ಆಡಿಟ್ ವರದಿ ನೀಡಲು ಸೂಚನೆ: ಸಭೆಯಲ್ಲಿ ವೆಚ್ಚದ ಬಗ್ಗೆ ಅನುಮೋದನೆ ಪಡೆಯುವ ಅಧಿಕಾರಿಗಳು, ಕಳೆದ ಎರಡು ಅವಧಿಯಿಂದ ಸಭೆಗೆ ಆಡಿಟ್ ವರದಿ ಮಂಡಿಸುತ್ತಿಲ್ಲ, ಇನ್ನುಸದಸ್ಯರಿಗೂ ವರದಿ ನೀಡುತ್ತಿಲ್ಲ, ಆದಾಯ ಸೋರಿಕೆ ಆಗಿರಬಹುದು, ಮುಂದೆ ಇದೇ ರೀತಿ ಆದರೆ, ಸಭೆಯಲ್ಲಿ ವೆಚ್ಚ ಮಾಡಿರುವುದಕ್ಕೆ ಅನುಮೋದನೆ ನೀಡುವುದಿಲ್ಲಎಂದಾಗ, ಶಾಸಕ ಬಾಲಕೃಷ್ಣ ಮಾತನಾಡಿ, ಅಧಿಕಾರಿಗಳುಈವರೆಗೆ ಪುರಸಭೆಯಲ್ಲಿ ವೆಚ್ಚ ಮಾಡಿರುವ ಬಗ್ಗೆ ಮಾಹಿತಿ ನೀಡಲು ಪ್ರತ್ಯೇಕ ಸಭೆ ಮಾಡೋಣ ಅಂದು ಆಡಿಟ್ ವರದಿ ನೀಡಬೇಕು ಎಂದು ಸಲಹೆ ನೀಡಿದರು.
ಕರವಸೂಲಿಗೆ ಮುಂದು: ಅಧ್ಯಕ್ಷ ನವೀನ್ ಸದಸ್ಯರ ಪ್ರಶ್ನೆಗೆ ಉತ್ತರಿಸಿ ಈಗಾಗಲೆ 2.65 ಕೋಟಿ ರೂ. ತೆರಿಗೆಸಂಗ್ರಹವಾಗಿದೆ, 50 ಲಕ್ಷ ರೂ. ನೀರಿನ ಕರ ವಸೂಲಿ ಆಗಿದೆ.ಬಾಡಿಗೆ ಹಣ ನೀಡದ ಮಳಿಗೆ ಬಾಗಿಲು ಹಾಕಲಾಗುತ್ತಿದೆ,ಇನ್ನು 500ಕ್ಕೂ ಹೆಚ್ಚು ಮಳಿಗೆಗಳಿಗೆ ಉದ್ಯಿಮೆ ಪರವಾನಗಿ ನೀಡಿದ್ದು ಅದರಿಂದಲೂ ಹಣ ಸಂಗ್ರಹವಾಗಿದೆ. 88 ಲಕ್ಷ ರೂ. ಮಳಿಗೆಯಿಂದ ಬಾಡಿಗೆ ವಸೂಲಿ ಮಾಡಲಾಗಿದೆ ಎಂದು ಸಭೆಗೆ ಗಮನಕ್ಕೆ ತಂದರು.
ಪುರಸಭೆ ಉಪಾಧ್ಯಕ್ಷ ಯೋಗೀಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಬನಶಂಕರಿ, ಮುಖ್ಯಾಧಿಕಾರಿ ಎಂ.ಕುಮಾರ್ ಇದ್ದರು.