Advertisement

ಪಾಲಿಕೆ ಬಜೆಟ್‌; ಸಾರ್ವಜನಿಕರ ಸಲಹಾ ಸಭೆ

12:08 PM Mar 07, 2020 | Suhan S |

ಹುಬ್ಬಳ್ಳಿ: ಮಹಾನಗರ ಪಾಲಿಕೆ ಆಯವ್ಯಯ ಮಂಡನೆ ಕೇವಲ ಸಂಪ್ರದಾಯವಾಗುವ ಬದಲು ಘೋಷಣೆಗಳನ್ನು ಕಾರ್ಯರೂಪಕ್ಕೆ ತರಬೇಕು. ಮಹಾನಗರ ಪಾಲಿಕೆ ವ್ಯಾಪ್ತಿಯ ಉದ್ಯಾನಗಳ ಅಭಿವೃದ್ಧಿಗೆ ಒತ್ತು ನೀಡಬೇಕು, ಹಿರಿಯ ನಾಗರಿಕರಿಗೆ ಸೌಲಭ್ಯ ಕಲ್ಪಿಸಬೇಕು. ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಬೇಕು. ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಬೇಕು.

Advertisement

ಮಹಾನಗರ ಪಾಲಿಕೆಯ 2020-21ನೇ ಸಾಲಿನ ಆಯವ್ಯಯ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ನೀಡಿದ ಸಲಹೆಗಳಿವು. ಪ್ರತಿ ಬಜೆಟ್‌ನಲ್ಲೂ ಸಾಕಷ್ಟು ಘೋಷಣೆ ಮಾಡಲಾಗುತ್ತದೆ. ಹೊಸ ಭರವಸೆಗಳನ್ನು ಈಡೇರಿಸಲಾಗುತ್ತದೆ. ಆದರೆ ಬಹುತೇಕ ಯೋಜನೆಗಳು ಕಾರ್ಯರೂಪಕ್ಕೆ ಬರುವುದಿಲ್ಲ. ಹಿಂದಿನ ಆಯವ್ಯಯದಲ್ಲಿ ಘೋಷಣೆ ಮಾಡಿದ ಹಾಗೂ ಪ್ರಗತಿಯಲ್ಲಿರುವ ಯೋಜನೆ ಪೂರ್ಣಗೊಳಿಸುವುದಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು ಎಂದು ಒಕ್ಕೊರಲಿನಿಂದ ಸಲಹೆ ನೀಡಿದರು.

72.97 ಕೋಟಿ ಕರ ಸಂಗ್ರಹ ಗುರಿ: ಆಸ್ತಿ ತೆರಿಗೆ ಸಮರ್ಪಕವಾಗಿ ಸಂಗ್ರಹಿಸುವ ನಿಟ್ಟಿನಲ್ಲಿ ಜಿಐಎಸ್‌ ಸರ್ವೇ ಆಗಬೇಕಿದೆ. ಈ ನಿಟ್ಟಿನಲ್ಲಿ ಈಗಾಗಲೇ 700 ಆಸ್ತಿ ಸರ್ವೇ ಮಾಡಿದ್ದು, ಇದರಲ್ಲಿ 35 ಆಸ್ತಿ ಕರ ವ್ಯಾಪ್ತಿಯಲ್ಲಿಲ್ಲ. 5000 ಆಸ್ತಿಗಳ ಸರ್ವೇ ಮಾಡಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಜಿಐಎಸ್‌ ಸರ್ವೇಗೆ ಅನುಮತಿ ಪಡೆಯಲಾಗುವುದು. ಪ್ರಸಕ್ತ ಸಾಲಿನಲ್ಲಿ 72.97 ಕೋಟಿ ರೂ. ಕರ ಸಂಗ್ರಹ ಗುರಿಯಿತ್ತು. ಈಗಾಗಲೇ 55.35 ಕೋಟಿ ರೂ. ಸಂಗ್ರಹ ಹಾಗೂ 10 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ ತಿಳಿಸಿದರು.

ಬಿಆರ್‌ಟಿಎಸ್‌ ಯೋಜನೆ ಹಂತದಲ್ಲಿ ಬಸ್‌ ಶೆಲ್ಟರ್‌ ತೆರವುಗೊಳಿಸಲಾಗಿತ್ತು. ಇಂತಹ ಸ್ಥಳ ಸೇರಿದಂತೆ ಅಗತ್ಯ ಸ್ಥಳಗಳಲ್ಲಿ ಶೆಲ್ಟರ್‌ ನಿರ್ಮಾಣಕ್ಕೆ ಖಾಸಗಿ ಸಂಘ-ಸಂಸ್ಥೆಗಳು ಮುಂದೆ ಬಂದಿವೆ. ಮಹಾನಗರದಲ್ಲಿರುವ ಕೆಲ ಸಂಸ್ಥೆ, ಕಂಪನಿ ಮುಖ್ಯಸ್ಥರಿಗೆ ಪತ್ರ ಬರೆದು ಬಸ್‌ ಶೆಲ್ಟರ್‌, ವೃತ್ತ ಅಭಿವೃದ್ಧಿಗೆ ಸಹಕಾರ ಕೇಳಲಾಗುವುದು. ಹೊಸೂರು ವೃತ್ತದಲ್ಲಿರುವ ಪಾಲಿಕೆ ಕಟ್ಟಡವಿರುವ ಸ್ಥಳದಲ್ಲಿ ಮಾರುಕಟ್ಟೆ ಕಟ್ಟಡ ನಿರ್ಮಿಸುವ ಕುರಿತು ಕೆಎಸ್‌ಎಸ್‌ಐಡಿಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.

ಪ್ರಮುಖರಾದ ರಾಘವೇಂದ್ರ ಮುರಗೋಡ, ವೀರಣ್ಣ ಕಾಡಪ್ಪನವರ, ಅಶೋಕ ಬೆಳ್ಳಿಗಟ್ಟಿ, ಡಾ| ಸುರೇಶ ಮೆಣಸಗಿ, ಸಂಗಿತಾ ಇಜಾರದ, ಚನ್ನಬಸಪ್ಪ ಧಾರವಾಡಶೆಟ್ಟರ, ಈಶ್ವರ ನಾಯ್ಕರ, ಸರಸ್ವತಿ ಮೆಹರವಾಡೆ, ಸುನಂದಾ ಜಡಿ ಇನ್ನಿತರಿದ್ದರು.

Advertisement

ಒತ್ತುವರಿ ತೆರವಿಗೆ ವಿಶೇಷ ಕಾರ್ಯಯೋಜನೆ : ಏಪ್ರೀಲ್‌ ಹಾಗೂ ಮೇ ತಿಂಗಳಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲಾಗುವುದು. ಇದಕ್ಕಾಗಿ ವಿಶೇಷ ಕಾರ್ಯಯೋಜನೆ ರೂಪಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ ಹೇಳಿದರು. ಸಾರ್ವಜನಿಕರಿಂದ ಸಲಹೆ ಪಡೆದ ನಂತರ ಮಾತನಾಡಿದ ಅವರು, ಮಹಾನಗರ ವ್ಯಾಪ್ತಿಯಲ್ಲಿ 421 ಉದ್ಯಾನವನಗಳಿದ್ದು, ಇದರಲ್ಲಿ 70 ಪಾಲಿಕೆಯಿಂದ ನಿರ್ವಹಣೆಯಾಗುತ್ತಿವೆ. 50 ಉದ್ಯಾನಗಳನ್ನು ತೋಟಗಾರಿಕೆ ಇಲಾಖೆಗೆ ವಹಿಸುವ ಚಿಂತನೆಯಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಉದ್ಯಾನದ ಅಭಿವೃದ್ಧಿಗೆ ಸಿಎಸ್‌ ಆರ್‌ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದ್ದು, ಇದಕ್ಕಾಗಿ 50 ಉದ್ಯಾನವನಗಳನ್ನು ಗುರುತಿಸಲಾಗಿದೆ. ವಾಕಿಂಗ್‌ ಪಾಥ್‌, ಮಕ್ಕಳ ಆಟಿಕೆ ಸಾಮಗ್ರಿ, ಫೆನಿಷಿಂಗ್‌ ಹಾಕಲಾಗುವುದು. ವೃತ್ತಗಳ ಸೌಂದಯೀìಕರಣಕ್ಕೆ ಖಾಸಗಿ ಸಂಘ-ಸಂಸ್ಥೆಗಳು ಮುಂದಾಗಿದ್ದು, ಅವರೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಬೀದಿದೀಪ ನಿರ್ವಹಣೆ  ಅವೈಜ್ಞಾನಿಕವಾಗಿದ್ದು, ಹೆಚ್ಚಿನ ಕೆಲಸಗಾರರನ್ನು ನೇಮಿಸಿ ಸಮಯ ನಿರ್ವಹಣೆಗೆ ಒತ್ತು ನೀಡಬೇಕು. ಗಣೇಶ ಮೂರ್ತಿ ವಿಸರ್ಜನಾ ಬಾವಿ ಅಭಿವೃದ್ಧಿಯಾಗಬೇಕು. ಹಿಂದಿನ ಬಜೆಟ್‌ನಲ್ಲೂ ಈ ಬಗ್ಗೆ ಪ್ರಸ್ತಾಪವಿದ್ದರೂ ಹಬ್ಬದ ಸಂದರ್ಭದಲ್ಲಿ ಮಾತ್ರ ಗಮನ ಹರಿಸಲಾಗುತ್ತಿದೆ. -ಅಮರೇಶ ಹಿಪ್ಪರಗಿ

ಬಿಬಿಎಂಪಿಯಲ್ಲಿ ಹಿರಿಯ ನಾಗರಿಕರಿಗಾಗಿ 3 ಕೋಟಿ ಮೀಸಲಿಡುತ್ತಿದ್ದು, ಇಲ್ಲಿ 10 ಲಕ್ಷ ರೂ. ಇಡಲಾಗುತ್ತಿದೆ. ಆದರೆ ಇದನ್ನು ಯಾವುದಕ್ಕೆ ಖರ್ಚು ಮಾಡಲಾಗುತ್ತಿದೆ ಎನ್ನುವ ಮಾಹಿತಿಯಿಲ್ಲ. ಈ ಬಾರಿ 50 ಲಕ್ಷ ರೂ. ಮೀಸಲಿಡಬೇಕು. ಉದ್ಯಾನವನಗಳನ್ನು ಅಭಿವೃದ್ಧಿಪಡಿಸಬೇಕು. ವಿಶ್ರಾಂತಿ ವ್ಯವಸ್ಥೆ ಮಾಡಿ, ದಿನಪತ್ರಿಕೆ ಹಾಗೂ ಕುಡಿವ ನೀರು ಒದಗಿಸಬೇಕು. -ಬಿ.ಎ. ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next