Advertisement

“ಈ ಬಾಲಸುಬ್ರಹ್ಮಣ್ಯ” ಸ್ವಾಮಿಗೆ ಮಂಚ್ ಚಾಕೋಲೇಟ್ ಅಂದ್ರೆ ಅಚ್ಚುಮೆಚ್ಚು!..ಏನಿದರ ಹಿನ್ನೆಲೆ?

06:21 PM Feb 24, 2023 | ನಾಗೇಂದ್ರ ತ್ರಾಸಿ |

ಭಾರತ ಹಲವು ವೈವಿಧ್ಯತೆಗಳಿಂದ ಕೂಡಿರುವ ದೇಶವಾಗಿದ್ದು, ಇಲ್ಲಿರುವ ದೇವರು, ದೈವಗಳಿಗೆ ಒಂದೊಂದು ರೀತಿಯ ಹರಕೆಯನ್ನು ನೀಡಲಾಗುತ್ತದೆ. ಭಾರತದಲ್ಲಿ ಹಿಂದೂ ದೇವರುಗಳಿಗೆ ಒಂದೊಂದು ರೀತಿಯ ನೈವೇದ್ಯಗಳು ಅಚ್ಚುಮೆಚ್ಚು. ಉದಾಹರಣೆಗೆ ಅಯ್ಯಪ್ಪಸ್ವಾಮಿಗೆ ತುಪ್ಪ, ಕೃಷ್ಣನಿಗೆ ಬೆಣ್ಣೆ, ಗಣಪತಿಗೆ ಕಡುಬು, ಲಡ್ಡು ನೈವೇದ್ಯ ಅಂದರೆ ಹೆಚ್ಚು ಪ್ರೀತಿ. ಆದರೆ ಕೇರಳದ ಅಳಪ್ಪುಳದ ಬಾಲಮುರುಗನ್ ದೇವರಿಗೆ “ಮಂಚ್” ಚಾಕೋಲೇಟ್ ಅತ್ಯಂತ ಪ್ರಿಯವಾದ ಹರಕೆಯಾಗಿದೆಯಂತೆ!

Advertisement

ಪುಟ್ಟ ಬಾಲಕನ ಹರಕೆಗೆ ಒಲಿದ ಬಾಲಮುರುಗನ್!

ಕೇರಳದ ಅಳಪ್ಪುಳದ ಚೆಮ್ಮೋತ್ ನ ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಾಲಯವೇ ಕಳೆದ ಆರು ವರ್ಷಗಳಿಂದ “ಮಂಚ್ ಮುರುಗನ್” ದೇವಾಲಯ ಎಂದೇ ಜನಪ್ರಿಯಗೊಂಡಿದೆ. ಚೆಮ್ಮೋತ್ ನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಕೆಲವು ವರ್ಷಗಳ ಹಿಂದೆ ಪುಟ್ಟ ಬಾಲಕನೊಬ್ಬ ಮಂಚ್ ಚಾಕೊಲೇಟ್ ಅನ್ನು ಬಾಲಮುರುಗನ್ ದೇವರಿಗೆ ಅರ್ಪಿಸಿದ ನಂತರ ಅದನ್ನು ಇಷ್ಟಪಟ್ಟಿದ್ದಾನೆ ಎಂಬುದನ್ನು ಗ್ರಹಿಸಲಾಗಿತ್ತು.

ಮಂಚ್ ಮುರುಗನ್ ಎಂಬ ಹೆಸರು ಪ್ರಚಲಿತಕ್ಕೆ ಬಂದಿದ್ದು ಹೇಗೆ?

ಚೆಮ್ಮೋತ್ ನ ಶ್ರೀಸುಬ್ರಹ್ಮಣ್ಯ ಸ್ವಾಮಿ(ಬಾಲಮುರುಗನ್) ದೇವಸ್ಥಾನಕ್ಕೆ ಮೊದಲು ಹಣ್ಣು, ಕಾಯಿ-ಹಂಪಲು, ದ್ರಾಕ್ಷಿ, ಗೋಡಂಬಿ ಸೇರಿದಂತೆ ಇನ್ನಿತರ ನೈವೇದ್ಯ ಅರ್ಪಿಸುತ್ತಿದ್ದರಂತೆ. ಆದರೆ ದೇವಾಲಯದ ಆಡಳಿತ ನಡೆಸುತ್ತಿರುವ ಅನೂಪ್ ಎ.ಚೆಮ್ಮೋತ್ ಅವರ ಹೇಳಿಕೆಯ ಪ್ರಕಾರ, ಕಳೆದ ಆರು ವರ್ಷಗಳ ಹಿಂದೆ ನಡೆದ ಒಂದು ಘಟನೆಯಿಂದ…ಈ ಮಂಚ್ ಮುರುಗನ್ ಹೆಸರು ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ ಎಂದು ಹೇಳುತ್ತಾರೆ.

Advertisement

ಸುಮಾರು ಆರು ವರ್ಷಗಳ ಹಿಂದೆ ಮುಸ್ಲಿಮ್ ಬಾಲಕನೊಬ್ಬ ಆಟವಾಡುತ್ತಿದ್ದಾಗ, ಒಂದು ಬಾರಿ ದೇವಾಲಯದ ಗಂಟೆಯನ್ನು ಬಾರಿಸಿದ್ದ. ಆದರೆ ಆತನ ಪೋಷಕರು ಬಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದರಂತೆ. ಕಾಕತಾಳೀಯ ಎಂಬಂತೆ ಆದೇ ದಿನ ರಾತ್ರಿ ಬಾಲಕನಿಗೆ ಅನಾರೋಗ್ಯ ಕಾಣಿಸಿಕೊಂಡು, ರಾತ್ರಿಯಿಡಿ ನಿದ್ದೆಯಲ್ಲಿ ಮುರುಗನ್ ಹೆಸರನ್ನು ಕನವರಿಸುತ್ತಿದ್ದ. ಮರುದಿನ ಆತನನ್ನು ಪೋಷಕರು ಬಾಲಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕರೆದುಕೊಂಡು ಬಂದು, ಅರ್ಚಕರ ಬಳಿ ವಿಷಯ ತಿಳಿಸಿದಾಗ, ದೇವರಿಗೆ ಏನಾದರು ಹರಕೆ ಕೊಡುವಂತೆ ಹೇಳಿದ್ದರು. ಆಗ ಪೋಷಕರು ಎಳ್ಳೆಣ್ಣೆ ಮತ್ತು ಹೂವು ಅರ್ಪಿಸುವುದಾಗಿ ತಿಳಿಸಿದ್ದು, ಅದಕ್ಕೆ ಬಾಲಕ ತನ್ನಲ್ಲಿದ್ದ ಮಂಚ್ ಚಾಕೋಲೇಟ್ ಅರ್ಪಿಸುವುದಾಗಿ ಹಠ ಹಿಡಿದುಬಿಟ್ಟಿದ್ದನಂತೆ.

ಕೊನೆಗೆ ಆತನ ಕೋರಿಕೆಯಂತೆ ಮಂಚ್ ಚಾಕೋಲೇಟ್ ಅನ್ನು ದೇವರಿಗೆ ಅರ್ಪಿಸಲಾಗಿತ್ತು. ಪವಾಡ ಎಂಬಂತೆ ಈ ಘಟನೆಯ ನಂತರ ಆತ ಗುಣಮುಖನಾಗಿಬಿಟ್ಟಿದ್ದ. ಈ ಮುಸ್ಲಿಮ್ ಬಾಲಕನ ವಿಷಯ ಊರೆಲ್ಲಾ ಹಬ್ಬತೊಡಗಿತ್ತು. ಹೀಗೆ ಬಾಲಮುರುಗನ್ ಪುಟ್ಟ ಬಾಲಕನಿಂದಾಗಿ ತನ್ನ ನೈವೇದ್ಯದಿಂದಾಗಿ “ಮಂಚ್ ಮುರುಗನ್” ಆಗಿ ಬದಲಾಗಿಬಿಟ್ಟಿದ್ದ!

ರಾಶಿ..ರಾಶಿ ಮಂಚ್ ಚಾಕೋಲೇಟ್ ಅರ್ಪಣೆ:

ಇದೀಗ ಕಳೆದ ಎಂಟು ವರ್ಷಗಳಿಂದ ಕೇರಳದ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರು ಬಾಕ್ಸ್ ಗಳಲ್ಲಿ ಮಂಚ್ ಚಾಕೋಲೇಟ್ ತಂದು ಬಾಲಮುರುಗನ್ ನಿಗೆ ಅರ್ಪಿಸುತ್ತಿದ್ದಾರಂತೆ. ಅಷ್ಟೇ ಅಲ್ಲ ಭಕ್ತಿಯ ಪರಾಕಾಷ್ಠೆ ಎಂಬಂತೆ ಕೆಲವು ಭಕ್ತರು ತಮ್ಮ ದೇಹದ ತೂಕಕ್ಕೆ ಸಮಾನವಾದ ಗಾತ್ರದ ಚಾಕೋಲೇಟ್ ಬಾರ್ ಗಳನ್ನು ಅರ್ಪಿಸುತ್ತಿದ್ದಾರಂತೆ. ಪರೀಕ್ಷಾ ಸಮಯದಲ್ಲಿ ಹೆಚ್ಚಾಗಿ ಮಕ್ಕಳು ಬಾಲಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿ ತಮ್ಮ ಇಷ್ಟದ ಚಾಕೋಲೇಟ್ ಅನ್ನು ಅರ್ಪಿಸುತ್ತಿದ್ದಾರೆ. ಹೀಗೆ ದೇವಾಲಯಕ್ಕೆ ಯಾವುದೇ ಜಾತಿ, ಧರ್ಮದ ಭೇದವಿಲ್ಲದೇ ಬಾಲಮುರುಗನ್ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಮಂಚ್ ಚಾಕೋಲೇಟ್ ಅನ್ನು ಪ್ರಸಾದವಾಗಿ ಹಂಚಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next