ಕೊಲಂಬೋ: ಭಾರತದ ಐಪಿಎಲ್ ಕೂಟದ ಮಾದರಿಯಲ್ಲಿ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಟಿ20 ಕೂಟ ಆಯೋಜನೆಗೆ ಸಿದ್ದತೆ ನಡೆಯುತ್ತಿದೆ. ಲಂಕಾ ಪ್ರೀಮಿಯರ್ ಲೀಗ್ ಹೆಸರಿನಲ್ಲಿ ಹೊಸ ಕೂಟ ನಡೆಯಲಿದ್ದು, ಭಾಗವಹಿಸುವ ಆಟಗಾರರ ಪಟ್ಟಿ ಸಿದ್ದವಾಗಿದೆ.
ಇದಕ್ಕಾಗಿ ವಿದೇಶದ ಆಟಗಾರರು ಸೇರಿ 5 ತಂಡಗಳು ಸುಮಾರು 150 ಆಟಗಾರರಿಗಾಗಿ ಹರಾಜು ನಡೆಸಲಿದೆ. ಇದರಲ್ಲಿ ಭಾರತದ ಮಾಜಿ ವೇಗದ ಬೌಲರ್, ಏಕದಿನ ವಿಶ್ವಕಪ್ ತಂಡದ ಸದಸ್ಯ ಮುನಾಫ್ ಪಟೇಲ್ ಎಲ್ ಪಿಎಲ್ ಕೂಟದಲ್ಲಿ ಭಾಗವಹಿಸುವುದು ಬಹುತೇಕ ನಿಶ್ಚಿತವಾಗಿದೆ.
ಪಟೇಲ್ ಅಲ್ಲದೆ ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಸ್ ಗೇಲ್, ಡೇರೆನ್ ಸಾಮಿ, ಡ್ಯಾರೆನ್ ಬ್ರಾವೋ, ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಅಫ್ರಿದಿ, ಬಾಂಗ್ಲಾದೇಶದ ಶಕೀಬ್ ಅಲ್ ಹಸನ್, ಇಂಗ್ಲೆಂಡ್ನ ರವಿ ಬೋಪಾರ, ನ್ಯೂಜಿಲೆಂಡ್ನ ಕಾಲಿನ್ ಮುನ್ರೊ ಮತ್ತು ದಕ್ಷಿಣ ಆಫ್ರಿಕಾದ ವೆರ್ನಾನ್ ಫಿಲಾಂಡರ್ ಮುಂತಾದ ಆಟಗಾರರು ಹರಾಜಿನಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಕ್ರಿಕೆಟಿಗರ ಭವಿಷ್ಯಕ್ಕೆ ಕುತ್ತು ತರಬಹುದೇ ಐಸಿಸಿ ನಿರ್ಧಾರ?
ಅಕ್ಟೋಬರ್ 1ರಂದು ಈ ಹರಾಜು ಪ್ರಕ್ರಿಯೆ ನಡೆಯಲಿದೆ. ನವೆಂಬರ್ 14ರಿಂದ ಡಿಸೆಂಬರ್ 6ರವರೆಗೆ ಎಲ್ ಪಿಎಲ್ ಕೂಟ ನಡೆಯಲಿದೆ. ಪ್ರತಿ ತಂಡದಲ್ಲಿ ಆರು ಅಂತಾರಾಷ್ಟ್ರೀಯ ಆಟಗಾರರಿಗೆ ಆಡಲು ಅವಕಾಶ ನೀಡಲಾಗಿದೆ.