Advertisement
ಹೌದು, ಯಾವುದೇ ಪ್ರಚಾರ ಬಯಸದೇ ಹಿರಿ ಜೀವಗಳ ಪಾಲನೆ-ಪೋಷಣೆಯಲ್ಲೇ ತನ್ನ ಪೂರ್ತಿ ಸಮಯ ಕಳೆಯುತ್ತಿದ್ದಾರೆ ಆಯಿಷಾ. ತಮ್ಮ ಮನೆ ಪಕ್ಕದಲ್ಲಿ ಅಳಿಯ ಹಾಗೂ ಪುತ್ರಿ ಖರೀದಿಸಿದ ಮನೆಯಲ್ಲಿ ಕಳೆದ 2 ವರ್ಷಗಳಿಂದ 7 ಮಂದಿ ಅನಾಥರನ್ನು ಸಲಹುತ್ತಿದ್ದಾರೆ. ವಾರಕ್ಕೊಮ್ಮೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ತಪಾಸಣೆ ಮಾಡಿಸುತ್ತಾರೆ. ಕೆಲವರು ಮಾನಸಿಕ ಸ್ತಿಮಿತ ಕಳೆದು ಕೊಂಡು ವಿಚಿತ್ರವಾಗಿ ವರ್ತಿಸುತ್ತಿದ್ದರೂ ಅವರನ್ನು ಅತ್ಯಂತ ತಾಳ್ಮೆ, ಜಾಣ್ಮೆಯಿಂದ ನಿಭಾಯಿಸುತ್ತಿದ್ದಾರೆ.
ಆಯಿಷಾ ಅವರ ಮಾನವೀಯ, ಸಾಮಾಜಿಕ ಕಾರ್ಯಕ್ಕೆ ಮತ್ತೂಂದು ಉದಾಹರಣೆ ವಾರಿಸುದಾರ ರಿಲ್ಲದ ಶವ ಅಂತ್ಯಸಂಸ್ಕಾರ ನೆರವೇರಿಸುವುದು. ಪೊಲೀಸ್ ಇಲಾಖಾ ಸಹಕಾರದೊಂದಿಗೆ ಬಡ, ಅನಾಥ, ಕೊಳೆತ ಸ್ಥಿತಿಯಲ್ಲಿದ್ದಂತಹ ಮೃತ ದೇಹಗಳನ್ನು ರುದ್ರಭೂಮಿಗೆ ಸಾಗಿಸಿ ಮುಕ್ತಿ ನೀಡುವ ಕಾರ್ಯವನ್ನು ಇವರು ಮಾಡಿದ್ದಾರೆ. ಆ್ಯಂಬುಲನ್ಸ್ ಸೇವೆ
ಕಾರ್ಕಳದ ಖಾಸಗಿ ಆಸ್ಪತ್ರೆಯೊಂದರಲ್ಲಿ 18 ವರ್ಷಗಳ ಕಾಲ ನರ್ಸ್ ಆಗಿ ದುಡಿದ ಆಯಿಷಾ ಕಾರ್ಕಳದಲ್ಲಿ ಆ್ಯಂಬುಲನ್ಸ್ ಕೊರತೆಯನ್ನು ಮನಗಂಡು 1998ರಲ್ಲಿ ಬ್ಯಾಂಕ್ ಸಾಲ ಪಡೆದು ಆ್ಯಂಬುಲನ್ಸ್ ಖರೀದಿಸಿದ್ದರು. ಇದೀಗ ಒಟ್ಟು 4 ಆ್ಯಂಬುಲನ್ಸ್ ಗಳನ್ನು ಇವರು ಹೊಂದಿದ್ದು, ಅವನ್ನೇ ಆದಾಯದ ಮೂಲವನ್ನಾಗಿಸಿದ್ದಾರೆ.
Related Articles
ಕನ್ನಡ, ಹಿಂದಿ, ತುಳು, ಉರ್ದು, ಮಲಯಾಳಿ, ಕೊಂಕಣಿ ಹೀಗೆ ಹಲವಾರು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ಆಯಿಷಾ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಜಾತಿ, ಧರ್ಮದ ಭೇದವಿಲ್ಲದೆ ತನ್ನ ಕುಟುಂಬ ವೆಂಬಂತೆ ಅಸಹಾಯಕರ ಲಾಲನೆ ಪಾಲನೆಯಲ್ಲಿ ತೊಡಗಿದ್ದಾರೆ.
Advertisement
ಪತಿಯ ಸಹಕಾರಪತಿ ಮಹಮ್ಮದ್ ನಾಸಿರ್ ಆಯಿಷಾ ಅವರ ಸೇವಾ ಕಾರ್ಯಕ್ಕೆ ಕೈ ಜೋಡಿಸುತ್ತಿದ್ದಾರೆ. ಮದುವೆಯಾಗಿ ಮುಂಬಯಿಯಲ್ಲಿರುವ ಹಿರಿ ಪುತ್ರಿ ಶೈನಾ, ಕಿರಿಯ ಪುತ್ರಿ ಪಂಸಿನ್ ಕೂಡ ಸಹಕಾರ ನೀಡುತ್ತಿದ್ದಾರೆ ಎನ್ನುತ್ತಾರೆ ಆಯಿಷಾ. ವೃದ್ಧಾಪ್ಯ ವೇತನ ದೊರೆತರೆ ಅನುಕೂಲ
ಈಗಾಗಲೇ 7 ಮಂದಿ ಅಸಹಾಯಕರು ಇಲ್ಲಿದ್ದು, ಮುಂದಿನ ದಿನಗಳಲ್ಲಿ ಇವರ ಸಂಖ್ಯೆ ಹೆಚ್ಚಾಗುವ ಸಂಭವವಿದೆ. ರಸ್ತೆಯಲ್ಲಿ ಅನಾಥರಾಗಿ ಅಲೆದಾಡುತ್ತಿದ್ದವರನ್ನೂ ಪೊಲೀಸರು ಇಲ್ಲಿಗೆ ತಂದೊಪ್ಪಿಸಿದ್ದಾರೆ. ಜೀವನ ನಿರ್ವಹಣೆಗೆ ಸರಕಾರದ ವತಿಯಿಂದ ಕನಿಷ್ಠ ಪಕ್ಷ ಇವರಿಗೆ ವೃದ್ಧಾಪ್ಯ ವೇತನ ದೊರೆತಲ್ಲಿ ಸಂಸ್ಥೆ ನಿರ್ವಹಣೆಗೆ ಅನುಕೂಲ ಎನ್ನುತ್ತಾರೆ ಆಯಿಷಾ ಅವರು. ಸರಕಾರ ಗುರುತಿಸಿ ಸಮ್ಮಾನಿಸಲಿ
ಆಯಿಷಾ ಅವರು ತನ್ನ ಸಮಾಜಪರ ಕಾರ್ಯ ಕ್ಕಾಗಿ ಎಂದೂ ಸರಕಾರ, ಸಂಘ-ಸಂಸ್ಥೆಗಳ ನೆರವು ಯಾಚಿಸಿದವರಲ್ಲ. ಸಮ್ಮಾನವನ್ನೂ ಸ್ವೀಕರಿಸಲು ಮುಂದಾಗುವವರಲ್ಲ. ಅವರ ಸೇವೆಯನ್ನು ಗುರುತಿಸಿ ಸರಕಾರ ಸೂಕ್ತ ಗೌರವ ನೀಡಬೇಕು. ಸಂಘ-ಸಂಸ್ಥೆಗಳು ನೆರವಾಗಬೇಕು.
-ಶಿವಾನಂದ ಪ್ರಭು,
ಸಾಮಾಜಿಕ ಕಾರ್ಯಕರ್ತ ಅಸಹಾಯಕರ ಸೇವೆಗೆ ಬಡತನ ಕಾಡಿಲ್ಲ
ನನ್ನ ಸಮಾಜ ಪರ ಸೇವೆಗೆ ಮೊದಲು ಬೆಂಬಲ ನೀಡಿದವರು ಡಾ| ಮಂಜುನಾಥ ಕಿಣಿ ಹಾಗೂ ಅವರ ಪತ್ನಿ ಡಾ| ಪ್ರತಿಭಾ ಕಿಣಿ. ಪ್ರಥಮ ಆ್ಯಂಬುಲೆನ್ಸ್ ಖರೀದಿ ವೇಳೆ ಬ್ಯಾಂಕ್ ಸಾಲ ದೊರೆಕಿಸಿಕೊಟ್ಟವರು ಅವರು. ಸಿರಿವಂತೆ ಅಲ್ಲದಿದ್ದರೂ ಅಸಹಾಯಕರ ಸೇವೆಗೆ ಬಡತನ ಕಾಡಿಲ್ಲ.
-ಆಯಿಷಾ, ಜರಿಗುಡ್ಡೆ, ಶ್ರೇಷ್ಠ ಕಾರ್ಯ
ಮಾನವೀಯತೆ, ಅಸಹಾಯಕರ ಕುರಿತಾದ ಕಾಳಜಿ ಹೊಂದಿರುವ ಆಯಿಷಾ ಅವರದು ಬಲು ಅಪರೂಪದ ಶ್ರೇಷ್ಠ ಕಾರ್ಯ. ಅವರ ನಿಸ್ವಾರ್ಥ ಸೇವಾ ಕಾರ್ಯ ಶ್ಲಾಘನೀಯವಾದುದು.
-ನಂಜಾ ನಾಯ್ಕ,
ಎಸ್‌ಐ, ನಗರ ಪೊಲೀಸ್ ಠಾಣೆ ಕಾರ್ಕಳ -ರಾಮಚಂದ್ರ ಬರೆಪ್ಪಾಡಿ