Advertisement

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದಲ್ಲಿ ಸಾಹಿತ್ಯ ಸಂವಾದ

04:34 PM Jul 28, 2017 | |

ಮುಂಬಯಿ: ಕನ್ನಡದ ಮಹಾಕವಿ ಕುಮಾರವ್ಯಾಸನದ್ದು ಮೇರುಪ್ರತಿಭೆ. ಅವನ ಗದುಗಿನ ಭಾರತ ಒಂದು ಅಪೂರ್ವ ಕೃತಿ. ಪ್ರತಿಭೆ ಪಾಂಡಿತ್ಯಕ್ಕೆ  ಅವನಿಗೆ ಸರಿಸಾಟಿಯಾದ ಕವಿಗಳು ಕಡಿಮೆ ಎಂದರೂ ತಪ್ಪಿಲ್ಲ. ಆತ ಒಬ್ಬ ಯುಗ ಪುರುಷ. ಇಂತಹ ಸ್ವತಂತ್ರ ದೃಷ್ಟಿಯ ಕವಿಗಳನ್ನು ನಾವು ತಿಳಿದುಕೊಳ್ಳಬೇಕು. ಇಂತಹ ಒಬ್ಬ ಮಹಾಕವಿಯ ಕಾವ್ಯವನ್ನು ಮರಾಠಿಗೆ ಅನುವಾದಿಸಿ ನಾನು ಜೀವನ ಸಾರ್ಥಕ ಗೊಳಿಸಿಕೊಂಡಿದ್ದೇನೆ ಎಂಬುದಾಗಿ ಹಿರಿಯ ಶಿಕ್ಷಣ ತಜ್ಞ, ರಸಾಯನ ಶಾಸ್ತ್ರ ಪ್ರಾಧ್ಯಾಪಕ, ಅನುವಾದಕ ಪ್ರೊ| ಜಿ. ಸಿ. ಕುಲಕರ್ಣಿ ಅವರು ಅಭಿಪ್ರಾಯಪಟ್ಟರು.

Advertisement

ಅವರು ಇತ್ತೀಚೆಗೆ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲದಲ್ಲಿ ನಡೆದ ಸಾಹಿತ್ಯ ಸಂವಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ನಾನು ಮತ್ತು ನನ್ನ ಅನುವಾದ ಕಾರ್ಯ ಎಂಬ ವಿಷಯದ ಕುರಿತು ಮಾತನಾಡಿ, ನನ್ನ ತಾಯಿ ಹಾಗೂ ದೊಡ್ಡಪ್ಪ ಅವರಿಗೆ ಕುಮಾರವ್ಯಾಸ ಮುಖೋದ^ತನಾಗಿದ್ದ. ಅವರು ದಿನಾಲು ಕುಮಾರವ್ಯಾಸನ ಕಾವ್ಯವನ್ನು ಪಾರಾಯಣ ಮಾಡುತ್ತಿದ್ದರು. ಮೂರುವರೆ ದಶಕಗಳ ಕಾಲ ದೂರದ ಪುಣೆಯಲ್ಲಿ ರಸಾಯನ ಶಾಸ್ತ್ರ ಪ್ರಾಧ್ಯಾಪನಕನಾಗಿ ದುಡಿದ ನನ್ನ ಮೇಲೆ ಕುಮಾರವ್ಯಾಸನ ಕಾವ್ಯ ವಿಶೇಷವಾದ ಪ್ರಭಾವ ಬೀರಿದೆ. ಮಹಾರಾಷ್ಟ್ರದ ನೂರಾರು ಮಿತ್ರರಿಗೆ ಮಹತ್ವದ ಕೊಡುಗೆಯೊಂದನ್ನು ನೀಡಬೇಕು ಎಂಬ ಉದ್ದೇಶದಿಂದ ಕುಮಾರವ್ಯಾಸನ ಕರ್ಣಾಟಕ ಭಾರತ ಕಥಾಮಂಜರಿಯನ್ನು ಮರಾಠಿಗೆ ಅನುವಾದಿಸಿ ಅದನ್ನು ಪ್ರಕಟಿಸಿ ಇಷ್ಟ ಮಿತ್ರರಿಗೆ ಹಂಚಿದ್ದೇನೆ. ಮರಾಠಿ ಮಿತ್ರರು ಕುಮಾರವ್ಯಾಸ ಮಹಾಕಾವ್ಯವನ್ನು ಓದಿ ಆಶ್ಚರ್ಯ, ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಕುಮಾರವ್ಯಾಸ ಮರಾಠಿ ಓದುಗರಿಗೆ ಸಮಗ್ರವಾಗಿ ಪರಿಚಯಿಸುವ ಪ್ರಯತ್ನ ನಾನು ಮಾಡಿರುವೆ. ಮರಾಠಿಯಲ್ಲಿ ಒಳ್ಳೆಯ ಸಾಹಿತ್ಯ ರಚನೆಯಾಗಿದೆ. ಒಳ್ಳೆಯ ಕವಿಗಳೂ ಇದ್ದಾರೆ. ಆದರೆ ಕುಮಾರವ್ಯಾಸನಿಗೆ ಸರಿಸಾಟಿಯಾದ ಒಬ್ಬ ಕವಿಯಿದ್ದರೆ  ಜ್ಞಾನೇಶ್ವರ ಮಾತ್ರ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ| ಜಿ. ಎನ್‌. ಉಪಾಧ್ಯ ಅವರು ಮಾತನಾಡಿ,  ಕನ್ನಡ ಮರಾಠಿ ಭಾಷೆಗಳ ನಡುವೆ ನಡೆದ ಆದಾನ ಪ್ರದಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಪ್ರೊ| ಕುಲಕರ್ಣಿ ಅವರು ಚಂದ್ರಾತ್ಮಜ ರುದ್ರನು ಅರ್ಧಕ್ಕೆ ಬಿಟ್ಟ ಕುಮಾರವ್ಯಾಸನ ಮಹಾಭಾರತವನ್ನು ಪೂರ್ಣಗೊಳಿಸಿ ಮರಾಠಿಗೆ ಅನುವಾದಿಸಿ ಮಹತ್ವದ ಸಾಧನೆಯನ್ನು ಮಾಡಿದ್ದಾರೆ. ಮರಾಠಿಯ ಜಾಯಮಾನಕ್ಕೆ ಒಗ್ಗುವ ಹಾಗೆ ಅವರು ಕುಮಾರವ್ಯಾಸನ ಕಾವ್ಯವನ್ನು ಮರಾಠಿಗೆ ಅನುವಾದಿಸಿರುವುದು ಅಭಿಮಾನಪಡುವ ಸಂಗತಿ. ಮರಾಠಿಯಿಂದ ದೊಡ್ಡ ಪ್ರಮಾಣದಲ್ಲಿ ಕನ್ನಡಕ್ಕೆ ಸಾಹಿತ್ಯ ಕೃತಿಗಳು ಹರಿದು ಬರುತ್ತಿವೆ. ಆದರೆ ಕನ್ನಡ ಕೃತಿಗಳು ಮರಾಠಿ ಭಾಷೆಗೆ ಸಣ್ಣ ಪ್ರಮಾಣದಲ್ಲಿ ಅನುವಾದವಾಗುತ್ತಿವೆ. ಈ ನಿಟ್ಟಿನಲ್ಲಿ ಕುಲಕರ್ಣಿಯವರ ಶ್ರಮ ಸಾರ್ಥಕವಾಗಿದೆ. ಕನ್ನಡದ ಮಹಾಕವಿಯೊಬ್ಬನನ್ನು ಮರಾಠಿ ವಾಙ್ಮಯಕ್ಕೆ  ಪರಿಚಯಿಸಿ ಆದರ್ಶಪ್ರಾಯವಾದ ಕಾರ್ಯವನ್ನು ಮಾಡಿದ್ದಾರೆ ಎಂದು ಕುಲಕರ್ಣಿ ಅವರ ಕಾರ್ಯವನ್ನು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಕನ್ನಡ ವಿಭಾಗದ ಸಂಶೋಧನ ವಿದ್ಯಾರ್ಥಿ ನಿರಂಜನ ಸಿ. ಎಸ್‌ ಅವರು ಸಿದ್ಧಗಂಗಾ ಮಠದ ಮಹಾ ವಿದ್ಯಾಲಯದ ಪ್ರಾಚಾರ್ಯರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಅವರನ್ನು ವಿಭಾಗದ ಪರವಾಗಿ ಗೌರವಿಸಲಾಯಿತು. ಅನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿಭಾಗದ ಸಂಶೋಧನ ಸಹಾಯಕರಾದ ಶಿವರಾಜ್‌ ಎಂ. ಜಿ, ಮಧುಸೂಧನ ರಾವ್‌,  ಶೀಲಾ ಎಚ್‌. ಆರ್‌, ಪತ್ರಕರ್ತ ಮಾಣಿಕ್‌ ರಾವ್‌, ವಿಭಾಗದ ವಿದ್ಯಾರ್ಥಿ ಮಿತ್ರರಾದ ಗಣಪತಿ ಮೊಗವೀರ, ಸುಧೀರ್‌ ದೇವಾಡಿಗ ಮೊದಲಾದವರು ಭಾಗವಹಿಸಿದ್ದರು.  ಕನ್ನಡ ವಿಭಾಗದ ಸಹ ಪ್ರಾಧ್ಯಾಪರಾದ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next