ಬಹುತೇಕ ಜನರಿಗೆ ದೇಶ, ವಿದೇಶಗಳ ವಿವಿಧ ಸ್ಥಳಗಳಿಗೆ ಭೇಟಿ ನೀಡುವುದು ಸಾಮಾನ್ಯ ಕನಸಾಗಿರುತ್ತದೆ. ಸಮುದ್ರ ಮಾರ್ಗ, ರಸ್ತೆ, ವಿಮಾನಗಳ ಮೂಲಕ ತಮ್ಮ ಪ್ರಯಾಣವನ್ನು ಮಾಡುವ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಳ್ಳುತ್ತಾರೆ. ಆದರೆ ಇಂದು ಕಾರು, ಹಡಗು, ಬಸ್, ರೈಲು ಪ್ರಯಾಣ ಹೊರತುಪಡಿಸಿ ಹಲವಾರು ಮಂದಿ ಬೈಕ್ ನಲ್ಲೇ ಜಗತ್ತು ಸುತ್ತುವ ಹವ್ಯಾಸ ಬೆಳೆಸಿಕೊಂಡಿರುವುದನ್ನು ಕಂಡಿದ್ದೇವೆ. ಅದಕ್ಕೊಂದು ಸೇರ್ಪಡೆ ಎಂಬಂತೆ ಮಹಾರಾಷ್ಟ್ರದ ಈ ಯುವಕ ಬೈಕ್ ಮೂಲಕ ಮುಂಬೈನಿಂದ ಲಂಡನ್ ಗೆ ಪ್ರಯಾಣ ಬೆಳೆಸಲು ಸಿದ್ಧತೆ ನಡೆಸಿದ್ದಾರೆ.
ಇದನ್ನೂ ಓದಿ:ಪ್ರವೀಣ್ ನೆಟ್ಟಾರು ಕೇಸ್ : ಸುಳ್ಯ ಪಿಎಫ್‌ಐ ಕಚೇರಿಯನ್ನು ಜಪ್ತಿ ಮಾಡಿದ ಎನ್‌ಐಎ
ಯೋಗೇಶ್ ಅಲೆಕಾರಿ ಎಂಬ ಅಲೆಮಾರಿ!
ಮಹಾರಾಷ್ಟ್ರದ ಯೋಗೇಶ್ ಅಲೆಕಾರಿ ಎಂಬ ಯುವಕ ಕಳೆದ ಆರೇಳು ವರ್ಷಗಳಿಂದ ಬೈಕ್ ಮೂಲಕವೇ ಹಲವಾರು ದೇಶಗಳನ್ನು ಸುತ್ತಿದ್ದಾರೆ. ಇದೀಗ ಮುಂಬೈನಿಂದ ಲಂಡನ್ ಗೆ ಪ್ರಯಾಣಿಸುವ ಕನಸನ್ನು ಬಿಚ್ಚಿಟ್ಟಿದ್ದಾರೆ. ಈಗಾಗಲೇ ಮಹಾರಾಷ್ಟ್ರದ ಗಾಡ್ಕಿಲೆ ಜಿಲ್ಲೆಯ ಯೋಗೇಶ್ ಬೈಕ್ ನಲ್ಲೇ ಸುಮಾರು ಒಂದು ಲಕ್ಷ ಕಿಲೋ ಮೀಟರ್ ನಷ್ಟು ಸುತ್ತಾಟ ನಡೆಸಿದ್ದಾರೆ. ಈಗ ಬೈಕ್ ಮೂಲಕ 24 ದೇಶಗಳನ್ನು ಹಾಗೂ ಮೂರು ಉಪಖಂಡಗಳಿಗೆ ಭೇಟಿ ನೀಡಲು ಸಿದ್ಧರಾಗಿದ್ದಾರೆ. ಮಹಾರಾಷ್ಟ್ರ ದಿನಾಚರಣೆಯ ಮೇ 1ರಂದು ಬೈಕ್ ಪ್ರಯಾಣ ಆರಂಭಿಸುವ ಯೋಗೇಶ್ 100 ದಿನಗಳಲ್ಲಿ 25,000 ಕಿಲೋ ಮೀಟರ್ ದೂರ ಕ್ರಮಿಸುವ ಗುರಿ ಹೊಂದಿದ್ದಾರೆ.
ಬೈಕ್ ನಲ್ಲಿ ಜಗತ್ತನ್ನು ಸುತ್ತಬೇಕೆಂಬುದು ಯೋಗೇಶ್ ಅವರ ಬಹುದೊಡ್ಡ ಕನಸಾಗಿದೆ. ಈಗಾಗಲೇ ಬೈಕ್ ನಲ್ಲೇ ಹಲವಾರು ದೇಶಗಳಿಗೆ ಭೇಟಿ ನೀಡಿರುವ ಯೋಗೇಶ್ ಗೆ ಇದು ನೂತನ ಪ್ರಯಾಣದ ಗುರಿಯಾಗಿದೆಯಂತೆ.
24 ದೇಶ, 100 ದಿನ…30 ಲಕ್ಷ ರೂಪಾಯಿ ಖರ್ಚು:
ಬೈಕ್ ನಲ್ಲೇ ವಿಶ್ವಪರ್ಯಟನೆಗೆ ಹೊರಟಿರುವ ಯೋಗೇಶ್ ಮುಂಬೈನಿಂದ ಹೊರಟು, 24 ದೇಶಗಳು ಹಾಗೂ ಮೂರು ಉಪಖಂಡಗಳಿಗೆ ಭೇಟಿ ನೀಡುವ ಗುರಿ ಹೊಂದಿದ್ದು, ಅಂದಾಜು 25,000 ಕಿಲೋ ಮೀಟರ್ ಪ್ರಯಾಣಿಸಲಿದ್ದಾರೆ. ಇದಕ್ಕಾಗಿ ಯೋಗೇಶ್ ಗೆ ತಗಲುವ ವೆಚ್ಚ ಬರೋಬ್ಬರಿ 30 ಲಕ್ಷ ರೂಪಾಯಿ. ಜೊತೆಗೆ ವಿವಿಧ ದೇಶಗಳ ವೀಸಾದ ಅಗತ್ಯವಿದೆ. ಬೈಕ್ ಅನ್ನು ಏರ್ ಕಾರ್ಗೋ ಮೂಲಕ ಕಳುಹಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
100 ದಿನಗಳ ಪ್ರಯಾಣ ಹೇಗಿರಲಿದೆ?
ಸಾವಿರಾರು ಕಿಲೋ ಮೀಟರ್ ದೂರ ಪ್ರಯಾಣಿಸುವ ವೇಳೆ ನಾವು ದೈಹಿಕವಾಗಿ ಸದೃಢವಾಗಿರಬೇಕಾಗುತ್ತದೆ ಎಂದು ಅಭಿಪ್ರಾಯ ಹಂಚಿಕೊಂಡಿರುವ ಯೋಗೇಶ್, ತಮ್ಮ 100 ದಿನಗಳ ಪ್ರಯಾಣದ ರೂಪರೇಷೆ ಬಗ್ಗೆ ತಿಳಿಸಿದ್ದಾರೆ. ವಿವಿಧ ದೇಶಗಳಿಗೆ ಭೇಟಿ ನೀಡುವ ವೇಳೆ ಅಲ್ಲಿನ ವಾತಾವರಣ, ಆಹಾರದ ಬಗ್ಗೆ ಎಚ್ಚರ ವಹಿಸಬೇಕಾಗುತ್ತದೆ. ಇದರ ಜೊತೆಗೆ ಹೆಚ್ಚಾಗಿ ಹಣ್ಣನ್ನು ತಿನ್ನಬೇಕು ಹಾಗೂ ಅಧಿಕ ನೀರನ್ನು ಕುಡಿಯುವ ಮೂಲಕ ನಮ್ಮ ದೇಶವನ್ನು ಸಮತೋಲನದಲ್ಲಿ ಇರಿಸಿಕೊಳ್ಳಲು ನೆರವಾಗುತ್ತದೆ.
ಯೋಗೇಶ್ ಈಗಾಗಲೇ ನೇಪಾಳ, ಭೂತಾನ್, ಮ್ಯಾನ್ಮಾರ್, ವಿಯೆಟ್ನಾಂ, ಕಾಂಬೋಡಿಯಾ ಸೇರಿದಂತೆ ವಿವಿಧ ದೇಶಗಳಿಗೆ ಬೈಕ್ ಮೂಲಕ ಭೇಟಿ ನೀಡಿದ್ದಾರೆ. ಮೇ 1ರಿಂದ ಆರಂಭಿಸಲಿರುವ ಬೈಕ್ ಪ್ರಯಾಣದಲ್ಲಿ ಏಷ್ಯಾ, ಯುರೋಪ್ ಮತ್ತು ಆಫ್ರಿಕಾ ಖಂಡಗಳಿಗೆ ಭೇಟಿ ನೀಡಲಿದ್ದಾರೆ. ಮುಂಬೈನ ಗೇಟ್ ವೇ ಆಫ್ ಇಂಡಿಯಾದಿಂದ ಯೋಗೇಶ್ ತಮ್ಮ ಸುದೀರ್ಘ ಪ್ರಯಾಣ ಆರಂಭಿಸಲಿದ್ದಾರೆ. ಮುಂಬೈನಿಂದ ನೇಪಾಳಕ್ಕೆ ಪ್ರಯಾಣಿಸಿ ಅಲ್ಲಿಂದ ವಿಮಾನದಲ್ಲಿ ಯುಎಇ(ಯುನೈಟೆಡ್ ಅರಬ್ ಎಮಿರೇಟ್ಸ್)ಗೆ ತೆರಳಿದ್ದಾರೆ. ಯುಎಇನಿಂದ ಬೈಕ್ ಮೂಲಕ ಇರಾನ್, ಟರ್ಕಿ, ಗ್ರೀಸ್, ಇಟಲಿ, ಆಸ್ಟ್ರಿಯಾ, ಜೆಕ್ ರಿಪಬ್ಲಿಕ್, ಜರ್ಮನಿ, ಲುಕ್ಸೆಂಬರ್ಗ್, ಬೆಲ್ಜಿಯಂ, ನೆದರ್ಲ್ಯಾಂಡ್ಸ್, ಫ್ರಾನ್ಸ್ ಗೆ ಭೇಟಿ ನೀಡಿ ಕೊನೆಗೆ ಯೋಗೇಶ್ ಲಂಡನ್ ತಲುಪಲಿದ್ದಾರೆ. ಲಂಡನ್ ನಿಂದ ಫ್ರಾನ್ಸ್ ಗೆ ಬಂದು, ಮೊರಾಕ್ಕೋ ಮತ್ತು ಸ್ಪೇನ್ ಗೆ ಪ್ರಯಾಣಿಸಲಿದ್ದಾರೆ. ಅಂತಿಮವಾಗಿ ಯೋಗೇಶ್ ಸ್ಪೇನ್ ನಿಂದ ವಿಮಾನದ ಮೂಲಕ ಭಾರತಕ್ಕೆ ಹಿಂದಿರುಗಲಿದ್ದಾರೆ.